ಪಶ್ಚಿಮ ಬಂಗಾಳದ ಐಕಾನಿಕ್ ಗಿರಿಧಾಮ ಡಾರ್ಜಿಲಿಂಗ್ ಬಳಿ ನಡೆದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಈವರೆಗೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ಜನರು ಈದ್ ಆಚರಣೆಯನ್ನು ಮರೆತು ಜೀವ ಉಳಿಸುವ ಕಾಯಕದಲ್ಲಿ ತೊಡಗಿದ್ದರು.
ಸೋಮವಾರ ಈದ್-ಅಲ್-ಅಧಾ (ಬಕ್ರೀದ್) ಹಬ್ಬವನ್ನು ಎಲ್ಲೆಡೆ ಆಚರಿಸಲಾಗಿದೆ. ಆದರೆ, ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ ನಡೆದ ಸ್ಥಳದಲ್ಲಿ ಎಂಡಿ ಶಾಹಿಬ್, ಎಂಡಿ ರಾಜು, ಮೊಹಮ್ಮದ್ ಮೊಮಿರುಲ್‌ರಂತಹ ಅದೆಷ್ಟೋ ಮಂದಿ ಈದ್ ಆಚರಣೆಯನ್ನು ಮರೆತು ರಕ್ಷಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Interview by @Tamal0401 with locals who rescued and saved the lives of several people after the Kanchenjunga Express train accident. They headed to the accident after their Eid namaz to help the distressed passengers. pic.twitter.com/NsgcqnY1P4
— Mohammed Zubair (@zoo_bear) June 18, 2024
ನಿರ್ಮಲ್ ಜೋಟೆ ಗ್ರಾಮದ 150ಕ್ಕೂ ಹೆಚ್ಚು ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಬಕ್ರೀದ್ ಹಬ್ಬದ ಸಂಭ್ರಮಾಚರಣೆ ಮರೆತು ಗ್ರಾಮಸ್ಥರು ಪ್ರಯಾಣಿಕರನ್ನು ರಕ್ಷಿಸಲು ಮತ್ತು ಗಾಯಾಳುಗಳಿಗೆ ಸಹಾಯ ಮಾಡಲು ಧಾವಿಸಿದರು. ಆಂಬ್ಯುಲೆನ್ಸ್ ಇಲ್ಲದ ಕಾರಣ ಹಲವರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಇನ್ನು ಸಣ್ಣ ಪುಟ್ಟ ಗಾಯಗೊಂಡ ಪ್ರಯಾಣಿಕರು ಸ್ಥಳೀಯರ ಮನೆಯಲ್ಲಿಯೇ ಆಶ್ರಯ ಪಡೆದುಕೊಂಡು, ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ ರೈಲುಗಳ ನಡುವೆ ಭೀಕರ ಅಪಘಾತ: 15 ಸಾವು, 60 ಗಾಯ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ಮೊಮಿರುಲ್, “ನಾನು ನಮಾಜ್ ಸಲ್ಲಿಸಿದ ನಂತರ ಹಿಂದಿರುಗಿದ್ದೆ. ಮನೆಯಲ್ಲಿ ಎಲ್ಲರೂ ಸಂಭ್ರಮದಲ್ಲಿದ್ದರು. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿತು. ಕೂಡಲೇ ಮನೆಯ ಸಮೀಪವಿರುವ ರೈಲು ಹಳಿಗಳ ಕಡೆಗೆ ಧಾವಿಸಿದರೆ ಅಪಘಾತ ಸಂಭವಿಸಿರುವುದು ತಿಳಿಯಿತು. ಗೂಡ್ಸ್ ರೈಲಿನ ಲೋಕೋ ಪೈಲಟ್ ಪ್ಯಾಸೆಂಜರ್ ರೈಲಿನ ಚಕ್ರದಲ್ಲಿ ಸಿಲುಕಿರುವುದು ನೋಡಿದೆ. ನಾನು ಆತನ ರಕ್ಷಣೆ ಮಾಡಲು ಹೋಗುವಾಗ ಆತ ಸಾವನ್ನಪ್ಪಿದ” ಎಂದು ತನ್ನ ಕಣ್ಣೆದುರೇ ನಡೆದ ಬೆಚ್ಚಿ ಬೀಳಿಸುವ ಘಟನೆಯನ್ನು ವಿವರಿಸಿದ್ದಾರೆ.
Kanchanjunga Express train accident: Drone visuals from the spot in the Phansidewa area of the Darjeeling district, West Bengal.
Restoration work is underway here. pic.twitter.com/IygnvGVWD4
— TIMES NOW (@TimesNow) June 17, 2024
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ವಿಪತ್ತು ನಿರ್ವಹಣಾ ತಂಡಗಳು ಒಂದು ಗಂಟೆಗೂ ಅಧಿಕ ಸಮಯ ಕಳೆದ ನಂತರ ಸ್ಥಳಕ್ಕೆ ತಲುಪಿದೆ. ರಕ್ಷಣಾ ತಂಡ ತಲುಪುವ ಮುನ್ನವೇ ರಕ್ಷಣಾ ಕಾರ್ಯಚರಣೆಗಳನ್ನು ಸ್ಥಳೀಯರು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕಳೆದ 3 ದಶಕಗಳಲ್ಲಿ ದೇಶದಲ್ಲಿ ಸಂಭವಿಸಿದ 7 ಭೀಕರ ರೈಲು ಅಪಘಾತಗಳ ವಿವರ
“ನಮ್ಮ ನಮಾಜ್ ಪೂರ್ಣವಾಗುತ್ತಿದ್ದಂತೆ ಜೋರಾದ ಸದ್ದು ಕೇಳಿತು. ನಾವು ರೈಲು ಹಳಿಯತ್ತ ಓಡಿದೆವು. ನಾವು ಒಬ್ಬೊಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದೆವು. ಒಟ್ಟು 8 ಮೃತ ದೇಹವನ್ನು ನಾವು ಹೊರತೆಗೆದಿದ್ದೇವೆ. 30-35ರಷ್ಟು ಗಾಯಾಳುಗಳನ್ನು ರಕ್ಷಣೆ ಮಾಡಿದ್ದೇವೆ” ಎಂದು ಸ್ಥಳೀಯರು ಹೇಳಿದ್ದಾರೆ.
“ನಾನು ಹಬ್ಬಕ್ಕೆ ತಯಾರಾಗುತ್ತಿದ್ದಾಗ ಅಪಘಾತದ ಸುದ್ದಿ ನನಗೆ ತಿಳಿದು ಸ್ಥಳಕ್ಕೆ ಧಾವಿಸಿದೆ. ವೃದ್ಧ ಮಹಿಳೆಯೊಬ್ಬರಿಗೆ ನಿಲ್ಲಲು ಕೂಡಾ ಸಾಧ್ಯವಾಗುತ್ತಿರಲಿಲ್ಲ. ನೀರಿಗಾಗಿ ಅವರು ಅಳುತ್ತಿರುವುದು ನೋಡಿದೆ. ಅವರಿಗೆ ಸಾಂತ್ವನಗೊಳಿಸಿದೆ. ನಂತರ ವೃದ್ಧೆಯ ಸಂಬಂಧಿಕರು ಸಿಲಿಗುರಿಯಿಂದ ಬಂದು ಅವರನ್ನು ಕರೆದುಕೊಂಡು ಹೋದರು” ಎಂದು ನಿವಾಸಿ ತಸ್ಲೀಮಾ ಹೇಳಿದ್ದಾರೆ.