ಮಳೆಗಾಲ ಶುರುವಾಗುತ್ತಿದ್ದಂತೆಯೇ ಡೆಂಗ್ಯೂ ಹಾವಳಿ ಆರಂಭವಾಗಿದ್ದು, ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 5 ಸಾವಿರ ಗಡಿ ದಾಟಿದೆ. ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 5187 ಡೆಂಗ್ಯೂ ಕೇಸ್ ಪತ್ತೆ ಆಗಿವೆ.
ಬೆಂಗಳೂರು ಸೇರಿದಂತೆ ನಾನಾಕಡೆ ಡೆಂಗ್ಯೂ ಜ್ವರ ಹಾವಳಿಯಿಂದ ಜನ ಹೈರಾಣಾಗಿದ್ದಾರೆ. ಜ್ವರ, ನೆಗಡಿಯಿಂದ ಬಳಲುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,230 ರಾಜ್ಯದಲ್ಲಿ 3,975 ಪ್ರಕರಣ ಪತ್ತೆಯಾಗಿದೆ. ಜೂನ್ ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.
ರಾಜ್ಯದಲ್ಲಿ 37,144 ಜನರ ರಕ್ತ ಮಾದರಿ ಪಡೆಯಲಾಗಿದೆ. 3,975 ಮಂದಿಗೆ ಪಾಸಿಟಿವ್ ಕಂಡುಬಂದಿದೆ. ಇದುವರೆಗೆ 5,187 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಇನ್ನು ಬೆಂಗಳೂರಿನಲ್ಲಿ 1,230 ಪ್ರಕರಣ ಕಂಡುಬಂದಿದೆ. ಹಾವೇರಿಯಲ್ಲಿ 389 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 12 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಮೈಸೂರಿನಲ್ಲಿ 358, ಚಿಕ್ಕಮಗಳೂರು 346, ಕಲಬುರಗಿ ಜಿಲ್ಲೆಯಲ್ಲಿ 153 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಯಾದಗಿರಿಯಲ್ಲಿ ಕೇವಲ 4 ಪ್ರಕರಣಗಳು ಮಾತ್ರ ಕಂಡು ಬಂದಿವೆ. ಡೆಂಗ್ಯೂ ನಿಯಂತ್ರಣಕ್ಕಾಗಿ ಈಗಾಗಲೇ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
“ಡೆಂಗ್ಯೂ ಪೀಡಿತರಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಜನರು ಸಹ ಮುನ್ನೆಚ್ಚರಿಕೆ ವಹಿಸಬೇಕು. ನೀರು ನಿಂತರೆ ಡೆಂಗ್ಯೂ ಹರಡುವ ಸೊಳ್ಳೆಗಳು ಹೆಚ್ಚಾಗುತ್ತವೆ. ಹಾಗಾಗಿ ಮನೆಯ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆ ಮೂಲಕ ಸಾರ್ವಜನಿಕರು ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಬೇಕು” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದರ್ಶನ್ ಪ್ರಕರಣ | ಜುಲೈ 4ರವರೆಗೆ ಪರಪ್ಪನ ಅಗ್ರಹಾರಕ್ಕೆ ಆರೋಪಿ ನಟ
ಆರೋಗ್ಯ ಇಲಾಖೆ ಡೆಂಗ್ಯೂ ಕಂಟ್ರೋಲ್ಗೆ ಹಲವು ಕ್ರಮ ಕೈಗೊಂಡಿದೆ. ಜನರು ತಮ್ಮ ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ನೀಡದಂತೆ ಸ್ವಚ್ಛತೆ ಕಾಪಾಡಿಕೊಳ್ಳಿ. ಸಂಜೆ, ರಾತ್ರಿ ವೇಳೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು ಅಂತ ಜನರಲ್ಲಿ ಮನವಿ ಮಾಡಿದೆ.
ಇಲಾಖೆಯಿಂದ ಸೊಳ್ಳೆಗಳ ಕಂಟ್ರೋಲ್ಗೆ ಫಾಗಿಂಗ್, ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸೋ ಕೆಲಸ ಜತೆಗೆ, ನೀರು ಸಂಗ್ರಹಣ ತೊಟ್ಟಿಗಳಲ್ಲಿ ಗಪ್ಪಿ ಅಥವಾ ಲಾರ್ವಾಹಾರಿ ಮೀನುಗಳನ್ನ ಬಿಟ್ಟು ಸೊಳ್ಳೆಗಳ ಉತ್ಪತ್ತಿ ತಡೆಗೆ ಮುಂದಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.