ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಅಧ್ಯಯನದಲ್ಲಿ ಗದುಗಿನ ಇತಿಹಾಸ ಮತ್ತು ಸ್ಮಾರಕಗಳು ಸರ್ವಕಾಲಕ್ಕೂ ಸ್ಮರಣೀಯವಾಗಿವೆ. ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿಯ ಸಂವರ್ಧನೆಯಲ್ಲಿ ಭೌಗೋಳಿಕ ಸಂಪನ್ಮೂಲಗಳ ಪಾತ್ರ ಅನನ್ಯವಾಗಿದೆ ಎಂದು ಇತಿಹಾಸ ಸಂಶೋಧಕ ಮತ್ತು ಪ್ರವಾಸಿ ಮಾರ್ಗದರ್ಶಿ ಅ ದ ಕಟ್ಟಿಮನಿ ಅವರು ಹೇಳಿದರು.
ಗದಗ ಜಿಲ್ಲೆಯ ಹುಲಕೋಟಿಯ ಕೆ ಎಚ್ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಶನಿವಾರ ಡಾ. ಅಪ್ಪಣ್ಣ ಹಂಜೆ ಅವರ ಮಾರ್ಗದರ್ಶನದಲ್ಲಿ ‘ಗದಗ ನಗರದ ಇತಿಹಾಸ ಮತ್ತು ಸ್ಮಾರಕಗಳು’ ಕುರಿತು ಕ್ಷೇತ್ರಕಾರ್ಯ ಅಧ್ಯಯನ ಕೈಗೊಂಡ ವೇಳೆ ಮಾತನಾಡಿದರು.
ಗದಗ ನಗರದ ಇತಿಹಾಸ ಮತ್ತು ಸ್ಮಾರಕಗಳನ್ನು ಪರಿಚಯಿಸುತ್ತಾ, ಸ್ಥಳೀಯ ತ್ರಿಕೂಟೇಶ್ವರ, ಸರಸ್ವತಿ, ವೀರನಾರಾಯಣ, ಕರಿದೇವರ ಗುಡಿ, ರಾಮಲಿಂಗೇಶ್ವರ ದೇವಾಲಯಗಳು ಹಾಗೂ ಜುಮ್ಮಾ ಮಸೀದಿಯ ನಿರ್ಮಾತೃ, ಕಾಲಮಾನ, ವಾಸ್ತುಕಲೆ ವೈಶಿಷ್ಟ್ಯಗಳು, ಇವುಗಳ ಪೂಜೆ-ಪುನಸ್ಕಾರ, ಜೀರ್ಣೋದ್ಧಾರ ಇತ್ಯಾದಿ ಚಟುವಟಿಕೆಗಳಿಗೆ ಪ್ರಭುಗಳು ಮತ್ತು ಪ್ರಜೆಗಳು ಕೊಡಮಾಡಿದ ದಾನ-ದತ್ತಿಗಳನ್ನು ದಾಖಲಿಸಿರುವ ಶಾಸನಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಅಪ್ಪಣ್ಣ ಹಂಜೆ ಅವರು ವಿದ್ಯಾರ್ಥಿಗಳಿಗೆ ಗದುಗಿನ ಸ್ಮಾರಕಗಳು ಮತ್ತು ಶಿಲ್ಪಗಳ ಪರಿಕಲ್ಪನೆಗಳು, ವಾಸ್ತು ಲಕ್ಷಣಗಳು, ಪ್ರತಿಮಾ ಲಕ್ಷಣಗಳನ್ನು ವಿವರಿಸಿ, “ಕರ್ನಾಟಕದ ವಾಸ್ತುಶಿಲ್ಪ ಕಲೆಗಳ ಅಧ್ಯಯನದಲ್ಲಿ ಇವುಗಳ ಪಾತ್ರ ಅನನ್ಯವಾಗಿದ್ದು, ತ್ರಿಕೂಟೇಶ್ವರ, ವೀರನಾರಾಯಣ, ಜುಮ್ಮಾ ಮಸೀದಿಗಳ ಆಡಳಿತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ನಿರ್ವಹಣೆಯನ್ನು ಒಂದೇ ಕಮಿಟಿ ನಿರ್ವಹಿಸುತ್ತಿದ್ದ ಸಂಗತಿ ಜಿಲ್ಲೆಯ ಸಾಮರಸ್ಯ, ಸಹಬಾಳ್ವೆ, ಸಮನ್ವಯತೆ, ಸೌಹಾರ್ದತೆ, ಸಮಾನತೆ, ಸಹಿಷ್ಣುತೆ ಜೀವನ ಮೌಲ್ಯಗಳಿಗೆ ಅತ್ಯುತ್ತಮ ನಿದರ್ಶನವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ದಸಂಸ ಮುಖಂಡ ಉದಯ ಕಡಕೋಳ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ
ಇತಿಹಾಸ ಉಪನ್ಯಾಸಕ ಪ್ರೊ. ಬಸವಂತೆಪ್ಪ ದೊಡ್ಡಮನಿ ಅವರು ವಿದ್ಯಾರ್ಥಿಗಳಿಗೆ ಗದುಗಿನ ಸ್ಮಾರಕಗಲ್ಲುಗಳು, ಬಾವಿಗಳು, ಮಠಗಳು, ಕೆರೆಗಳ ಹಿರಿಮೆಯನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

can such program be arranged for general public(of course charging some cost)