ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಸೇರಿದಂತೆ 13 ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಈ ನಡುವೆ, ಇನ್ನೊಂದು ವಿಚಾರ ಹೊರಬಿದ್ದಿದೆ. ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀಧರ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ದರ್ಶನ್ ಬಳಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಏ.17 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ದುರ್ಗ ಫಾರ್ಮ್ ಹೌಸ್‌ನಲ್ಲಿ ಘಟನೆ ನಡೆದಿದೆ.
ಶ್ರೀಧರ್ ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಕೀಟನಾಶಕ ಸೇವನೆ ಮಾಡಿ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂಟಿತನ ತಡೆಯಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಮೃತದೇಹ ಕಂಡ ಮ್ಯಾನೇಜರ್ ಸ್ನೇಹಿತರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದರು ಎನ್ನಲಾಗಿದೆ. 2 ಎಕರೆ 36 ಗುಂಟೆ ಪ್ರದೇಶದಲ್ಲಿರುವ ದುರ್ಗ ಫಾರ್ಮ್ ಹೌಸ್‌ನ ಕಲ್ಲು ಬಂಡೆ ಮೇಲೆ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಡೆತ್ ನೋಟ್ ನಲ್ಲಿ ಏನಿದೆ?
ನನ್ನ ವೈಯುಕ್ತಿಕ ಕಾರಣದಿಂದ ಅಂದರೆ ಒಂಟಿತನದಿಂದ ಬೇಸತ್ತು ನಾನು ಇವತ್ತು ಸಾಯುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ದಯವಿಟ್ಟು ಯಾರಿಗೂ ತೊಂದರೆ ಕೊಡಬೇಡಿ. ಮನೆಯವರು ಪೊಲೀಸರಿಗೆ ದೂರು ನೀಡಿದರೂ ಕೂಡ ಯಾರಿಗೂ ತೊಂದರೆ ಕೊಡಬೇಡಿ. ಅವರ ಜೊತೆ ಹೋಗಿದ್ದ, ಇವರ ಜೊತೆ ಹೋಗಿದ್ದ, ಕೊನೆಯ ಬಾರಿಗೆ ಅವರಿಗೆ ಕಾಲ್ ಮಾಡಿದ್ದ ಅಂತ ಎಲ್ಲಾ ತನಿಖೆ ಮಾಡೋದು ಬೇಡ. ಮನೆಯವರಿಗೆ, ನನ್ನ ಸ್ನೇಹಿತರಿಗೂ ಹೇಳ್ತಿದ್ದೀನಿ, ಬಹಳ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸೆಲ್ಫಿ ವಿಡಿಯೋದಲ್ಲಿ ಮೃತ ಶ್ರೀಧರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಪಹರಣ ಪ್ರಕರಣ | ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು; ಹಾಸನಕ್ಕೆ ತೆರಳದಂತೆ ಸೂಚನೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಸ್ಥಳ ಮಹಜರಿಗಾಗಿ ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.