ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆಕೊಟ್ಟಿದ್ದ ಮಂಗಳವರದ ತುಮಕೂರು ಜಿಲ್ಲಾ ಬಂದ್ ಯಶಸ್ವಿಯಗಿದೆ. ಜಿಲ್ಲೆಯಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿವಿಧ ಮಠಾಧೀಶರು, ರೈತ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಲಾರಿ ಚಾಲಕರು ಮತ್ತು ಮಾಲೀಕರ ಸಂಘ, ಚಿನ್ನ-ಬೆಳ್ಳಿ ವ್ಯಾಪಾರಿಗಳ ಸಂಘ, ಧಾನ್ಯ ವರ್ತಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಂಡಿವೆ. ನಾನಾ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ತುಮಕೂರು ಬಂದ್‌ಗೆ ಕರೆಕೊಡಲಾಗಿತ್ತು.
ತುಮಕೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎ.ಗೋವಿಂದರಾಜು, “ತುಮಕೂರು ಜಿಲ್ಲೆಯ ಹೇಮಾವತಿ ನೀರಿಗೆ ಕಂಕಟವಾಗಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸ್ಥಗೀತಗೊಳಿಸುವಂತೆ ಕಳೆದ ಎರಡು ತಿಂಗಳಿನಿಂದ ರೈತರು,ಜನಪ್ರತಿನಿಧಿಗಳು ವಿವಿಧ ರೀತಿಯ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಜೂನ್ 20 ರಂದು ನಡೆದ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿಯೂ ಈ ಭಾಗದ ಶಾಸಕರ ಅಹವಾಲುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಠಮಾರಿತನದ ಧೋರಣೆಯನ್ನು ಅನುಸರಿಸುತ್ತಿರುವುದು ಖಂಡನೀಯ” ಎಂದರು.
“ರಾಜ್ಯ ಸರ್ಕಾರ ಹೇಮಾವತಿ ನಾಲೆಯ 70ನೇ ಕಿ.ಮಿ.ನಿಂದ 169ನೇ ಕಿ.ಮಿವರೆಗೆ 35 ಕಿ.ಮಿ ಪೈಪ್‌ಲೈನ್ ಅಳವಡಿಸಿ ಕುಣಿಗಲ್, ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಮುಂದಾಗಿದೆ. ಇದು ಅವೈಜ್ಞಾನಿಕ ಯೋಜನೆ. ಅಲ್ಲದೆ, ಕಾನೂನು ಬಾಹಿರವೂ ಆಗಿದೆ. ಪೈಪ್‌ಲೈನ್ ಅಳವಡಿಸುವಾಗ ರೈತರ ಭೂಮಿಗೆ ಪರಿಹಾರ ನೀಡದೆ, ಸ್ಥಳೀಯ ಗ್ರಾಮ ಪಂಚಾಯತಿಗಳ ಒಪ್ಪಿಗೆ ಪಡೆಯದೆ ದುಂಡಾವರ್ತನೆಯಿಂದ ನೀರು ತೆಗೆದುಕೊಂಡು ಹೋಗಲು ಸರ್ಕಾರ ಹೊರಟಿದೆ. ಕುಣಿಗಲ್ ತಾಲೂಕಿಗೆ ನೀರು ಒದಗಿಸುವ ಹೇಮಾವತಿ ಮೂಲ ನಾಲೆ ಅಧುನೀಕರಣ ಗೊಂಡಿದೆ.ಹಾಗಾಗಿ ಆ ನಾಲೆಯ ಮೂಲಕವೇ ಹುತ್ತರಿದುರ್ಗವಗರೆಗೆ ನಿಗಧಿತ ನೀರು ತೆಗೆದುಕೊಂಡು ಹೋಗಬಹುದು. ಅನಗತ್ಯ ಖರ್ಚು ಮಾಡುವ ಪೈಪ್‌ಲೈನ್ ಕಾಮಗಾರಿ ಕೈಬಿಡಬೇಕು. ಇಲ್ಲದಿದ್ದರೆ, ಜನರು ಧಂಗೆ ಏಳುವ ಕಾಲ ದೂರವಿಲ್ಲ” ಎಂದು ಎ.ಗೋವಿಂದರಾಜು ಎಚ್ಚರಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, “ಇದು ತುಮಕೂರು ಜಿಲ್ಲೆಯ ಜೀವ ಜಲದ ಪ್ರಶ್ನೆಯಾಗಿದೆ. ತುಮಕೂರು ಜಿಲ್ಲೆಗೆ 24.05 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದರೂ ಇದುವರೆಗೂ ತುಮಕೂರು ನಗರದ 35 ವಾರ್ಡುಗಳಿಗೂ ಸಂಪೂರ್ಣವಾಗಿ ಕುಡಿಯಲು ಹೇಮಾವತಿ ನೀರು ನೀಡಲು ಸಾಧ್ಯವಾಗಿಲ್ಲ. ಹೀಗಿರುವಾಗ, ನಾಲೆಯ ಅರ್ಧದಲ್ಲಿಯೇ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋದರೆ, ಜಿಲ್ಲೆಯ ಇತರೆ ತಾಲೂಕುಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಎದುರಾಗುತ್ತದೆ. ಈಗಾಗಲೇ ಹೇಮಾವತಿ ನಾಲೆಯ 70ನೇ ಕಿ.ಮಿ.ನಿಂದ 228ನೇ ಕಿ.ಮಿ.ವರೆಗೆ ನಾಲೆಯನ್ನು ಅಧುನೀಕರಣಗೊಳಿಸಿದ್ದು, ನಿಗಧಿಪಡಿಸಿದ ನೀರು ಹರಿಯಲು ಯಾವುದೇ ಸಮಸ್ಯೆ ಇಲ್ಲ. ಜಿಲ್ಲೆಗೆ ಆಗುವ ಅನ್ಯಾಯವನ್ನು ಅರಿತು ಇಂದಿನ ಹೋರಾಟಕ್ಕೆ ಮಠಾಧೀಶರು, ರೈತರು, ಕನ್ನಡಪರ ಸಂಘಟನೆಗಳ ಮುಖಂಡರು ಎಲ್ಲಾ ನಾಗರಿಕರು ಬೆಂಬಲ ಸೂಚಿಸಿದ್ದಾರೆ.ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಯೋಜನೆ ನಿಲ್ಲುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ” ಎಂದರು.
ಹೋರಾಟದಲ್ಲಿ ಪಾಲ್ಗೊಂಡಿದ್ದ ಮಠಾಧೀಶರ ಪರವಾಗಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ತುಮಕೂರು ಜಿಲ್ಲೆಯ ಜನರಿಗೆ ನೀರು ಸಾಕಾಗದೆ ಪರಿತಪಿಸುತ್ತಿರುವ ಸ್ಥಿತಿಯಲ್ಲಿ, ಮಾಗಡಿ ಮತ್ತು ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಹೊರಟಿರುವುದು ತರವಲ್ಲ. ಇದುವರೆಗೂ ಜಿಲ್ಲೆಗೆ ನಿಗಧಿಯಾದ ನೀರು ಇದುವರೆಗೂ ಹರಿದಿಲ್ಲ. ವಾರದಲ್ಲಿ ಮೂರು ದಿನ ಕೊರಟಗೆರೆಯ ಜಟ್ಟಿ ಅಗ್ರಹಾರ ಕೆರೆ ಮತ್ತು ಮಧುಗಿರಿಯ ಸಿದ್ದಾಪುರ ಕೆರೆಗೆ ನೀರು ನೀಡಿದ್ದು, ಇದರಿಂದ ಯಾವ ಪ್ರಯೋಜನವು ಅಯಾಯ ತಾಲೂಕಿನ ಜನರಿಗೆ ಆಗಿಲ್ಲ.ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ಭೂಮಿಗಳಲ್ಲಿಯೇ ರೈತರ ಕೊಳವೆ ಬಾವಿಗಳಿಗೆ ನೀರಿಲ್ಲ. ರೈತರು ಆತ್ಮಹತ್ಯೆಯ ಹಾದಿ ತುಳಿಯುತಿದ್ದಾರೆ.ಒಂದು ವೇಳೆ ಎಕ್ಸ್ ಪ್ರೆಸ್ ಲಿಂಕ್‌ಕೆನಾಲ್ ಜಾರಿಗೆ ಬಂದರೆ,ರೈತರ ಆತ್ಮಹತ್ಯೆ ಮತ್ತಷ್ಟು ಹೆಚ್ಚಾಗಲಿದೆ.ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯೋಜನೆಯನ್ನು ಕೈಬಿಡಬೇಕು.ಇಲ್ಲದಿದ್ದಲ್ಲಿ ಯಾವ ಹೋರಾಟಕ್ಕೂ ನಾವು ಕೈಜೋಡಿಸಲಿದ್ದೇವೆ” ಎಂದರು.
ಪ್ರತಿಭಟನೆಯಲ್ಲಿ ಅನ್ನಪೂರ್ಣೇಶ್ವರಿ ಸಂಸ್ಥಾನದ ಬಸವಲಿಂಗ ಮಹಾಸ್ವಾಮೀಜಿ, ಗೊಲ್ಲಹಳ್ಳಿಯ ಶ್ರೀವಿಭವ ವಿದ್ಯಾಶಂಕರಸ್ವಾಮೀಜಿ, ಓಂಕಾರಮುನಿ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ ಪೂರ್ಣಾನಂದ ಆಶ್ರಮ ಕಲ್ಕರೆ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ,ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ,ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಪಂಚಾಕ್ಷರಯ್ಯ,ಸಿಪಿಐ(ಎಂ)ನ ಎನ್.ಕೆ.ಸುಬ್ರಮಣ್ಯ,ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್. ರವಿ, ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಹೊಳ್ಳ,ಕಾರ್ಯದರ್ಶಿ ವೇದಮೂರ್ತಿ,ಗುರುಪ್ರಕಾಶ್ ಬಳ್ಳೂಕರಾಯ,ಮಾಜಿ ಕೌನ್ಸಿಲರ್ ಕೆ.ಪಿ.ಮಹೇಶ್,ಬೆಳಗುಂಬ ಪ್ರಭಾಕರ್, ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಸೇರಿದಂತೆ ವಿವಿಧ ರೈತ ಸಂಘಟನೆ, ಕನ್ನಡಪರ,ಚಿನ್ನ,ಬೆಳ್ಳಿ ವ್ಯಾಪಾರಿಗಳ ಸಂಘ, ಆಟೋ ಚಾಲಕರ ಸಂಘ,ಲಾರಿ ಮಾಲೀಕರ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.