- ಮುಂದಿನ ಎರಡು ವರ್ಷಗಳಲ್ಲಿ 2.5 ಲಕ್ಷ ಬುಡಕಟ್ಟು ಜನರ ತಪಾಸಣೆ: ಸಚಿವ ಗುಂಡೂರಾವ್
- ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ CSR ಫಂಡ್ ವಿನಿಯೋಗಿಸಲು ಕಂಪನಿಗಳಿಗೆ ಮನವಿ
ಸಿಕಲ್ ಸಿಲ್ ಅನೀಮಿಯಾ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ‘ಪ್ರಾಜೆಕ್ಟ್ ಚಂದನ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೈಸೂರಿನಲ್ಲಿ ಇಂದು(ಜೂನ್ 19) ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, “ಈಗಾಗಲೇ ಆರೋಗ್ಯ ಇಲಾಖೆ ಸಿಕಲ್ ಸೆಲ್‌ಗೆ ತುತ್ತಾಗಿರುವವರಿಗೆ ಉಚಿತ ಚಿಕಿತ್ಸೆ, ಉತ್ತಮ ಆರೈಕೆ ಒದಗಿಸಲಾಗುತ್ತಿದೆ. ರೋಗ ಹರಡದಂತೆ ಕ್ರಮಗಳನ್ನೂ ಕೂಡ ಕೈಗೊಳ್ಳಲಾಗುತ್ತಿದೆ. ಇದೀಗ ‘ಪ್ರಾಜೆಕ್ಟ್ ಚಂದನ’ದ’ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ 2,56,000 ಲಕ್ಷ ಬಡಕಟ್ಟು ಜನರ ತಪಾಸಣೆ ನಡೆಸುವುದರ ಜೊತೆಗೆ ಅಗತ್ಯ ಚಿಕಿತ್ಸೆ ಕಲ್ಪಿಸಲಾಗುವುದು” ಎಂದರು.
With the goal of making Karnataka a sickle cell-free state, we launched Project Chandana today at the Abdul Nazir Sab Hall of Mysuru Zilla Panchayat.
Sickle cell anemia is a genetic disorder where red blood cells become crescent-shaped, leading to health complications. The… pic.twitter.com/O0iDfMi9nh
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 19, 2024
“ಈ ರೋಗದ ವಿರುದ್ಧ ಹೋರಾಡಲು ಅನೇಕ ಸಾಮಾಜಿಕ ಸಂಘಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಂಡಿವೆ. ವಿಶೇಷವಾಗಿ ಭಾರತೀಯ ವಿಜ್ಞಾನ ಸಂಸ್ಥೆಯು 2 ವರ್ಷಗಳ ಅವಧಿಗೆ ಸಂಪೂರ್ಣ ತಪಾಸಣೆ, ತರಬೇತಿ, ಜಾಗೃತಿ, ಮಾದರಿ ಸಾರಿಗೆ ಮತ್ತು ಸಂಪರ್ಕ ಸೇವೆಗಳಿಗಾಗಿ ಮೈಸೂರು, ಚಾಮರಾಜನಗರ ಮತ್ತು ಕೊಡಗಿನ 3 ಜಿಲ್ಲೆಗಳನ್ನು ದತ್ತು ತೆಗೆದುಕೊಳ್ಳುವ ಪ್ರಸ್ತಾವನೆಯೊಂದಿಗೆ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದೆ. ಐಐಎಸ್‌ಸಿ ಪ್ರೊಫೆಸರ್ ಸಾಯಿ ಅವರು ಸಂಶೋಧಿಸಿರುವ ನವೀನ ಸಾಧನದಿಂದ ಸ್ಟೀನಿಂಗ್ ಮಾಡಲಾಗುವುದು. ಈ ಯೋಜನೆಯನ್ನು “ಪ್ರಾಜೆಕ್ಟ್ ಚಂದನ” ಎಂದು ಘೋಷಿಸಲಾಗಿದ್ದು, ಯೋಜನೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಎಸ್‌ಆರ್ ಅಡಿಯಲ್ಲಿ 18 ಕೋಟಿ ವಿನಿಯೋಗಿಸಲು ಮುಂದೆ ಬಂದಿದೆ. ಇದು ಉತ್ತಮ ಕಾರ್ಯ” ಎಂದು ಸಚಿವ ಗುಂಡೂರಾವ್ ಶ್ಲಾಘನೆ ವ್ಯಕ್ತಪಡಿಸಿದರು.
“ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಈ ರೀತಿಯ ಸಿಎಸ್‌ಆರ್ ಫಂಡ್ ಹೆಚ್ಚಿನ ರೀತಿಯಲ್ಲಿ ಹರಿದುಬರಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಪೋರೇಟ್ ಕಂಪನಿಗಳು ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ” ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದ ಬುಡಕಟ್ಟು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನಿಮೀಯಾ ರಕ್ತಹೀನತೆಯ ಸಮಗ್ರ ತಪಾಸಣೆ ಮತ್ತು ಆರೋಗ್ಯ ನಿರ್ವಹಣೆಗಾಗಿ ಸರ್ಕಾರ-ಐಐಎಸ್‌ಸಿ-ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಡುವಿನ ಒಪ್ಪಂದಕ್ಕೆ ಸಚಿವ ದಿನೇಶ್ ಗುಂಡೂರಾವ್ ಸಹಿ ಹಾಕಿದರು.
ಸಿಕಲ್ ಸೆಲ್ ಜೆನಿಟಿಕ್ ಕೌನ್ಸೆಲಿಂಗ್ ಕಾರ್ಡ್ ವಿತರಣೆ
ಇದೇ ವೇಳೆ ಸಿಕಲ್ ಸೆಲ್ ಅನಿಮೀಯಾ ರೋಗ ಪತ್ತೆಯಾದವರಿಗೆ ಸಾಂಕೇತಿಕವಾಗಿ ವಿಶೇಷ ಜೆನೆಟಿಕ್ ಕೌನ್ಸೆಲಿಂಗ್ ಕಾರ್ಡ್ ವಿತರಿಸಲಾಯಿತು.
ಕಾರ್ಡ್ ಪಡೆದವರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ರಕ್ತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಖ್ಯವಾಗಿ ಹೈಡ್ರಾಕ್ಸಿಯುರಿಯಾ ಮಾತ್ರೆಗಳು, ಹೆಚ್ಚುವರಿ ರೋಗನಿರೋಧಕಗಳು ಮತ್ತು ಸರ್ಕಾರಿ ಸೌಲಭ್ಯಗಳಲ್ಲಿ ಉಚಿತ ರಕ್ತವನ್ನು ನೀಡಲಾಗುತ್ತದೆ.
ಸಿಕಲ್ ಸೆಲ್ ಅನಿಮೀಯಾ ರೋಗಕ್ಕೆ ತುತ್ತಾದವರಲ್ಲಿ 55 ಜನರನ್ನ ಅಂಗವೈಕಲ್ಯ ಎಂದು ಗುರುತಿಸಲಾಗಿದ್ದು, ಯುಡಿಐಡಿ ಗುರುತಿನ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ. ಸಿಕಲ್ ಸೆಲ್ ಅನೀಮಿಯಾ ರೋಗಿಗಳ ನೋಂದಣಿಗಾಗಿ ಆನ್‌ಲೈನ್ ರಿಜಿಸ್ಟ್ರಿ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ.
ಕರ್ನಾಟಕದಲ್ಲಿ 7 ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದಲ್ಲಿ ಒಟ್ಟು 352187 ಜನಸಂಖ್ಯೆಯನ್ನು ಸಿಕಲ್ ಸೆಲ್ ಅನೀಮಿಯಾಗೆ ಪರೀಕ್ಷಿಸಲಿದ್ದು, ಜೇನುಕುರುಬ, ಬೆಟ್ಟಕುರುಬ, ಬೇಡ, ಯರವ, ಈಡಿಗ ಮತ್ತು ನಾಯಕರಂತಹ ಆರು ಪ್ರಮುಖ ಬುಡಕಟ್ಟು ಜನಾಂಗದವರಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
