ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಆಶ್ರಯ ಕಾಲನಿಯಲ್ಲಿ ಮುಸ್ಲಿಂ ಪ್ರಾರ್ಥನಾ ಮಂದಿರ, ದರ್ಗಾ, ಉರ್ದು ಶಾಲೆ, ಈದ್ಗಾ ಹಾಗೂ ಖಬರಸ್ಥಾನಕ್ಕೆ ಜಾಗ ಗುರುತಿಸಿ ಕೊಡುವಂತೆ ಟಿಪ್ಪು ಕ್ರಾಂತಿ ಸೇನೆ ಹಾಗೂ ಡೋಣೂರ ಗ್ರಾಮದ ಅಂಜುಮನ್ ಕಮೀಟಿ ಒತ್ತಾಯಿಸಿದೆ. ಬಸವನಬಾಗೇವಾಡಿ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಾತನಾಡಿದ ಟಿಪ್ಪು ಕ್ರಾಂತಿ ಸೇನೆಯ ಮುಖಂಡ ಖಾಜಂಬರ ನದಾಫ, “ಡೋಣೂರ ಗ್ರಾಮದ ಆಶ್ರಯ ಕಾಲನಿಯಲ್ಲಿ ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರ, ದರ್ಗಾ, ಉರ್ದು ಶಾಲೆ, ಈದ್ಗಾ ಹಾಗೂ ಖಬರಸ್ಥಾನಕ್ಕೆ ಜಾಗೆ ಗುರುತಿಸಿ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
“ಗ್ರಾಮದ ಆಶ್ರಯ ಕಾಲನಿಯಲ್ಲಿ ಬೇರೆ ಬೇರೆ ಸಮುದಾಯದವರು ಸ್ವತ: ತಾವೇ ಜಾಗಗಳನ್ನು ಗುರುತಿಸಿಕೊಂಡು ಕಬ್ಜಾ ಮಾಡಿಕೊಂಡಿದ್ದಾರೆ. ಹಾಗಾಗಿ, ನಮ್ಮ ಸಮುದಾಯ ಸ್ವತ: ಜಾಗೆ ಗುರುತಿಸಲು ಹೋದಲ್ಲಿ ಸಮಸ್ಯೆಯಾಗುವ ಸಂಭವವಿದೆ. ತಾಲೂಕು ದಂಡಾಧಿಕಾರಿಗಳು ಮುಸ್ಲಿಂ ಸಮಾಜಕ್ಕೆ ಜಾಗ ಗುರುತಿಸಿ ಕೊಡುವ ಮೂಲಕ ಸಮಾಜಕ್ಕೆ ಅನಕೂಲ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಮಿನಸಾಬ ಹುಡೆದಗಡ್ಡಿ, ನಾಸೀರ್ ತಾಂಬೋಳಿ, ಅಬಿದ ತಾಂಬೋಳಿ, ಬಂದೇನವಜ್ ಸುತಾರ, ಮಹೇಬೂಬ ಸುತಾರ, ರಹೇಮಾನ ಮುಲ್ಲಾ, ಹಾಶಿಂಸಾಬ ಸುತಾರ, ಸುಲೇಮಾನ್ ಗೌಂಡಿ, ಅಬ್ಬುಸಾಬ ಮುಲ್ಲಾ, ಇಸ್ಮಾಯಿಲ್ ಮುಲ್ಲಾ ಹಾಗೂ ಇನ್ನಿತರರು ಇದ್ದರು.