ಪ್ರತಿಯೊಂದು ಹಬ್ಬಗಳು ಸಮಾಜದಲ್ಲಿ ಸಂತೋಷವನ್ನು ಹಂಚುತ್ತವೆ. ಕೇವಲ ಮನೆಯವರೇ ಹಬ್ಬ ಆಚರಿಸಿದರೆ ಅದು ಹಬ್ಬ ಅನಿಸುವುದಿಲ್ಲ. ಇತರರೊಂದಿಗೆ ಸೇರಿ ಆಚರಿಸಿ ಇತರರ ಮೊಗದಲ್ಲೂ ಸಂತೋಷ ಕಂಡರೆ ಮಾತ್ರ ಹಬ್ಬ ಎನಿಸುತ್ತದೆ. ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತವಾಗಿವೆ ಎಂದು ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲ ಡಾ ವಿನ್ಸೆಂಟ್ ಆಳ್ವಾ ಹೇಳಿದರು.
ಉಡುಪಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ಈದ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅತಿಥಿ ಭಾಷಣ ಮಾಡಿ, “ಕರಾವಳಿಯಲ್ಲಿ ಮುಸ್ಲಿಮರ ಕೊಡಗೆ ಬಹಳಷ್ಟಿವೆ. ಹಿಂದೂ-ಮುಸ್ಲಿಂ-ಕ್ರೈಸ್ತರು ಎಲ್ಲರೂ ಸೌಹಾರ್ದತೆಯಿಂದ ಬದುಕು ಕಾಣಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಮಾತನಾಡಿ, “ಜನಾಂಗೀಯತೆ ಎಂಬುದು ಇರಬಾರದು. ನಾನು ಶ್ರೇಷ್ಟ ನೀನು ಕನಿಷ್ಟ ಎಂಬ ಭಾವನೆ ಯಾವಾಗ ನಮ್ಮಲ್ಲಿ ಮೂಡುತ್ತದೆಯೋ ಆಗ ಜನಾಂಗೀಯತೆ ಬೆಳೆಯುತ್ತದೆ. ಅದರ ಬದಲಾಗಿ ನಾವೆಲ್ಲರೂ ಮಾನವರು ಪರಸ್ಪರ ಸಹೋದರರೆಂಬ ಭಾವನೆ ಸದಾ ನಮ್ಮಲ್ಲಿ ಇರಬೇಕಾಗಿದೆ. ಜಗತ್ತಿನುದ್ದಕ್ಕೂ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಾವು ಈವರೆಗೆ ತಲುಪಿದ್ದೇವೆ. ಯಾರಾದರೂ ಏನಾದರೂ ಪಡೆಯಬೇಕಿದ್ದರೆ ಅದಕ್ಕೆ ಪರಿಶ್ರಮ ಮತ್ತು ತ್ಯಾಗ ಅತ್ಯಗತ್ಯವಾಗಿದೆ. ತ್ಯಾಗ ಅಥವಾ ಬಲಿದಾನ ಮಾಡದಿದ್ದರೆ ಅದರಲ್ಲಿ ಜಯ ಎನ್ನುವುದೇ ಸಿಗುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯ
ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ನಿಸಾರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ಸಂಚಾಲಕಿ ವಾಜಿದಾ ತಬಸ್ಸುಮ್ ಧನ್ಯವಾದ ತಿಳಿಸಿದರು. ಸರ್ಪರಾಜ್ ಮನ್ನ ಕಾರ್ಯಕ್ರಮ ನಿರೂಪಿಸಿದರು.
