ನಾಲತವಾಡ ಸಮೀಪದ ನೆರಬೆಂಚಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟುವ ಮೂಲಕ ಪಾನಮುಕ್ತ ಗ್ರಾಮಕ್ಕೆ ಪಣ ತೊಡಲು ಗ್ರಾಮಸ್ಥರೆಲ್ಲರೂ ಸಹಕಾರ ನೀಡಬೇಕು ಎಂದು ನಿವೃತ್ತ ಶಿಕ್ಷಕ ವೈ ಬಿ ತಳವಾರ ಮನವಿ ಮಾಡಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೆರಬೆಂಚಿ ಗ್ರಾಮದಲ್ಲಿ ಪ್ರಜ್ಞಾವಂತರು, ಕೆಸಾಪುರದ ಮದ್ಯಪಾನ ವಿರೋಧಿ ತಂಡದವರು, ಮಹಿಳಾ ಸಂಘಟನೆಯವರು ಜಂಟಿಯಾಗಿ ಹಮ್ಮಿಕೊಂಡಿದ್ದ ಮದ್ಯ ಮಾರಾಟ ನಿಷೇಧ ಅಭಿಯಾನ, ಜನಜಾಗೃತಿ ಮೂಡಿಸುವ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದರು.
“ಈಗಾಗಲೇ ಕೆಸಾಪುರದಿಂದ ಪ್ರಾರಂಭಗೊಂಡಿರುವ ಪಾನಮುಕ್ತ ಗ್ರಾಮ ಮಾಡುವ ಸಂಕಲ್ಪ ಯಾತ್ರೆಯೂ ಕೆಸಾಪುರ ಮತ್ತು ಆಲೂರು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ” ಎಂದು ತಿಳಿಸಿದರು.
“ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ನಡೆಯುತ್ತಿಲ್ಲ. ಆದರೆ ಕೆಸಾಪುರದ ಕುಡುಕರು ಸಮೀಪದ ನೆರಬೆಂಚಿಗೆ ಬಂದು ಮದ್ಯ ಸೇವಿಸಿ ಇತರೆ ಗ್ರಾಮಗಳಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ವಿಷಯ ಗೊತ್ತಾಗಿದೆ. ನೆರಬೆಂಚಿಯಲ್ಲಿ ಅಕ್ರಮ ಮದ್ಯ ಮಾರಾಟಗಾರರು ಉದ್ರಿ(ಕಡ)ಯಾಗಿ ಮದ್ಯ ಕೊಡುತ್ತಿರುವುದು ಗಮನಕ್ಕೆ ಬಂದಿದೆ” ಎಂದರು.
“ಹೋಟೆಲ್, ಕಿರಾಣಿ ಅಂಗಡಿ, ಪಾನ್‌ಶಾಪ್ ಮುಂತಾದೆಡೆ ಈಗಾಗಲೇ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ತಹಶೀಲ್ದಾರ್, ಪೊಲೀಸರು, ಅಬಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಸಿ ಎಸ್ ನಾಡಗೌಡರಿಗೆ ಮನವಿ ಸಲ್ಲಿಸಿದ್ದೇವೆ. ಅವರೂ ಕೂಡಾ ಸಕಾರಾತ್ಮಕವಾಗಿ
ಸ್ಪಂದಿಸಿದ್ದಾರೆ. ಅಕ್ರಮ ಮುಂದುವರೆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ಮದ್ಯ ಮಾರಾಟ ಮಾಡುವ ದಂಧೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಅಂಥವರ ವಿರುದ್ಧ ನಾವೇ ದೂರು ಕೊಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಜನಸ್ಪಂದನ ಕಾರ್ಯಕ್ರಮ; ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಕಸಾಪುರದ ಜಿ ಜಿ ಗೌಡರ, ಶ್ರೀನಿವಾಸ ಗೌಂಡಿ, ಭಾಷಾ ತಾಳಿಕೋಟಿ, ದ್ಯಾಮಣ್ಣ ಹಿರೇಕುರುಬರ, ಸುರೇಶ ಭೈರವಾಡಗಿ, ನಾಗರಾಜ ಹಿರೇಕುರುಬರ, ಅಶೋಕ ಹಗರಗೊಂಡ, ಸಂಗನಗೌಡ ಪಾಟೀಲ, ಪರಸಪ್ಪ ಗೌಡ್ರ, ಸಂಗಣ್ಣ ಭೋವಿ, ಶಾಂತಗೌಡ ನಾಡಗೌಡ, ಗದ್ದೆಪ್ಪ ಭೋಯೇರ ಮತ್ತು ಮಹಿಳಾ ಸಂಘಟನೆಗಳ ಸದಸ್ಯರು, ನೆರಬೆಂಚಿಯ ಮಲ್ಲಿಕಾರ್ಜುನ ಬಿರಾದಾರ, ಶಿದ್ರಾಮ ಬಿರಾದಾರ, ಮಲ್ಲನಗೌಡ ಬಿರಾದಾರ, ನಿಂಗನಗೌಡ ಪಾಟೀಲ, ನಾಗಪ್ಪ ನಾಯ್ಕಮಕ್ಕಳ, ನಾಗರಾಜ ಬಿರಾದಾರ, ನಾಗಪ್ಪ ಹಳ್ಳೆಪ್ಪನರ್ವ, ರುದ್ರಮ್ಮ ಬಿರಾದಾರ ಇದ್ದರು.
