- ಬಲವಂತವಾಗಿ ಮಹಿಳೆಯಿಂದ ಫೋನ್ ಕಸಿದುಕೊಂಡ ಬೈಕ್ ಸವಾರ
- ಮಹಿಳೆ ಬೈಕ್ನಿಂದ ಜಿಗಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ರ್ಯಾಪಿಡೋ ಬೈಕ್ ಸವಾರನು ರೈಡ್ಗಾಗಿ ಮಹಿಳೆಯನ್ನು ಪಿಕ್ ಅಪ್ ಮಾಡಿ ಬಳಿಕ ಅವಳನ್ನು ನಿರ್ಜನ ಪ್ರದೇಶಕ್ಕೆ ಕೆರೆದೊಯ್ಯುತ್ತಿದ್ದನು. ಇದನ್ನು ಅರಿತ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಚಲಿಸುತ್ತಿದ್ದ ಬೈಕ್ನಿಂದ ಜಿಗಿದಿದ್ದಾಳೆ.
ಈ ಘಟನೆ ಏಪ್ರಿಲ್ 21 ರಂದು ರಾತ್ರಿ ನಡೆದಿದೆ. ಕುಮಾರಿ (ಹೆಸರು ಬದಲಾಯಿಸಲಾಗಿದೆ) ಎಂಬ 30 ವರ್ಷದ ಮಹಿಳೆ ಇಂದಿರಾನಗರಕ್ಕೆ ತೆರಳಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಾಳೆ. ರಾತ್ರಿ 11.10ಕ್ಕೆ ಬೈಕ್ ಟ್ಯಾಕ್ಸಿ ಸವಾರ ಮಹಿಳೆಯನ್ನು ಪಿಕ್ ಅಪ್ ಮಾಡಲು ಬಂದಿದ್ದಾನೆ.
ಈ ವೇಳೆ, ಬೈಕ್ ಸವಾರ ಓಟಿಪಿ ಕೇಳಿ, ಅದನ್ನು ಚೆಕ್ ಮಾಡುವ ನೆಪದಲ್ಲಿ ಮಹಿಳೆಯ ಫೋನ್ ತೆಗೆದುಕೊಂಡಿದ್ದಾನೆ. ಬಳಿಕ, ಮಹಿಳೆ ತೆರಳಬೇಕಾಗಿರುವ ಇಂದಿರಾನಗರಕ್ಕೆ ಹೋಗುವ ಬದಲು ದೊಡ್ಡಬಳ್ಳಾಪುರದತ್ತ ಮಾರ್ಗ ಬದಲಾಯಿಸಿದ್ದಾನೆ. ಏಕೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದೀರಾ? ಎಂದು ಮಹಿಳೆ ಕೇಳಿದರೂ ಸವಾರ ಮೌನ ವಹಿಸಿ 60 ಕಿ.ಮೀ ವೇಗದಲ್ಲಿ ಚಲಿಸಿದ್ದಾನೆ. ಈ ಸಮಯದಲ್ಲಿ ಬೈಕ್ ಸವಾರ ಕುಡಿದಿದ್ದಾನೆ ಎಂದು ಮಹಿಳೆ ಅರಿತುಕೊಂಡಿದ್ದಾಳೆ.
ಬಲವಂತವಾಗಿ ಮಹಿಳೆ ಬೈಕ್ ಸವಾರನಿಂದ ತನ್ನ ಫೋನ್ ಕಸಿದುಕೊಂಡು ಇಂದಿರಾನಗರದಲ್ಲಿರುವ ತನ್ನ ಸ್ನೇಹಿತರಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾಳೆ. ಆದರೆ, ಆ ವ್ಯಕ್ತಿ ಫೋನ್ ಅನ್ನು ಮತ್ತೆ ಕಿತ್ತುಕೊಂಡು ಬೈಕ್ ಚಲಿಸುವ ವೇಗವನ್ನು ಹೆಚ್ಚಿಸಿದ್ದಾನೆ.
ಈ ವೇಳೆ, ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಬಿಎಂಎಸ್ಐಟಿ) ಬಳಿ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ವೇಗವಾಗಿ ಚಲಿಸುತ್ತಿದ್ದ ಬೈಕ್ನಿಂದ ಜಿಗಿದಿದ್ದಾಳೆ. ಜಿಗಿದ ವೇಳೆ ಮಹಿಳೆಗೆ ಗಾಯಗಳಾಗಿವೆ. ಬೈಕ್ ಸವಾರ ಮಹಿಳೆಯ ಫೋನ್ನೊಂದಿಗೆ ವೇಗವಾಗಿ ಬೈಕ್ ಓಡಿಸಿಕೊಂಡು ಪರಾರಿಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿಗಾಗಿ ನೆರೆಹೊರೆಯವರೊಂದಿಗೆ ಜಗಳ ; ಮಹಿಳೆ ಆತ್ಮಹತ್ಯೆ
ಬಿಎಂಎಸ್ಐಟಿ ಕಾಲೇಜಿನ ಕಾವಲುಗಾರರು ಮತ್ತು ದಾರಿಹೋಕರು ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಇವರ ಸಹಾಯದೊಂದಿಗೆ ತನ್ನೂರಿನಲ್ಲಿರುವ ಸ್ನೇಹಿತೆ ಮತ್ತು ಇಂದಿರಾನಗರದಲ್ಲಿರುವ ಇನ್ನೊಬ್ಬ ಸ್ನೇಹಿತನನ್ನು ಕರೆ ಮಾಡಿ ಕರೆಯಿಸಿದ್ದಾಳೆ. ಮಹಿಳೆ ಬೈಕ್ನಿಂದ ಜಿಗಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಹಾಯ ಮಾಡಲು ನಿರಾಕರಿಸಿದ ಪೊಲೀಸರು
ಕುಮಾರಿ ಸಹಾಯಕ್ಕಾಗಿ ಕರೆ ಮಾಡಿದ ನಂತರ ಗಾಬರಿಗೊಂಡ ಕುಮಾರಿ ಸ್ನೇಹಿತ ಇಂದಿರಾನಗರದಿಂದ ಜೆಬಿ ನಗರ ಠಾಣೆಗೆ ಧಾವಿಸಿ ತನ್ನ ಸ್ನೇಹಿತೆಗೆ ತೊಂದರೆಯಾಗಿದ್ದು, ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಕುಮಾರಿ ಇರುವ ಸ್ಥಳ ಪತ್ತೆ ಮಾಡುವಂತೆ ಮನವಿ ಮಾಡಿದ್ದಾನೆ. ಆದರೆ, ಅಧಿಕಾರಿಗಳು ಇದಕ್ಕೆ ನಿರಾಕರಿಸಿದ್ದು, ಇದು “ಗೆಳತಿ ಮತ್ತು ಗೆಳೆಯನ ಸಮಸ್ಯೆ” ಎಂದು ಹೇಳಿ ಸಹಾಯ ಮಾಡಲು ಪೊಲೀಸರು ನಿರಾಕರಿಸಿದ್ದಾರೆ.
”ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜೊತೆ ಮಾತನಾಡಿ 112ಕ್ಕೆ ದೂರವಾಣಿ ಕರೆ ಮಾಡಿ ಅವರಿಂದ ಪ್ರತಿಕ್ರಿಯೆ ಪಡೆಯಲು 20 ನಿಮಿಷ ಕಾಯಬೇಕಾಯಿತು. ನಂತರ ಯಲಹಂಕ ಪೊಲೀಸರ ಬಳಿಗೆ ಹೋಗಿ ದೂರು ಸಲ್ಲಿಸಿದೆವು” ಎಂದು ಮಹಿಳೆಯ ಸ್ನೇಹಿತ ಹೇಳಿದ್ದಾರೆ.
ಆರೋಪಿ ರ್ಯಾಪಿಡೋದಲ್ಲಿ ಹೋಂಡಾ ಆಕ್ಟಿವಾ ಎಂದು ವಾಹನದ ಬಗ್ಗೆ ನೋಂದಾಯಿಸಿದ್ದರೂ, ಬಜಾಜ್ ಪಲ್ಸರ್ನಲ್ಲಿ ಕುಮಾರಿಯನ್ನು ಪಿಕ್ ಮಾಡಲು ಬಂದಿದ್ದರು. ಟ್ಯಾಕ್ಸಿ ಅಗ್ರಿಗೇಟರ್ ಇಲ್ಲಿಯವರೆಗೆ ಕುಮಾರಿಯನ್ನು ಸಂಪರ್ಕಿಸಿಲ್ಲ.
“ಆರೋಪಿಯನ್ನು ಬಂಧಿಸಲಾಗಿದೆ. ಅವಳನ್ನು ತಪ್ಪಾದ ಸ್ಥಳಕ್ಕೆ ಕರೆದೊಯ್ದು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. 27 ವರ್ಷದ ತಿಂಡ್ಲು ನಿವಾಸಿ ದೀಪಕ್ ರಾವ್ ಎಂಬ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಲೈಂಗಿಕ ಕಿರುಕುಳ, ಅಪಹರಣ ಪ್ರಕರಣ ದಾಖಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಲಕ್ಷ್ಮಿ ಪ್ರಸಾದ್ ಹೇಳಿದರು.