ಬಲಿಜ ಸಮುದಾಯದ ಏಕೈಕ ಶಾಸಕ ಪ್ರದೀಪ್ ಈಶ್ವರ್‌ಗೆ ಸಚಿವ ಸಂಪುಟ ಪುನರ್ ರಚನೆ ಸಮಯದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಬಲಿಜ ಹಾಗೂ ಅಹಿಂದ ಸಮುದಾಯಗಳ ಮುಖಂಡರು ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಸು.ಧಾ. ವೆಂಕಟೇಶ್, “ಕಾಂಗ್ರೆಸ್ ಈಗಾಗಲೇ ಅಹಿಂದ ವರ್ಗಗಳ ಮುಖಂಡರಿಗೆ ಸಚಿವ ಸ್ಥಾನ ನೀಡಿದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಹಿಂದ ವರ್ಗದ ಶಾಸಕರಿಗೆ ಸಚಿವ ಸ್ಥಾನ ದೊರೆತಿಲ್ಲ. ಅಲ್ಲದೆ, ಬಲಿಜ ಸಮುದಾಯಕ್ಕೆ ಸೇರಿದ ಏಕೈಕ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಸಚಿವರನ್ನಾಗಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಎಲ್ಲ ವರ್ಗಗಳಿಗೂ ನೀಡುತ್ತಿದೆ. ಈ ದಿಕ್ಕಿನಲ್ಲಿ ಜಿಲ್ಲೆಯ ಅಹಿಂದ ವರ್ಗಗಳಿಗೂ ನ್ಯಾಯ ಕೊಡಬೇಕು. ಪ್ರದೀಪ್ ಈಶ್ವರ್ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಉತ್ತಮ ಕಾರ್ಯಗಳು ಆಗುತ್ತಿವೆ” ಎಂದಿದ್ದಾರೆ.
ಜಿಲ್ಲಾ ಹಿಂದುಳಿದ ಜಾತಿ ಮತ್ತು ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ಮುನೇಗೌಡ ಮಾತನಾಡಿ, “ಕಾಂಗ್ರೆಸ್ ಸಾಮಾಜಿಕ ನ್ಯಾಯ ಎತ್ತಿಹಿಡಿಯುತ್ತಿದೆ. ಈಗ ಯಾವ ಸಮುದಾಯಗಳಿಗೆ ಸ್ಥಾನ ನೀಡಿಲ್ಲವೊ ಆ ಸಮುದಾಯಗಳಿಗೆ ಸಚಿವ ಸಂಪುಟ ಪುನರ್ ರಚನೆ ಸಮಯದಲ್ಲಿ ಅವಕಾಶ ಮಾಡಿಕೊಡಬೇಕು” ಎಂದು ಕೋರಿದರು.
“ಅಹಿಂದ ವರ್ಗಗಳಿಗೆ ಅವಕಾಶ ನೀಡಿದರೆ ಅಭಿವೃದ್ಧಿ ಸಾಧ್ಯ. ಹಿಂದುಳಿದ ವರ್ಗಗಳಿಗೆ ಸಿಗುವ ಸೌಲಭ್ಯಗಳು ಈ ಹಿಂದಿನ ಸರ್ಕಾರಗಳಲ್ಲಿ ವಾಪಸ್ ಹೋಗಿವೆ. ಈ ಸಮುದಾಯಗಳನ್ನು ತಲುಪಿಲ್ಲ. ಆದ್ದರಿಂದ ಆ ಸಮುದಾಯಗಳವರೇ ಸಚಿವರಾದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ” ಎಂದಿದ್ದಾರೆ.
“ಲೋಕಸಭಾ ಚುನಾವಣೆ ಸಮಯದಲ್ಲಿ ಯಾವ ರೀತಿಯಲ್ಲಿ ಅಹಿಂದ ಸಮುದಾಯಗಳಿಗೆ ವಂಚನೆ ಆಗಿದೆ ಎನ್ನುವುದು ಗೊತ್ತು. ಅಹಿಂದ ಸಮುದಾಯಗಳನ್ನು ಬೆಳೆಸುವ ವ್ಯಕ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್‌ನ ರಾಜ್ಯ ಮುಖಂಡರಲ್ಲಿ ಮನವಿ ಮಾಡುತ್ತೇವೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬರ ಸಂಘದ ಮುಖಂಡ ನರೇಂದ್ರ ಬಾಬು, ಬಿ.ಎಲ್.ಶ್ರೀನಿವಾಸ್, ಕ್ರೈಸ್ತ ಸಮುದಾಯದ ಮುಖಂಡ ಹೆನ್ರಿ ಪ್ರಸನ್ನ ಕುಮಾರ್, ಬಲಿಜ ಸಮುದಾಯದ ನಾಯಕನಹಳ್ಳಿ ನಾರಾಯಣ ಸ್ವಾಮಿ, ಎಸ್.ಪಿ.ಶ್ರೀನಿವಾಸ್, ಕುಪೇಂದ್ರ, ಎಸ್.ಎಂ.ರಫೀಕ್ ಮತ್ತಿತರರು ಪಾಲ್ಗೊಂಡಿದ್ದರು.