ತಮಿಳುನಾಡಿನ ಕಲ್ಲಾಕುರಿಚಿಯಲ್ಲಿ ನಡೆದ ಕಳ್ಳಭಟ್ಟಿ ಸಾರಾಯಿ ದುರಂತದಲ್ಲಿ ಸಾವಿಗೆ ಬಿಜೆಪಿಯೇ ಹೊಣೆ, ಇದು ಅಣ್ಣಾಮಲೈ ಪಿತೂರಿ ಎಂದು ಡಿಎಂಕೆ ನಾಯಕ ಆರೋಪಿಸಿದ್ದಾರೆ.
“ಅಕ್ರಮ ಮದ್ಯವನ್ನು ಉತ್ಪಾದಿಸಲು ಬಳಸಿದ ಮೆಥೆನಾಲ್ ಅನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟದ ಆಡಳಿತವಿರುವ ರಾಜ್ಯವಾದ ಪುದುಚೇರಿಯಿಂದ ಪಡೆಯಲಾಗಿದೆ. ಘಟನೆಯು ಅಣ್ಣಾಮಲೈ ಅವರ ಯೋಜಿತ ಪಿತೂರಿ” ಎಂದು ಪತ್ರಿಕಾಗೋಷ್ಠಿಯಲ್ಲಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ದೂರಿದ್ದಾರೆ.
ಜೂನ್ 18ರಂದು ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಜನರು ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್ ಭಾರತಿ ಈ ಘಟನೆಗೆ ಬಿಜೆಪಿಯ ತಮಿಳುನಾಡು ಅಧ್ಯಕ್ಷ ಕೆ ಅಣ್ಣಾಮಲೈ ಅವರನ್ನು ದೂಷಿಸಿದ್ದಾರೆ. ಇನ್ನು ಕಳ್ಳಭಟ್ಟಿ ಸಾರಾಯಿ ದುರಂತ ನಡೆದ ಕಾರಣ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಜೀನಾಮೆ ನೀಡಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು| ಕಳ್ಳಭಟ್ಟಿ ಸಾರಾಯಿ ದುರಂತ; ಮೃತರ ಸಂಖ್ಯೆ 49ಕ್ಕೆ ಏರಿಕೆ
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಣ್ಣಾಮಲೈ, “ಪ್ರಸ್ತುತ ನಡೆದ ಘಟನೆಯನ್ನು ನೋಡಿದಾಗ ಎಂಕೆ ಸ್ಟಾಲಿನ್ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಡಿಎಂಕೆ ನಾಯಕ ಆರ್‌ಎಸ್ ಭಾರತಿ, “ರಾಜೀನಾಮೆ ನೀಡಬೇಕಾಗಿರುವುದು ಅವರ (ಬಿಜೆಪಿ) ಸಚಿವರು ಮತ್ತು ಪುದುಚೇರಿಯ ಮುಖ್ಯಮಂತ್ರಿಗಳು. ಯಾಕೆಂದರೆ ಕಳ್ಳಭಟ್ಟಿ ತಯಾರಿಸಲು ಕಚ್ಚಾ ಸಾಮಗ್ರಿಗಳನ್ನು ಪುದುಚೇರಿಯಿಂದ ತರಲಾಗಿದೆ ಎಂದು ಪೊಲೀಸರು ನಮಗೆ ಹೇಳುತ್ತಿದ್ದಾರೆ” ಎಂದು ಹೇಳಿದರು.
ಹಾಗೆಯೇ, “ಈ ಸಂಪೂರ್ಣ ಘಟನೆಗೆ ಬಿಜೆಪಿ ಹೊಣೆ. ಅವರೇ ಇದನ್ನು ಮಾಡಿಸಿರುವುದು. ಇದು ಅಣ್ಣಾಮಲೈ ಅವರ ಯೋಜಿತ ಷಡ್ಯಂತ್ರ ಎಂದು ನಾನು ಹೇಳುತ್ತೇವೆ. ಇದು ವಿಕ್ರವಾಂಡಿ ಚುನಾವಣೆಗೆ ಸಂಬಂಧಿಸಿದೆ. ಚುನಾವಣೆಗೂ ಮುನ್ನ ಇದನ್ನು ಮಾಡುತ್ತಿದ್ದಾರೆ ಎಂಬ ಅನುಮಾನವಿದೆ” ಎಂದು ಶಂಕೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ತಮಿಳುನಾಡು| ಕಳ್ಳಭಟ್ಟಿ ಸಾರಾಯಿ ಸೇವಿಸಿ 29 ಮಂದಿ ಸಾವು
“ಡಾರ್ಜಿಲಿಂಗ್ ರೈಲು ಅಪಘಾತದ ನಂತರ ರೈಲ್ವೇ ಸಚಿವರು ರಾಜೀನಾಮೆ ನೀಡಿದ್ದಾರಾ? ನೀಟ್ ವಿಚಾರದಲ್ಲಿ ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆಯೇ? 2009ರಲ್ಲಿ 137 ಜನರು ಅಕ್ರಮ ಮದ್ಯ ಸೇವಿಸಿ ಸತ್ತಾಗ ನರೇಂದ್ರ ಮೋದಿ ರಾಜೀನಾಮೆ ನೀಡಿದ್ದಾರಾ” ಎಂದು ಆರ್‌ಎಸ್ ಭಾರತಿ ಪ್ರಶ್ನಿಸಿದರು.
ಕಲ್ಲಕುರಿಚಿ ಕಳ್ಳಭಟ್ಟಿ ದುರಂತ
ಜೂನ್ 18ರಂದು, ಕಲ್ಲಕುರಿಚಿ ಜಿಲ್ಲೆಯ ಕರುಣಾಪುರಂನ ದಿನಗೂಲಿ ಕಾರ್ಮಿಕರು, ಅನೇಕ ಜನರು ಪ್ಯಾಕೆಟ್ ಮತ್ತು ಸ್ಯಾಚೆಟ್‌ಗಳಲ್ಲಿ ಮಾರಾಟವಾದ ನಕಲಿ ಮದ್ಯವನ್ನು ಸೇವಿಸಿದ್ದಾರೆ. ರಾತ್ರಿ ವೇಳೆ ಅವರಲ್ಲಿ ಹಲವರಿಗೆ ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ಕಣ್ಣುಗಳಲ್ಲಿ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ಕಾಣಿಸಿಕೊಂಡಿದೆ.
#WATCH | Tamil Nadu: Actor and Tamilaga Vettri Kazhagam president Vijay visits victims of Hooch tragedy in Kallakurichi Government Medical College. pic.twitter.com/w2zM2vezIP
— ANI (@ANI) June 20, 2024
ಘಟನೆಯಲ್ಲಿ ಒಟ್ಟು 53 ಮಂದಿ ಸಾವನ್ನಪ್ಪಿದ್ದು, ಹತ್ತಾರು ಮಂದಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಕಾರ, ಮೆಥೆನಾಲ್ ಮಿಶ್ರಿತ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಸಾವು ಸಂಭವಿಸಿದೆ. ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.