ಬೊಮ್ಮನಕಟ್ಟೆ ವಾರ್ಡ್ ನಂಬರ್ 2ರಲ್ಲಿ ಸಮರ್ಪಕವಾದ ಯುಜಿಡಿ ವ್ಯವಸ್ಥೆ ಇಲ್ಲದೆ ಕಲುಷಿತ ನೀರು ರಸ್ತೆ ಹಾಗೂ ಮನೆ ಸೇರಿದಂತೆ ಎಲ್ಲೆಂದರಲ್ಲಿ ಸಂಗ್ರಹವಾಗುತ್ತಿದ್ದು, ಗಬ್ಬೆದ್ದು ನಾರುತ್ತಿದೆ. ಇದರಲ್ಲಿ ಕ್ರಿಮಿಕೀಟ ಅತಿಯಾದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ ಎಂಬುದು ಸ್ಥಳೀಯ ನಿವಾಸಿಗಳ ಕಳವಳವಾಗಿದೆ.
“ಮೂಲ ಸೌಕರ್ಯ ಒದಗಿಸುವಂತೆ ಬಹಳಷ್ಟು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್‌ಗಳ ಗಮನಕ್ಕೆ ತಂದು ಮನವಿ ನೀಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಮೂಲ ಸೌಕರ್ಯದಿಂದ ವಂಚಿತರಾಗಿರುವ ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇಲ್ಲೇ ಒಂದು ಕೆರೆ ಇದೆ. ಆ ಕೆರೆಯು 27 ಎಕರೆ ವಿಸ್ತೀರ್ಣದಲ್ಲಿದೆ. ಈ ಕೆರೆಯಲ್ಲೇ ಸ್ಮಶಾನ ಜಾಗ ಕೊಟ್ಟಿದ್ದಾರೆ. ಮಳೆಗಾಲದಲ್ಲಿ ಶವಸಂಸ್ಕಾರ ಮಾಡಲು ತುಂಬಾ ಹೈರಾಣಾಗುತ್ತೇವೆ” ಎಂದು ಹೇಳಿದರು.
ಬೊಮ್ಮನಕಟ್ಟೆ ನಿವಾಸಿ ಮಾಲತೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಒಂದು ಕುಟುಂಬದ ಸದಸ್ಯರೊಬ್ಬರು ಮೃತಪಟ್ಟ ಕಾರಣ ವಿಪರೀತ ಮಳೆಯಲ್ಲೇ ಕೆರೆಯಲ್ಲಿ ಶವಸಂಸ್ಕಾರ ಮಾಡಿದ್ದಾರೆ. ಆದರೆ ಸ್ಮಶಾನಕ್ಕೆ ಯಾವುದೇ ಶೆಡ್ ಅಥವಾ ಶೆಟರ್ ವ್ಯವಸ್ಥೆ, ಕಾಂಪೌಂಡ್ ವ್ಯವಸ್ಥೆ ಯಾವುದನ್ನೂ ನೀಡಿಲ್ಲ. ಕೆರೆಯಲ್ಲೇ ಶವ ಸಂಸ್ಕಾರ ಮಾಡಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.
“ಈ ಕೆರೆಯಲ್ಲೇ ಪೈಪ್ ಲೈನ್ ಹೋಗಿದೆ. ಮಲಿನವಾದ ಯುಜಿಡಿ ನೀರು ಬಂದು ಕೆರೆಯಲ್ಲಿ ಸೇರಿ ಕೆರೆಯ ನೀರಿನ ಬಣ್ಣವೇ ಬದಲಾಗಿದೆ. ಕರೆಯಲ್ಲಿನ ಪೈಪ್ ಹೊಡೆದರೆ ಕುಡಿಯುವ ನೀರು ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಕೆರೆಯ ಸ್ಮಶಾನ ಜಾಗದಲ್ಲಿ ಯಾವುದೇ ಸುರಕ್ಷಿತ ವ್ಯವಸ್ಥೆ ಕೂಡ ಮಾಡಿಲ್ಲ. ಇದು ಅಪಾಯದಿಂದ ಕೂಡಿದೆ” ಎಂದು ತಿಳಿಸಿದರು.
ಸ್ಥಳೀಯ ನಿವಾಸಿ ಶ್ರೀಕಾಂತ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೆರೆಯ ಸುತ್ತಮುತ್ತಲಿನಲ್ಲಿ ಯುಜಿಡಿ ಗುಂಡಿ ತೆಗೆದು ಕೆರೆಗೆ ಪೈಪ್‌ಲೈನ್ ಕಲ್ಪಿಸಿ ಹಾಗೆ ಬಿಟ್ಟಿದ್ದಾರೆ. ಇದರಿಂದ ಈ ಗುಂಡಿಯಲ್ಲಿ ನೀರು ಶೇಖರಣೆಯಾಗಿ ಹಲವು ಬಾರಿ ಸ್ಮಶಾನದ ರಸ್ತೆ ಕಾಣಿಸದೆ ಸ್ಮಶಾನಕ್ಕೆ ಶವಸಂಸ್ಕಾರಕ್ಕೆ ಬಂದವರು ಗುಂಡಿಗೆ ಬಿದ್ದಿರೋ ಘಟನೆಗಳು ನಡೆದಿವೆ” ಎಂದಿದ್ದಾರೆ.
ಸ್ಥಳೀಯ ನಿವಾಸಿ ಸುರೇಶ್ ಈ ದಿನ.ಕಾಮ್‌ನೊಂದಿಗೆ “ಪ್ರಾಣಿಗಳು, ದನ ಕರುಗಳು ಬಂದು ಬಿದ್ದಿದ್ದು, ಅವುಗಳು ಮೃತಪಟ್ಟಿರುವುದು ತೇಲಿಬಂದ ನಂತರವಷ್ಟೇ ತಿಳಿದುಬಂದಿದೆ. ಇಂತಹ ಘಟನೆಗಳು ನಡೆದಿರುವುದು ವಿಷಾದದ ಸಂಗತಿ. ಇಲ್ಲಿ ಸುತ್ತಮುತ್ತಲಿನ ಹಲವು ಲೇಔಟ್‌ನ ಮಲಿನವಾದ ಯುಜಿಡಿ ನೀರನ್ನೂ ಈ ಕೆರೆಗೆ ಹರಿಯ ಬಿಟ್ಟಿದ್ದಾರೆ. ಇದರಿಂದ ವಿಪರೀತ ಸೊಳ್ಳೆ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳು, ಸ್ಥಳೀಯರು ಅನಾರೋಗ್ಯದಿಂದ ಬಳಲುವಂತ ಪರಿಸ್ಥಿತಿ ಎದುರಾಗಿದೆ” ಎಂದು ತಿಳಿಸಿದರು.
“ನೀರು ಹರಿಯುವ ಕಡೆ ಯುಜಿಡಿ ಪೈಪ್‌ಲೈನ್ ವ್ಯವಸ್ಥೆ ಮಾಡಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ನಮಗೆ ಯಾರೂ ಸ್ಪಂದಿಸುತ್ತಿಲ್ಲ” ಎಂದು ಅವಲತ್ತುಕೊಂಡಿದ್ದಾರೆ.
ಇದರ ಕುರಿತು ಮಾಹಿತಿ ಪಡೆಯಲು ಕರ್ನಾಟಕ ಜಲ ಮಂಡಳಿಯ ಎಇಇ(AEE) ಮಿಥುನ್ ಅವರನ್ನು ನಮ್ಮ ಈ ದಿನ.ಕಾಮ್ ಸಂಪರ್ಕಿಸಿದಾಗ ಮಾತನಾಡಿ, “ನಾವು ಕರ್ನಾಟಕ ಜಲ ಮಂಡಳಿ ಹಾಗಾಗಿ ಏನೇ ಮೂಲಸೌಕರ್ಯ ಕೊರತೆ ಇದ್ದರೂ ಕೂಡಾ ಅದಕ್ಕೆ ಮಹಾನಗರ ಪಾಲಿಕೆ ಸ್ಪಂದಿಸಬೇಕು. ನಾವು ಏನೇ ಕೆಲಸ ಮಾಡುವುದಾದರು ನಮ್ಮ ಬಳಿ ಅನುದಾನ ಇರುವುದಿಲ್ಲ. ಪುನಃ ನಾವು ಮಹಾನಗರ ಪಾಲಿಕೆಗೆ ತಿಳಿಸಬೇಕು. ಮಹಾನಗರ ಪಾಲಿಕೆ ವತಿಯಿಂದ ನಮಗೆ ಯಾವುದೇ ಯುಜಿಡಿಯ ಎಸ್ಟಿಮೇಟ್ ತಯಾರಿ ಮಾಡುವಂತೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ನಾವು ನೇರವಾಗಿ ಹೊಣೆಗಾರರಾಗುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.
“ಪಾಲಿಕೆಯಲ್ಲಿ ಅನುದಾನ ಇರುತ್ತದೆ. ಮಹಾನಗರ ಪಾಲಿಕೆಯ ಸಂಬಂಧಪಟ್ಟ ಎಂಜಿನಿಯರ್‌ಗೆ ದೂರು ಬಂದ ನಂತರ ಅವರು ಆ ಅನುದಾನವನ್ನು ಕೊಡಬೇಕು, ಇಲ್ಲವಾದರೆ ಎಸ್ಟಿಮೇಟ್ ಮಾಡಿಕೊಡಿ ಎಂದು ತಿಳಿಸಿದರೆ ನಾವು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿ ಎಸ್ಟಿಮೇಟ್ ತಯಾರಿಸಿ ಕೊಡಬಹುದು. ಎಸ್ಟಿಮೇಟ್ ಅನ್ನು ಮಹಾನಗರ ಪಾಲಿಕೆಗೆ ಸಬ್‌ಮಿಟ್ ಮಾಡಿದರೆ ಮಹಾನಗರ ಪಾಲಿಕೆಯವರು ಟೆಂಡರ್ ಕರೆದು ಮೂಲಸೌಕರ್ಯ ಕಲ್ಪಿಸಿಕೊಡಬಹುದು. ಹಾಗೆಯೇ ಮೂಲಸೌಕರ್ಯದ ಕೊರತೆ ಕುರಿತು ನನಗೆ ಸ್ಥಳೀಯರಿಂದ ಯಾವುದೇ ದೂರು ಬಂದಿಲ್ಲ” ಎಂದರು.
“ಅಧೀಕ್ಷಕ ಎಂಜಿನಿಯರ್ ಅಥವಾ ಉಪ ಆಯುಕ್ತರಿಗೆ ಒಂದು ರೆಪ್ರೆಸೆಂಟೇಷನ್ ಕೊಟ್ಟರೆ ಖಂಡಿತವಾಗಿಯೂ ನಾಳೆ ಬೆಳಿಗ್ಗೆಯೇ ಸ್ಥಳ ಪರಿಶೀಲನೆ ಮಾಡಿ, ಏನು ತೊಂದರೆಯಾಗಿದೆ ಎಂಬುದನ್ನು ಗಮನಿಸಿ ಕೂಡಲೇ ರಿಪೋರ್ಟ್ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯ ಅಧಿಕಾರಿ ಸೆಂತಿಯಾ ಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಈ ದಿನ.ಕಾಮ್‌ನೊಂದಿಗೆ ಪ್ರತಿಕ್ರಿಯಿಸಿದ್ದು, “ನಾನು ಬಂದು ಕೇವಲ ಎರಡು ತಿಂಗಳುಗಳಾಗಿದೆ. ಹಾಗೆಯೇ ಕೆಲವಷ್ಟು ಭಾಗ ನಮ್ಮ ವ್ಯಾಪ್ತಿಯಲ್ಲಿ ಬರುತ್ತೆ. ಇನ್ನಷ್ಟು ಭಾಗ ಬೇರೆ ಅಧಿಕಾರಿ ಅಂದರೆ ಬೊಮ್ಮನಕಟ್ಟೆಯ ವಾರ್ಡಿನ 1 ಮತ್ತು 2 ಇದರಲ್ಲಿ ಬರುತ್ತದೆ. ಹಾಗಾಗಿ ಮತ್ತೊಬ್ಬರ ಅಧಿಕಾರಿಗಳು ಹಾಗಾಗಿ ನಾಳೆಯ ದಿವಸ ಅಂದರೆ ಶನಿವಾರ 15 ಜೂನ್ 2024ರಂದು ನಾನು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ಫೋನ್ ಸಂಪರ್ಕಕ್ಕೆ ಲಭ್ಯವಾಗಿದ್ದು, “ಶಿವಮೊಗ್ಗ ಪಟ್ಟಣದಲ್ಲಿ ಯುಜಿಡಿ ಸಮಗ್ರವಾಗಿ ಕ್ರಮ ಕೈಗೊಳ್ಳಲು ಕರ್ನಾಟಕ ಒಳ ಚರಂಡಿ ಮಂಡಳಿ ಅವರು ಸೆಪರೇಟ್ ಎಸ್ಟಿಮೇಟ್ ಮಾಡಿ ಅವರು ನೋಡಿಕೊಳ್ಳುತ್ತಾರೆ. ಇದೆಲ್ಲ ಸರಿಪಡಿಸಿಕೊಡಲು 150ರಿಂದ 200 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ನಾವೂ ಕೂಡಾ ಎಲ್ಲೆಲ್ಲಿ ಏನೇನು ಸಮಸ್ಯೆ ಇದೆ ಅಲ್ಲೆಲ್ಲಾ ಸರಿ ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದೇವೆ. ಅವೆಲ್ಲ ಕಾಲಾನುಕ್ರಮ ಟೆಂಡರ್ ಅಪ್ರೂವಲ್ ಆದಾಗ ನಡೆದುಕೊಳ್ಳುತ್ತ ಹೋಗತ್ತೆ. ಎಮರ್ಜೆನ್ಸಿಯಲ್ಲಿ ಶಾರ್ಟ್ ಟರ್ಮ್‌ನಲ್ಲಿ ಅಂದರೆ 3 ದಿನ, ವಾರ, 15 ದಿನ, 1 ತಿಂಗಳು ಏನಾದರೂ ಪರಿಹಾರ ಮಾಡಲು ಹೀಗೆ ಮಾಡಿದರೆ ಸರಿಯಾಗುತ್ತೆ ಎಂಬ ಪರಿಹಾರ ನಮಗೆ ತಿಳಿಸಿದರೆ ಅವಾಗ ನಾವು ಅದನ್ನು ಬಗೆಹರಿಸುತ್ತೇವೆ” ಎಂದು ತಿಳಿಸದರು.
“ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕು. ಇಡೀ ಶಿವಮೊಗ್ಗದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲು ₹700 ಕೋಟಿ ಬೇಕಾಗತ್ತದೆಂದು ಹೇಳಿದ್ದರು. ಅಷ್ಟೆಲ್ಲ ಆಗುವುದಿಲ್ಲವೆಂದು ತಿಳಿಸಿದಕ್ಕೆ ಕೊನೆಗೆ ₹250 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಬಳಿಕ ₹150 ಕೋಟಿಗೆ ಇಳಿಸಿ ಪ್ರಸ್ತಾವನೆ ಸರ್ಕಾರದಲ್ಲಿಯೇ ಇದೆ. ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ” ಎಂದು ಹೇಳಿದರು.
“ಕೆರೆಯಲ್ಲಿರುವ ಸ್ಮಶಾನ ಜಾಗಕ್ಕೆ ಯಾವುದೇ ವ್ಯವಸ್ಥೆ ಇಲ್ಲವೆಂಬ ಸಮಸ್ಯೆ ನಮ್ಮ ಗಮನಕ್ಕೆ ಇದೆ. ಮೂರು ದಿನಗಳ ಹಿಂದೆ ಮಳೆಯಲ್ಲೇ ಶವಸಂಸ್ಕಾರ ಮಾಡಿರುವ ವಿಷಯ ನಮ್ಮ ಗಮನದಲ್ಲಿದೆ. ಮೊದಲು ಆ ಜಾಗದ ಸರ್ವೇ ಆಗಬೇಕು. ಸದ್ಯಕ್ಕೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸುವ ಒಂದು ವ್ಯವಸ್ಥೆ ಮಾಡಬೇಕು. ಎರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ : ಸಚಿವ ಶರಣಪ್ರಕಾಶ ಪಾಟೀಲ್
“ಸೊಳ್ಳೆಗಳ ನಿಯಂತ್ರಣಕ್ಕೆ ಫಾಗ್ ಸಿಂಪಡಿಸುವ ಕೆಲಸ ಮಾಡಿಸುತ್ತೇನೆ. ತಕ್ಷಣದಿಂದ ಎರಡ್ಮೂರು ಬಾರಿ ಫಾಗಿಂಗ್ ಮಾಡಿಸುವ ಕೆಲಸ ನೋಡಿಕೊಳ್ಳುತ್ತೇನೆ. ಸ್ಮಶಾನ ಜಾಗದಲ್ಲಿ ತಾತ್ಕಾಲಿಕ ಶೆಲ್ಟರ್ ಮತ್ತು ಸಾಧ್ಯವಾದರೆ ಕಾಂಪೌಂಡ್ ಹಾಕಿಸುವ ವ್ಯವಸ್ಥೆ ಮಾಡಿಸುವ ಪ್ಲಾನ್ ಮಾಡಿಕೊಳ್ಳುತ್ತಾ ಇದ್ದೇವೆ. ಹಾಗೆಯೇ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ವಿಪರೀತ ಸೊಳ್ಳೆಗಳ ಉತ್ಪತ್ತಿಯಾಗಿದ್ದು, ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ಕಾಯಿಲೆ ಜಾಸ್ತಿಯಾಗುತ್ತಿರುವ ಕಾರಣ ಶಿವಮೊಗ್ಗದಲ್ಲಿ ಫಾಗಿಂಗ್ ಮಾಡಿಸುತ್ತೇನೆ” ಎಂದು ಭರವಸೆ ನೀಡಿದ್ದರು.
“ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಸೆಂತೀಯ ಸಿ ಹಾಗೂ ರಜಿನಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸಮಸ್ಯೆ ಬಗೆಹರಿಸುವಂತಹ ಭರವಸೆ ನೀಡಿರುವುದಾಗಿ ಹೇಳಿದ್ದಾರೆ” ಎಂದು ಸ್ಥಳೀಯ ನಿವಾಸಿ ಮಾಲತೇಶ್ ಮಾಹಿತಿ ನೀಡಿದರು.
