ಜುಲೈ ಎರಡನೇ ವಾರದಲ್ಲಿ ತೆಲಂಗಾಣ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಿದ್ದತೆ ನಡೆಸುತ್ತಿದೆ. ಇದಕ್ಕೂ ಮುನ್ನ 12 ಬಿಆರ್‌ಎಸ್ ಶಾಸಕರು ಕಾಂಗ್ರೆಸ್‌ಗೆ ಪಕ್ಷಾಂತರವಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೂ ಮುನ್ನ ಮೂವರು ಬಿಆರ್‌ಎಸ್ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದ ಆಡಳಿತಾರೂಢ ಕಾಂಗ್ರೆಸ್, ಇದೀಗ 12 ಶಾಸಕರ ಜೊತೆ ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದ 17 ಸ್ಥಾನಗಳ ಪೈಕಿ ಎಂಟು ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯಿಂದ ಬೆದರಿಕೆ ಇದೆ. ಅವರು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ. ಅಲ್ಲದೆ, ಮಾಜಿ ಸಚಿವರು ಸೇರಿದಂತೆ ಬಿಆರ್‌ಎಸ್‌ನ ಕೆಲವು ಶಾಸಕರು ತಮ್ಮ ವ್ಯಾಪಾರ-ವಹಿವಾಟುಗಳನ್ನು ರಕ್ಷಿಸಲು ಮತ್ತು ಕೇಂದ್ರೀಯ ಸಂಸ್ಥೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಬಿಜೆಪಿಗೆ ಸೇರುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಈ ನಡುವೆ, ಕಾಂಗ್ರೆಸ್ ಆಪರೇಷನ್ ಆಕರ್ಷ್‌ಅನ್ನು ಆರಂಭಿಸಿದೆ ಎನ್ನಲಾಗಿದೆ. ದೆ.
ಬಿಆರ್‌ಎಸ್ ವರಿಷ್ಠ ಕೆ ಚಂದ್ರಶೇಖರ್ ರಾವ್ ಅವರ ನಿರ್ದೇಶನದಂತೆ ಪ್ರಮುಖ ಬಿಆರ್‌ಎಸ್ ನಾಯಕರು ತಮ್ಮ ಶಾಸಕರ ನಿವಾಸಗಳಿಗೆ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಈವರೆಗೆ, ನಾಲ್ವರು ಶಾಸಕರೊಂದಿಗೆ ಮಾತನಾಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಆರ್‌ಎಸ್ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಶಾಸಕರು ಕಳೆದ 10 ವರ್ಷಗಳಿಂದ ತಮ್ಮ ಕ್ಷೇತ್ರಗಳಿಗೆ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆದಿಲ್ಲ ಎಂದು ಪ್ರತಿಕ್ರಿಯಸಿದ್ದಾರೆ ಎಂದು ವರದಿಯಾಗಿದೆ.
ಕೆಸಿಆರ್ ಕ್ಯಾಬಿನೆಟ್‌ನಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಹಿರಿಯ ಬಿಆರ್‌ಎಸ್ ಶಾಸಕರೊಬ್ಬರು, ಪಕ್ಷದ ನಾಯಕತ್ವವು ಅವರ ಬೆಂಬಲಿಗರಿಗೆ ಯಾವುದೇ ನೆರವು ನೀಡಿಲ್ಲ. ಹೀಗಾಗಿ, ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಸಿಎಂ ಎ ರೇವಂತ್ ರೆಡ್ಡಿ ಅವರ ಆಪ್ತರಾಗಿರುವ ಪಕ್ಷದ ಮುಖಂಡರೊಬ್ಬರು ಬಿಆರ್‌ಎಸ್ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದಿತ್ತು. ಬಿಆರ್‌ಎಸ್ ಶಾಸಕರೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಉಪಚುನಾವಣೆಯಲ್ಲಿ ಆ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಪಾಲಿಗೆ ಪಡೆದುಕೊಂಡಿತು. ಮೂವರು ಶಾಸಕರು ಈಗಾಗಲೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರೆ, ಇನ್ನೂ 12 ಮಂದಿ ಶೀಘ್ರದಲ್ಲೇ ಸೇರುವ ಸಾಧ್ಯತೆಯಿದೆ. ಪಕ್ಷಾಂತರಿಗಳ ಸಂಖ್ಯೆ ಒಟ್ಟು 15ಕ್ಕೆ ಏರಿಕೆಯಾಗಲಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ನಿಯಮಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಇನ್ನೂ 10 ಬಿಆರ್‌ಎಸ್ ಶಾಸಕರನ್ನು ಪಕ್ಷಕ್ಕೆ ಕರೆತರಬೇಕಾಗುತ್ತದೆ. ಅದನ್ನೂ ಮಾಡಲು ಪಕ್ಷವು ಚಿಂತಿಸಿದೆ ಎನ್ನಲಾಗಿದೆ.