ಈ ದಿನ ಸಂಪಾದಕೀಯ | ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೇ ಅಸ್ತ್ರ ಮತ್ತು ಗುರಾಣಿ

Date:

Advertisements
ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳುತ್ತಾರೆಂದರೆ, ಅದು ಸಂವಿಧಾನ ಉಳಿಸುವುದಕ್ಕಲ್ಲ, ಕಾಂಗ್ರೆಸ್ಸನ್ನು ತೆಗಳುವುದಕ್ಕೆ. ಇದು ಬೂತದ ಬಾಯಲ್ಲಿ ಭಗವದ್ಗೀತೆಯಷ್ಟೇ. ಇದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ, ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೊಂದೇ ಸರಿಯಾದ ಅಸ್ತ್ರ ಎನ್ನುವುದನ್ನು ಅರಿಯಬೇಕಾಗಿದೆ.

ಜೂನ್ 25- ಭಾರತ ದೇಶ ಕಂಡ ಕರಾಳ ದಿನ. 1975ರಲ್ಲಿ ಕಾಂಗ್ರೆಸ್ ಪಕ್ಷದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಜೂನ್ 25 ರಂದು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಪಾರ್ಲಿಮೆಂಟಿನ ಜಂಟಿ ಸಮಿತಿಯ ಬೆಂಗಳೂರಿನ ಸಭೆಗೆ ಆಗಮಿಸಿದ್ದ ಅಂದಿನ ಜನಸಂಘದ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾದ ಎಲ್.ಕೆ. ಅಡ್ವಾಣಿ ಸಹಿತ 29 ಲೋಕಸಭಾ ಸದಸ್ಯರನ್ನು ತುರ್ತುಪರಿಸ್ಥಿತಿಯ ಘೋಷಣೆಯ ಕಾರಣಕ್ಕಾಗಿ ಬಂಧಿಸಲಾಗಿತ್ತು. ದೇಶದಲ್ಲಿ 21 ತಿಂಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಕಾಂಗ್ರೆಸ್ ಪಕ್ಷದ ಅಂದಿನ ಆ ಕರಾಳ ಕ್ರಮದಿಂದ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರ ಸಹಿತವಾಗಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನು ಅನುಭವಿಸಿತು.

ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ಜನಸಂಘಿಗಳು ಪ್ರತಿವ‍ರ್ಷ ಜ್ಞಾಪಿಸಿಕೊಳ್ಳುತ್ತಾರೆ. ಮನಸೋಇಚ್ಛೆ ಕಾಂಗ್ರೆಸ್ಸಿನ ಸಂವಿಧಾನವಿರೋಧಿ ಕ್ರಮವನ್ನು ಖಂಡಿಸುತ್ತಾರೆ. ಅಸಲಿಗೆ ಜನಸಂಘಿಗಳು ರಾಜಕಾರಣದತ್ತ ಹೊರಳಲು ಕಾರಣವಾಗಿದ್ದೇ ತುರ್ತು ಪರಿಸ್ಥಿತಿ. ಅದನ್ನು ಅವರು ಮರೆಮಾಚಿ, ಸಂವಿಧಾನ ರಕ್ಷಕರು ನಾವೇ ಎಂಬ ಪೋಸು ಕೊಡಲು ಹವಣಿಸುತ್ತಾರೆ.

ಅದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮುಂದುವರೆಸಿದ್ದಾರೆ. ನಿನ್ನೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ‘ಜೂನ್ 25ಕ್ಕೆ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ತಂದು 50 ವರ್ಷಗಳು ಕಳೆದಿವೆ. ಸಂವಿಧಾನವನ್ನು ತಿರಸ್ಕರಿಸಿದ್ದನ್ನು, ಸಂವಿಧಾನ ಪ್ರತಿಯನ್ನು ಚೂರು ಚೂರಾಗಿ ಹರಿದಿದ್ದನ್ನು, ದೇಶವನ್ನೇ ಜೈಲಾಗಿಸಿದ್ದನ್ನು, ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ. ಅಂತಹ ಕೆಡುಕಿನ ಕೃತ್ಯಕ್ಕೆ ದೇಶವಾಸಿಗಳು ಕೈಹಾಕುವುದಿಲ್ಲ. ಅದೊಂದು ಕರಾಳ ಅಧ್ಯಾಯ. ನಾವು ಇನ್ನುಮುಂದೆ ಭಾರತದ ಸಂವಿಧಾನದ ನಿರ್ದೇಶನದಂತೆ ಸಾಮಾನ್ಯ ಜನರ ಕನಸುಗಳನ್ನು ಈಡೇರಿಸುವ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ’ ಎಂದು ಭರವಸೆಯನ್ನಿತ್ತಿದ್ದಾರೆ.

Advertisements

ಮೋದಿಯವರು ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾಗುತ್ತಿದ್ದಂತೆ ಇಂಡಿಯಾ ಒಕ್ಕೂಟದ ಸದಸ್ಯರು, ಸಂವಿಧಾನ ಪ್ರತಿಯನ್ನು ಎತ್ತಿ ಹಿಡಿಯುವ ಮೂಲಕ, ಸಂವಿಧಾನವನ್ನು ನೆನಪಿಸಿದರು. ಅಲ್ಲದೆ ರಾಹುಲ್ ಗಾಂಧಿ, ‘ಸಂವಿಧಾನ ಉಳಿಸಲು ನಾವು ಕಟಿಬದ್ಧರಾಗಿದ್ದೇವೆ. ಆದ್ದರಿಂದ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಂವಿಧಾನ ಪುಸ್ತಕ ಹಿಡಿದಿದ್ದೇವೆ. ಯಾವ ಶಕ್ತಿಯು ಭಾರತದ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನಾವು ಸಾರುತ್ತಿದ್ದೇವೆ’ ಎಂದರು.

ರಾಹುಲ್ ಗಾಂಧಿ ಹೀಗೆ ಹೇಳಲು ಕಾರಣ ಬಿಜೆಪಿಯೇ. ಕಳೆದ ಹತ್ತು ವರ್ಷಗಳ ಉದ್ದಕ್ಕೂ ಬಿಜೆಪಿ ಸರ್ಕಾರ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳಲಿಲ್ಲ. ಬದಲಿಗೆ, ಸಂವಿಧಾನದ ಕೀಳುಗಳನ್ನು ಕಳಚುತ್ತಾ, ಇಂಚಿಂಚು ಕೊಲ್ಲುತ್ತಾ ಸಾಗಿತ್ತು. ದೇಶದ ಶಾಶ್ವತ ವಿರೋಧ ಪಕ್ಷವಾದ ಸುದ್ದಿ ಮಾಧ್ಯಮಗಳನ್ನು ಖರೀದಿಸಿ, ಪ್ರಭುತ್ವದ ಹುಳುಕುಗಳನ್ನು ಹೆಕ್ಕಿ ದೇಶದ ಜನತೆಯ ಮುಂದಿಡದಂತೆ ತುರ್ತುಸ್ಥಿತಿಯನ್ನು ಹೇರಿತ್ತು. ರಾಮ-ಕೃಷ್ಣರು ಹಿನ್ನೆಲೆಗೆ ಸರಿದು, ಮೋದಿಯೇ ಪರಮಾತ್ಮನಾಗುವಂತಾಗಿತ್ತು. ಸಂವಿಧಾನದ ಬದಲಿಗೆ ಸರ್ವಾಧಿಕಾರಿ ಆಳ್ವಿಕೆ ಮತ್ತು ಅಘೋಷಿತ ತುರ್ತುಸ್ಥಿತಿ ಜಾರಿಯಲ್ಲಿತ್ತು.

ಅದಕ್ಕೆ ಪೂರಕವಾಗಿ ಬಿಜೆಪಿಯ ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ, ನಾಗೌರ್‍‌ನ ಜ್ಯೋತಿ ಮಿರ್ದಾ, ಅಯೋಧ್ಯೆಯ ಲಲ್ಲು ಸಿಂಗ್, ಮೀರತ್‌ನ ಅರುಣ್ ಗೋವಿಲ್‌ಗಳು ಸಂವಿಧಾನ ಬದಲಾಯಿಸುವ ಬಗ್ಗೆ ಬಹಿರಂಗವಾಗಿಯೇ ಬಡಬಡಿಸುತ್ತಿದ್ದರು. ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ, ‘ನಾವು ಆರ್ಟಿಕಲ್ 370 ತೆಗೆದುಹಾಕಿದ್ದೇವೆ. ಹಾಗೆಯೇ ಅನೇಕ ಬದಲಾವಣೆಗಳನ್ನು ಮಾಡಬೇಕಾಗಿದೆ. ಅದಕ್ಕಾಗಿ ನಮಗೆ ಸಂಸತ್ತಿನಲ್ಲಿ ಬಹುಮತದ ಅಗತ್ಯವಿದೆ’ ಎಂದು ಸತ್ಯವನ್ನೇ ಸಾರಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆಯೇ?

ಇಂದಿರಾ ಗಾಂಧಿಯವರ ತುರ್ತುಸ್ಥಿತಿಯ ಬಗ್ಗೆ, ‘ಬ್ರಿಟಿಷ್ ಆಳ್ವಿಕೆಯಲ್ಲಿ ಕೂಡಾ ಇಂತಹ ಬರ್ಬರ ಹಿಂಸಾಚಾರಕ್ಕೆ ನಾವು ತುತ್ತಾಗಿರಲಿಲ್ಲ. ನಾನು ಬದುಕುಳಿದರೆ ಇದಕ್ಕೆ ಜವಾಬ್ದಾರರಾದ ಜನರನ್ನು ಸರಿದಾರಿಗೆ ತರುವೆ’ ಎಂದು ಲೋಕನಾಯಕ ಜಯಪ್ರಕಾಶ್ ನಾರಾಯಣ ಅಂದು ಹೇಳಿದ್ದರು. ಇಂದು ಈ ಬಿಜೆಪಿಗರು ಸಂವಿಧಾನಕ್ಕೆ ಹಣೆಯಿಟ್ಟು ನಮಿಸುವ ನಖರಾಗಳಿಗೆ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಸರಿಯಾದ ಉತ್ತರ ಕೊಡುತ್ತಿದ್ದಾರೆ.

ರಾಹುಲ್ ಭಾರತ್ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ನ್ಯಾಯ ಯಾತ್ರೆಯಲ್ಲಿ ಮಣಿಪುರದಿಂದ ಮುಂಬೈವರೆಗೆ ‘ಸಂವಿಧಾನ್ ಬಚಾವೋ’ ಯಾತ್ರೆ ಕೈಗೊಂಡರು. ಸಂವಿಧಾನದ ತತ್ವಗಳು, ಮೌಲ್ಯಗಳು ಮತ್ತು ಮೂಲ ರಚನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದರು.

ಅಷ್ಟೇ ಅಲ್ಲ, ದಲಿತರು, ಬುಡಕಟ್ಟು ಸಮುದಾಯಗಳು, ಆದಿವಾಸಿಗಳು, ಅಲ್ಪಸಂಖ್ಯಾತರು, ಒಬಿಸಿಗಳ ಭವಿಷ್ಯವೇ ಸಂವಿಧಾನ. ಇದು ಸಾಮಾನ್ಯ ಪುಸ್ತಕವಲ್ಲ, ಇದು ನಿಮ್ಮ ಧ್ವನಿ. ಈ ಧ್ವನಿಯನ್ನು ಅಡಗಿಸಲು ಬಿಜೆಪಿ ಬಯಸುತ್ತಿದೆ ಎಂದು ರಾಹುಲ್ ಗಾಂಧಿ ಜನರ ಮನದಲ್ಲಿ ಸಂವಿಧಾನದ ಮಹತ್ವವನ್ನು ಬಿತ್ತತೊಡಗಿದರು.

ಇವತ್ತು ಇದರ ಪರಿಣಾಮವನ್ನು ಕಾಣುತ್ತಿದ್ದೇವೆ. ಹೂಂಕರಿಸುತ್ತಿದ್ದ ಮೋದಿಯವರ ಬಿಜೆಪಿಯನ್ನು 240 ಸ್ಥಾನಕ್ಕಿಳಿಸಲಾಗಿದೆ, ಐವತ್ತಾರು ಇಂಚಿನ ಎದೆ ಕುಗ್ಗಿದೆ, ಸಮ್ಮಿಶ್ರ ಸರ್ಕಾರಕ್ಕೆ ಸಹಕರಿಸಿದವರ ಮುಂದೆ ಮೋದಿ ತಗ್ಗಿ-ಬಗ್ಗಿ ನಡೆಯುವಂತಾಗಿದೆ. ಅಷ್ಟೇ ಅಲ್ಲ, ಸಂವಿಧಾನ ಕೃತಿಗೆ ಹಣೆ ಮುಟ್ಟಿ ನಮಸ್ಕರಿಸುವಂತೆ ಮಾಡಿದೆ.

ಇಂತಹ ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳುತ್ತಾರೆಂದರೆ, ಅದು ಸಂವಿಧಾನ ಉಳಿಸುವುದಕ್ಕಲ್ಲ, ಕಾಂಗ್ರೆಸ್ಸನ್ನು ತೆಗಳುವುದಕ್ಕೆ. ಇದು ಬೂತದ ಬಾಯಲ್ಲಿ ಭಗವದ್ಗೀತೆಯಷ್ಟೇ. ಇದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ, ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೊಂದೇ ಸರಿಯಾದ ಅಸ್ತ್ರ ಎನ್ನುವುದನ್ನು ಅರಿಯಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X