ಪೆಟ್ರೋಲ್, ಡಿಸೇಲ್, ಹಾಲು, ತರಕಾರಿ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಇಂಧನ ದರ ಏರಿಸಿ ಆದೇಶಿಸಿದ ಬೆನ್ನಲ್ಲೇ, ಆಟೋ ಪ್ರಯಾಣ ದರ ಏರಿಕೆ ಮಾಡಲು ಚಾಲಕರ ಸಂಘ ಒತ್ತಾಯಿಸಿದೆ.
ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ, ಆಟೋ ಪ್ರಯಾಣ ದರ ಏರಿಕೆ ಮಾಡಬೇಕೆಂದು ಆಟೋ ಚಾಲಕರ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಆರಂಭದ ದರ ₹40 ಹಾಗೂ ಪ್ರತಿ ಕಿಲೋಮೀಟರ್‌ಗೆ ₹20ಗೆ ಹೆಚ್ಚಿಸುವಂತೆ ಆಟೋ ಚಾಲಕರ ಸಂಘದ ಕಾರ್ಯಕರ್ತರು ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಶೇ.60 ರಷ್ಟು ಡೆಂಗ್ಯೂ ಪ್ರಕರಣ ಏರಿಕೆ
“ಕಳೆದ ಮೂರು ವರ್ಷಗಳಿಂದ ಪ್ರಯಾಣದ ದರ ಏರಿಕೆಯಾಗಿಲ್ಲ. 2021ರ ಡಿಸೆಂಬರ್ 20ರಂದು ಆಟೋ ದರ ಪರಿಷ್ಕರಿಸಲಾಗಿತ್ತು. ನಂತರ ಪರಿಷ್ಕರಣೆ ಮಾಡಿಲ್ಲ. ಹಾಗಾಗಿ, ಕನಿಷ್ಟ ಆಟೋ ದರವನ್ನು ₹30 ಯಿಂದ ₹40 ಏರಿಕೆ ಮಾಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಓಲಾ, ಉಬರ್ ಮಿನಿಮಮ್ ಚಾರ್ಚ್ ₹50 ಇದೆ” ಎಂದು ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಇದೀಗ, ಆರಂಭದ 2 ಕಿ.ಮೀಗೆ ₹30 ನಂತರ ಪ್ರತಿ ಹೆಚ್ಚುವರಿ ಕಿ.ಮೀ ₹15 ದರವಿದೆ.