ನಾಲ್ಕು ವರ್ಷಗಳಿಂದ ನಡೆಯದ ಬಿಬಿಎಂಪಿ ಚುನಾವಣೆ; ನಗರದ ಜನ ಏನಂದ್ರು?

Date:

Advertisements

ಸುಮಾರು ನಾಲ್ಕು ವರ್ಷಗಳಿಂದ ನಾನಾ ನೆಪ ಹೇಳಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಈ ಬಗ್ಗೆ ನಗರದ ಜನರ ಅಭಿಪ್ರಾಯ ಇಲ್ಲಿದೆ


ಸುಮಾರು
ಒಂದೂವರೆ ಕೋಟಿಯಷ್ಟು ಜನಸಂಖ್ಯೆ ಇರುವ ಬೆಂಗಳೂರು ಮಹಾನಗರವನ್ನು ಕಳೆದ ನಾಲ್ಕು ವರ್ಷಗಳಿಂದ ಮಹಾನಗರ ಪಾಲಿಕೆ ಆಡಳಿತ ನಡೆಸದೇ ಅಧಿಕಾರಿ ವರ್ಗದವರು ಆಡಳಿತ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 2020 ರಂದೇ ಬಿಬಿಎಂಪಿ ಸದಸ್ಯರ ಅವಧಿ ಮುಗಿದಿದೆ. ಅಂದಿನಿಂದ ಇಂದಿನವರೆಗೆ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಸಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನವಿದ್ದರೂ ಹಿಂದಿನ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್‌ ಸರ್ಕಾರ ಮೀಸಲಾತಿ ಮತ್ತು ವಾರ್ಡ್‌ ಪುನರ್ವಿಂಗಡನೆಯ ಹೆಸರಿನಲ್ಲಿ ಪಾಲಿಕೆಯ ಚುನಾವಣೆಯನ್ನು ಮುಂದೂಡುತ್ತಲೇ ಬಂದಿವೆ.

2023ರ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಬಿಬಿಎಂಪಿ ಚುನಾವಣೆ ನಡೆಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದು ನಡೆಯಲಿಲ್ಲ. 2024ರ ಲೋಕಸಭಾ ಚುನಾವಣೆ ಮುಗಿದಿದೆ, ಇನ್ನಾದರೂ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸುತ್ತದೆಯೊ ಇಲ್ಲವೋ ಕಾದು ನೋಡಬೇಕಾಗಿದೆ.

Advertisements

ಸಂವಿಧಾನದ 74ನೇ ತಿದ್ದುಪಡಿ ನಂತರ ಸಂವಿಧಾನಾತ್ಮಕವಾಗಿ ಅಸ್ತಿತ್ವಕ್ಕೆ ಬಂದ ನಗರ ಸ್ಥಳೀಯ ಆಡಳಿತ ಸಂಸ್ಥೆಯಾದ ಬಿಬಿಎಂಪಿಗೆ ಹಿಂದಿನಿಂದಲೂ ಅವಧಿ ಮುಗಿದ ತಕ್ಷಣದಲ್ಲಿ ಚುನಾವಣೆ ನಡೆಸುವ ಇಚ್ಛಾಶಕ್ತಿಯನ್ನು ಸರ್ಕಾರಗಳು ತೋರಿಸಿಲ್ಲ. ನಗರದ ಅಭಿವೃದ್ಧಿ ಯೋಜನೆಗಳನ್ನ ರೂಪಿಸಲು ಜನಪ್ರತಿನಿಧಿಗಳೇ ಇಲ್ಲವಾದ್ದರಿಂದ ಸ್ಥಳೀಯ ಆಡಳಿತ ಸಂಸ್ಥೆ ನಗರದ ಜನರಿಗೆ ಅಪ್ರಸ್ತುತವಾಗತೊಡಗಿದೆ. ನಗರದಲ್ಲಿ ಸಮರ್ಪಕ ಆಡಳಿತ ವ್ಯವಸ್ಥೆ ಇಲ್ಲದಂತಾಗಿದೆ. ಇದರ ಹಿಂದೆ ಶಾಸಕರ ಸ್ವಹಿತಾಸಕ್ತಿ ಮತ್ತು ಅಧಿಕಾರ ವಿಕೇಂದ್ರೀಕರಣದ ವಿರುದ್ಧದ ಅವರ ಲಾಬಿ ಬಿಬಿಎಂಪಿ ಚುನಾವಣೆ ನಡೆಯದಿರಲು ಕಾರಣವಾಗಿದೆ ಎಂಬ ಆರೋಪವಿದೆ.

ರಾಜ್ಯ ಸರ್ಕಾರ, 198 ವಾರ್ಡ್‌ಗಳ ಬಿಬಿಎಂಪಿಯನ್ನ 225 ವಾರ್ಡ್‌ಗಳಾಗಿ ಪುನರ್ವಿಂಗಡಿಸಿ, 80 ವಾರ್ಡ್‌ಗಳ 5 ಪಾಲಿಕೆಯನ್ನಾಗಿ ವಿಭಾಗಿಸಲು ಚಿಂತನೆ ನಡೆಸುತ್ತಿದೆ. ಬೆಂಗಳೂರು ನಗರ ವ್ಯಾಪಕವಾಗಿ ಬೆಳೆಯುತ್ತಿದೆ. ದೇಶದ ಅತಿ ದೊಡ್ಡ ನಾಲ್ಕನೆಯ ಮಹಾನಗರ ಪಾಲಿಕೆಗೆ ನಾಲ್ಕು ವರ್ಷಗಳಿಂದ ಚುನಾವಣೆ ನಡೆದಿಲ್ಲದ ಕಾರಣ ಜನರ ದಿನನಿತ್ಯದ ಸಮಸ್ಯೆಗಳನ್ನ ಆಲಿಸಲು, ಪರಿಹರಿಸಲು ಯಾರ ಬಳಿಗೆ ಹೋಗಬೇಕು ಎಂದು ತೋಚದಾಗಿದೆ. ಪಾಲಿಕೆಯ ಅಧಿಕಾರಿಗಳು ಜನರ ಅಹವಾಲುಗಳನ್ನು ಕೇಳುವುದಾಗಲಿ, ಪರಿಹಾರ ಒದಗಿಸುವುದಾಗಲಿ ಮಾಡುತ್ತಿಲ್ಲ. ಒಟ್ಟಾರೆಯಾಗಿ ಬಿಬಿಎಂಪಿ ಒಂದು ಜಡವಾದ ಸಂಸ್ಥೆಯಾಗಿ ರೂಪಗೊಂಡಿದೆ ಎಂದು ಸಾರ್ವಜನಿಕ ವಲಯ ಆಕ್ರೋಶ ವ್ಯಕ್ತಪಡಿಸುತ್ತಿದೆ.

tushar girinath 1
ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌

“ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿಗೆ ಚುನಾವಣೆ ನಡೆಸಿ ಅಂತ ಯಾವಾಗ ಅಧಿಸೂಚನೆಯನ್ನ ಹೊರಡಿಸುತ್ತದೆಯೊ ಆಗ ನಾವು ಹೊಸ ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಲು ಸಾಧ್ಯ” ಎಂದು ಬಿಬಿಎಂಪಿಯ ಆಯುಕ್ತ ತುಷಾರ್‌ ಗಿರಿನಾಥ್‌ ಈ ದಿನ.ಕಾಂಗೆ ಪ್ರತಿಕ್ರಿಯಿಸಿದರು. ರಾಜ್ಯ ಸರ್ಕಾರದ ಐದು ಪಾಲಿಕೆಯ ವಿಚಾರದ ಕುರಿತು ಮಾತಾಡಲು ನಿರಾಕರಿಸಿದರು.

ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಗರವಾಸಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
”ಬ್ರ್ಯಾಂಡ್ ಬೆಂಗಳೂರು, ಕನಸಿನ ಬೆಂಗಳೂರು ಎಂದೆಲ್ಲ ಭರವಸೆ ಹುಟ್ಟಿಸಿ ಸರ್ಕಾರ ಇಂದು ಸ್ಥಳೀಯ ಚುನಾವಣೆ ನಡೆಸದೆ ನಾಗರಿಕರಿಂದ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಂಡಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗೆ ತೋರಿದ ಮುತುವರ್ಜಿಯನ್ನೇ ನಮ್ಮ ಹೆಮ್ಮೆಯ ಬೆಂಗಳೂರಿನ ಚುನಾವಣೆಗೂ ತೋರುವುದು ಅವಶ್ಯಕ. ಕೆಂಪೇಗೌಡರ ಜಯಂತಿಗೆ ತಿಂಗಳುಗಳ ಮೊದಲೇ ಸಭೆ ಮಾಡುತ್ತಿರುವ ಸರ್ಕಾರ ಅದೇ ಕೆಂಪೇಗೌಡರ ಕನಸಿನ ನಗರ ಆಡಳಿತಕ್ಕೆ ನೆರವಾಗಲು ಬಿಬಿಎಂಪಿ ಚುನಾವಣೆಯನ್ನು ಶೀಘ್ರ ನಡೆಸುವ ನಿರ್ಧಾರಕ್ಕೆ ಬರಲಿ” ಎಂದು ಭರವಸೆ ಎನ್‌ಜಿಒ ಅಧ್ಯಕ್ಷ ಸುನೀಲ್ ಗೌಡ ಒತ್ತಾಯಿಸಿದರು.

”ಗೃಹ ಸಚಿವರ ಲಂಡನ್ ಮಾದರಿಯ ಪಾಲಿಕೆ, ಜಾರಿಗೆ ಬಂದರೆ ಲಂಡನ್‌ನಂತೆ ಬೆಂಗಳೂರಿನ ಅಧಿಕಾರವೂ ವಲಸಿಗರ ಪಾಲಾಗುತ್ತದೆ. ಒಂದೊಂದು ಭಾಷಿಕರು ಒಂದೊಂದು ಭಾಗವನ್ನು ಹಂಚಿಕೊಂಡು ಕನ್ನಡಿಗರನ್ನು ನಿರ್ಗತಿಕರನ್ನಾಗಿ ಮಾಡುತ್ತಾರೆ. 73 ಮತ್ತು 74ನೇ ತಿದ್ದುಪಡಿ ತಂದಾಗ ಇದೇ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿಯವರು ಈ ಅಧಿಕಾರ ವಿಕೇಂದ್ರೀಕರಣ ಆಡಳಿತ ಸ್ವಚ್ಛಗೊಳಿಸುವ ಮೊದಲ ಹೆಜ್ಜೆ ಎಂದು ಗುಣಗಾನ ಮಾಡಿದ್ದರು. ಆದರೆ ಈ ಸ್ಥಳೀಯ ಸಂಸ್ಥೆಗಳು ಈಗ ಭ್ರಷ್ಟಚಾರದ ಕೊಂಪೆಯಾಗಿವೆ. ನಾಗರಿಕರು ಮೂಲಭೂತ ಸೌಕರ್ಯವಿಲ್ಲದೆ ಸಾಯುತ್ತಿದ್ದಾರೆ. ನಾಗರಿಕ ಹಿತರಕ್ಷಣಾ ಗುಂಪುಗಳು ಬೀದಿಗಿಳಿದು ಪ್ರತಿಭಟಿಸದಿದ್ದರೆ ಇನ್ನು 3-4ವರ್ಷ ಚುನಾವಣೆ ಮುಂದೂಡುವುದು ಖಚಿತ” ಎಂದು ಕಾನೂನು ವಿದ್ಯಾರ್ಥಿ ಅಂಕಿತ್‌ ಗೌಡ ಆತಂಕ ವ್ಯಕ್ತಪಡಿಸಿದರು.

1 1
ಡಾ ಮಿಥುನ್‌,  ಜನನಿ ವತ್ಸಲ,   ಸುನಿಲ್‌ ಗೌಡ, ಅಂಕಿತ್‌ ಗೌಡ

“ಸ್ಥಳೀಯ ಸಂಸ್ಥೆಗಳು ಅಧಿಕಾರ ವಿಕೇಂದ್ರೀಕರಣದ ಕಾರಣದಿಂದ ರಚನೆಯಾದವು. ಅವುಗಳಲ್ಲಿ ಜನ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದರೆ ಮಾತ್ರ ಜನರ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದು. ಬಿಬಿಎಂಪಿಗೆ ಚುನಾವಣೆ ಮಾಡಿ, ಪಾಲಿಕೆ ಸದಸ್ಯರಿಲ್ಲದೆ ಮೂರ್ನಾಲ್ಕು ವರುಷಗಳಾಯ್ತು. ಸಾಕಷ್ಟು ಅವಾಂತರಗಳಾದಾಗ ಜನರಿಗೆ ಯಾರನ್ನು ಕೇಳಬೇಕೆಂದು ತಿಳಿಯುವುದಿಲ್ಲ. ಅಧಿಕಾರಿ ವರ್ಗ ತಮ್ಮ ಕಚೇರಿಗಳಲ್ಲೇ ಇದ್ದು ಸಾಮಾನ್ಯ ಜನರಿಂದ ದೂರಾವಾಗಿದ್ದಾರೆ.‌ ರಾಜ್ಯ ಸರ್ಕಾರ ಆದಷ್ಟು ಬೇಗ ಬಿಬಿಎಂಪಿ ಸೇರಿದಂತೆ ಜಿಲ್ಲಾ, ತಾಲ್ಲೂಕು ಪಂಚಾಯತಿ ಚುನಾವಣೆ ನಡೆಸಬೇಕು. ಹಾಗೆಯೇ ಈಗಿರುವ ಪಾಲಿಕೆಯನ್ನು ಯಾವುದೇ ಕಾರಣಕ್ಕೂ ಭಾಗ ಮಾಡದೇ ಈಗ ಇರುವುದಕ್ಕೆ ಇನ್ನೂ ಹೆಚ್ಚಿನ ಬಲ ನೀಡುವ ಕೆಲಸ ಮಾಡಬೇಕು. ಬಿಬಿಎಂಪಿ ಕನ್ನಡಿಗರ ಕೈಯಲ್ಲೇ ಉಳಿಯಬೇಕು” ಎಂಬುದು ಪ್ರಾಧ್ಯಾಪಕ ಡಾ. ಮಿಥುನ್‌ ಬಿ ಎನ್ ಅವರ ಅಭಿಪ್ರಾಯ.

“ವಾರ್ಡ್ ಗಳನ್ನು ಕಡಿಮೆ ಮಾಡುತ್ತಾರೋ ಇಲ್ಲ ಹೆಚ್ಚಿಸುತ್ತಾರೋ ಅದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ನಗರ ಪಾಲಿಕೆ ಚುನಾವಣೆ ಕಡ್ಡಾಯವಾಗಿ ಆಗಲೇಬೇಕು. ನಾಲ್ಕು ವರುಷಗಳಿಂದ ಬಿಬಿಎಂಪಿ ಚುನಾವಣೆಯಾಗದೆ ಪ್ರತಿ ವಾರ್ಡ್ ಗಳಲ್ಲಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಜನರು ಯಾರನ್ನು ಸಂಪರ್ಕಿಸಲು ಆಗದೇ ಅಸಹಾಯಕರಾಗಿದ್ದಾರೆ” ಎಂದು ಕೆಆರ್‌ ಎಸ್‌ ಪಕ್ಷದ ಯುವ ಘಟಕದ ಅಧ್ಯಕ್ಷೆ ಜನನಿ ವತ್ಸಲ ಹೇಳಿದರು.

charan
ಚರಣ್ ಗೌಡ ಬಿ ಕೆ
+ posts

ಬಿ ಎ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ, ಎರಡನೆ ವರ್ಷ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಚರಣ್ ಗೌಡ ಬಿ ಕೆ
ಚರಣ್ ಗೌಡ ಬಿ ಕೆ
ಬಿ ಎ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ, ಎರಡನೆ ವರ್ಷ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X