ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಸ್ನಾತಕೋತ್ತರವನ್ನು (NEET-PG) ಮುಂದೂಡಿದೆ. ನೀಟ್ ಮುಂದೂಡಿಕೆ, ಅಕ್ರಮಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, “ಪ್ರಶ್ನೆಪತ್ರಿಕೆ ಸೋರಿಕೆ ದಂಧೆ ಮತ್ತು ಶಿಕ್ಷಣ ಮಾಫಿಯಾದ ಮುಂದೆ ಪ್ರಧಾನಿ ಮೋದಿ ಸಂಪೂರ್ಣವಾಗಿ ಅಸಹಾಯಕರಾಗಿದ್ದಾರೆ” ಎಂದಿದ್ದಾರೆ.
ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ನಡೆದಿರುವ ಆರೋಪಗಳಿಂದಾಗಿ ನೀಟ್ ಪರೀಕ್ಷೆಯು ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರೀ ವಿವಾದ ಸೃಷ್ಠಿಸಿತ್ತು. ಇದೇ ಸಮಯದಲ್ಲಿ, ನೀಟ್ ಪರೀಕ್ಷೆಯನ್ನು ಮುಂದೂಡಲಾಗಿದೆ.
ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, “ಈಗ NEET PGಅನ್ನು ಸಹ ಮುಂದೂಡಲಾಗಿದೆ! ನರೇಂದ್ರ ಮೋದಿಯವರ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ಹಾನಿಗೊಂಡಿರುವುದಕ್ಕೆ ಇದು ಮತ್ತೊಂದು ದುರದೃಷ್ಟಕರ ಉದಾಹರಣೆಯಾಗಿದೆ. ಬಿಜೆಪಿ ಆಡಳಿತದಲ್ಲಿ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನಕ್ಕಾಗಿ ‘ಅಧ್ಯಯನ’ ಮಾಡುವ ವಾತಾವರಣವಿಲ್ಲ. ಬದಲಾಗಿ, ತಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ಸರ್ಕಾರದೊಂದಿಗೆ ‘ಹೋರಾಟ’ ಮಾಡುವ ಪರಿಸ್ಥಿತಿ ಎದುರಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈಗ ಸ್ಪಷ್ಟವಾಗಿದೆ – ಪ್ರತಿ ಬಾರಿಯೂ ಮೌನವಾಗಿದ್ದುಕೊಂಡು, ಚಮತ್ಕಾರವನ್ನು ಎದುರು ನೋಡುತ್ತಿದ್ದ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ದಂಧೆ ಮತ್ತು ಶಿಕ್ಷಣ ಮಾಫಿಯಾದ ಮುಂದೆ ಸಂಪೂರ್ಣವಾಗಿ ಅಸಹಾಯಕರಾಗಿದ್ದಾರೆ. ನರೇಂದ್ರ ಮೋದಿಯವರ ಅಸಮರ್ಥ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಅಪಾಯವಾಗಿದೆ – ಈ ಅಪಾಯದಿಂದ ನಾವು ದೇಶದ ಭವಿಷ್ಯವನ್ನು ಉಳಿಸಬೇಕು” ಎಂದು ಹೇಳಿದ್ದಾರೆ.
ಆರೋಗ್ಯ ಸಚಿವಾಲಯವು ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರತಿ ವರ್ಷ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ NEET-PG ಪರೀಕ್ಷಾ ಪ್ರಕ್ರಿಯೆಗಳ ದೃಢತೆಯನ್ನು ಸಂಪೂರ್ಣ ಮೌಲ್ಯಮಾಪನದೊಂದಿಗೆ ಕೈಗೊಳ್ಳಲು ನಿರ್ಧರಿಸಿದೆ. ಹೀಗಾಗಿ, ಪರೀಕ್ಷೆಯನ್ನು ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಆದಷ್ಟು ಬೇಗ ತಿಳಿಸಲಾಗುವುದು ಎಂದು ಹೇಳಿದೆ.
ಸರಿಸುಮಾರು 2 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಈ ನಿರ್ಧಾರವನ್ನು ನೀಟ್ ಪಿಜಿ ಆಕಾಂಕ್ಷಿಗಳು ತೀವ್ರವಾಗಿ ಟೀಕಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಸರ್ಕಾರವನ್ನು ಟೀಕಿಸಿದ್ದು, “ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಾದರೆ ಮೋದಿ ಸರ್ಕಾರ ಹೊಣೆಹೊತ್ತುಕೊಳ್ಳಬೇಕು. ಇದೀಗ NEET-PG ಪರೀಕ್ಷೆಯನ್ನು ಮುಂದೂಡಲಾಗಿದೆ. ಕಳೆದ 10 ದಿನಗಳಲ್ಲಿ 4 ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ/ಮುಂದೂಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ, ಅಕ್ರಮಗಳು ಮತ್ತು ಶಿಕ್ಷಣ ಮಾಫಿಯಾ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನುಸುಳಿದೆ. ಅಸಂಖ್ಯಾತ ಯುವಜನರು ಶೈಕ್ಷಣಿಕ ಅವ್ಯವಹಾರದ ತೊಂದರೆಯಿಂದ ಬಳಲುತ್ತಿದ್ದು, ಅವರ ಮೌನ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ‘ಎಕ್ಸ್’ನಲ್ಲಿ ಟ್ವೀಟ್ ಮಾಡಿದ್ದಾರೆ.
अब NEET PG भी स्थगित!
यह नरेंद्र मोदी के राज में बर्बाद हो चुकी शिक्षा व्यवस्था का एक और दुर्भाग्यपूर्ण उदाहरण है।
भाजपा राज में छात्र अपना करियर बनाने के लिए ‘पढ़ाई’ नहीं, अपना भविष्य बचाने के लिए सरकार से ‘लड़ाई’ लड़ने को मजबूर है।
अब यह स्पष्ट है – हर बार चुप-चाप तमाशा…
— Rahul Gandhi (@RahulGandhi) June 22, 2024