ಪುಣೆಯ 13 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ, ಚಿಕ್ಕಪ್ಪ ಮತ್ತು ಸೋದರ ಸಂಬಂಧಿಯೇ ನಿರಂತರ ಅತ್ಯಾಚಾರ ಎಸಗಿದ್ದು, ಪುಣೆ ಪೊಲೀಸರು ಬಂಧಿಸಿದ್ದಾರೆ.
ಶಾಲೆಯಲ್ಲಿ ‘ಗುಡ್ ಟಚ್ ಮತ್ತು ಬ್ಯಾಡ್ ಟಚ್’ ಬಗ್ಗೆ ಸೆಷನ್ ನಡೆಯುತ್ತಿದ್ದಾಗ ಈ ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರವು ಬೆಳಕಿಗೆ ಬಂದಿದೆ. ಈ ಬಾಲಕಿ ಈ ಸೆಷನ್‌ನಲ್ಲಿ ತನ್ನೆಲ್ಲ ಕಷ್ಟವನ್ನು ಹಂಚಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಪೋಲೀಸರ ಪ್ರಕಾರ, ಸಂತ್ರಸ್ತೆಯ ಸೋದರಸಂಬಂಧಿ 2023ರ ಜುಲೈ ತಿಂಗಳಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಮೇಲೆ ಕೆಟ್ಟ ಪರಿಣಾಮ ಬೀರುವುದಾಗಿ ಬೆದರಿಕೆ ಹಾಕಿದ್ದಾನೆ. ಬಾಲಕಿಯ ತಂದೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೀದರ್ | ಬಾಲಕಿ ಮೇಲೆ ಅತ್ಯಾಚಾರ; 60 ವರ್ಷದ ಕಾಮುಕನ ಬಂಧನ
2024ರ ಜನವರಿ ತಿಂಗಳಲ್ಲಿ ಆಕೆಯ ಚಿಕ್ಕಪ್ಪ ಆಕೆಯನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. “ಬಾಲಕಿ ಚಿಕ್ಕಪ್ಪನ ನಡೆಯನ್ನು ವಿರೋಧಿಸಿದಾಗ, ಕಿರುಚಲು ಪ್ರಯತ್ನಿಸಿದಾಗ, ಅವನು ಬಾಲಕಿಯ ಬಾಯಿಯನ್ನು ಬಿಗಿ ಹಿಡಿದು ಥಳಿಸಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಕೆಯ ತಂದೆ ಮತ್ತು ಚಿಕ್ಕಪ್ಪ 40 ವರ್ಷದವರಾಗಿದ್ದು ಆಕೆಯ ಸೋದರ ಸಂಬಂಧಿ 20 ವರ್ಷದವನಾಗಿದ್ದಾನೆ. ‘ಗುಡ್ ಟಚ್ ಮತ್ತು ಬ್ಯಾಡ್ ಟಚ್’ ಕುರಿತು ತನ್ನ ಶಾಲೆಯಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಬಾಲಕಿ ಈ ಮಾಹಿತಿ ಹೇಳಿದ್ದಾಳೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿ ತಿಳಿಸಿದರು.
ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅತ್ಯಾಚಾರ ಆರೋಪದಡಿ ಮೂವರನ್ನು ಬಂಧಿಸಲಾಗಿದೆ.