ಈ ದಿನ ಸಂಪಾದಕೀಯ | ಅಸಾಂಜ್ ದುಃಸ್ವಪ್ನದ ಅಂತ್ಯ- ಪತ್ರಿಕಾ ಸ್ವಾತಂತ್ರ್ಯ ಹನನದ ಆರಂಭ

Date:

Advertisements
ಅಮೆರಿಕ ಸರ್ಕಾರದ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಸರ್ಕಾರದ ಸಾವಿರಾರು ಗೋಪ್ಯಗಳನ್ನು ಬಯಲಿಗೆಳೆದು ಪ್ರಕಟಿಸಿದ್ದೇ ಅವರ ‘ಮಹಾ ಅಪರಾಧ’ ಆಗಿತ್ತು. ಆಸ್ಟ್ರೇಲಿಯಾ ಸಂಜಾತ ಅಸಾಂಜ್ ನನ್ನು ಅಮೆರಿಕ ಹದಿಮೂರು ವರ್ಷಗಳಿಂದ ಬೇಟೆಯಾಡತೊಡಗಿತ್ತು

 

ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಪ್ರತಿಪಾದಕ ತಾನೆಂದು ಡಂಗುರ ಹೊಡೆಯುವ ಅಮೆರಿಕ ದೇಶ, ಇಂತಹ ಸ್ವಾತಂತ್ರ್ಯದ ಪ್ರತಿಪಾದಕನೊಬ್ಬನನ್ನು ಹದಿನಾಲ್ಕು ವರ್ಷಗಳ ಕಾಲ ಎಡೆಬಿಡದೆ ಬೇಟೆಯಾಡಿದ ವಿಪರ್ಯಾಸದ ಕತೆಯಿದು. ತಾನು ಮಾಡಿಲ್ಲದ ತಪ್ಪನ್ನು ಮಾಡಿದ್ದೇನೆಂದು ಬಲವಂತದ ತಪ್ಪೊಪ್ಪಿಗೆ ಪಡೆದು ಆತನಿಗೆ ಸ್ವಾತಂತ್ರ್ಯದ ‘ಭಿಕ್ಷೆ’ ನೀಡಿರುವ ವಿಡಂಬನೆಯ ವ್ಯಥೆಯಿದು.

ವಿಶೇಷವಾಗಿ ಅಮೆರಿಕ ಸರ್ಕಾರದ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಅಮೆರಿಕ ಸರ್ಕಾರದ ಸಾವಿರಾರು ಗೋಪ್ಯಗಳನ್ನು ಬಯಲಿಗೆಳೆದು ಪ್ರಕಟಿಸಿದ್ದೇ ಅವರ ‘ಮಹಾ ಅಪರಾಧ’ ಆಗಿತ್ತು. ಆಸ್ಟ್ರೇಲಿಯಾ ಸಂಜಾತ ಅಸಾಂಜ್‌ನನ್ನು ಅಮೆರಿಕ ಹದಿಮೂರು ವರ್ಷಗಳಿಂದ ಬೇಟೆಯಾಡತೊಡಗಿತ್ತು

ಹದಿಮೂರು ವರ್ಷಗಳ ಕಾಲ ಸೂರ್ಯರಶ್ಮಿಯೇ ಸೋಕದ ಕಾರಾಗೃಹದ ಚಿತ್ರಹಿಂಸೆಯ ಕತ್ತಲ ಲೋಕದಿಂದ ಬಿಡುಗಡೆಯ ಬೆಳಕಿಗೆ ಮುಖ ಮಾಡಿದ್ದಾರೆ ಜೂಲಿಯನ್ ಅಸಾಂಜ್. ಜಗತ್ತಿಗೆಲ್ಲ ತಾನೇ ದೊಡ್ಡಣ್ಣ ಮತ್ತು ದೊಣೆನಾಯಕನೆಂದು ಮೆರೆದಾಡುವ ಅಮೆರಿಕ ಸರ್ಕಾರ ಅಸಾಂಜ್ ಮೇಲಿನ ಕೇಸುಗಳನ್ನು ಕಡೆಗೂ ಕೈಬಿಡಲು ಒಪ್ಪಿದೆ. ಆದರೆ ಈ ಸಮ್ಮತಿ ಷರತ್ತುಬದ್ಧ. ಅಮೆರಿಕದ ಗೂಢಚರ್ಯೆ ಕಾಯಿದೆಯನ್ನು ಉಲ್ಲಂಘಿಸಿರುವ ಆಪಾದನೆಗಳನ್ನು ಅಸಾಂಜ್ ಮೇಲೆ ಹೊರಿಸಿತ್ತು. ಈ ಆಪಾದನೆಗಳ ಪ್ರಕಾರ ಅಸಾಂಜ್ 175 ವರ್ಷಗಳ ಕಠಿಣ ಸಜೆ ಎದುರಿಸಿದ್ದರು.

Advertisements

ತಮ್ಮ ವಿರುದ್ಧ ನಡೆದ ಸುದೀರ್ಘ ಬೇಟೆಯಿಂದ ದಣಿದಿರುವ ಅಸಾಂಜ್ ಬಿಡುಗಡೆಗಾಗಿ ಕಾತರಿಸಿದ್ದಾರೆ. ತಾವು ಮಾಡದಿರುವ ತಪ್ಪುಗಳನ್ನು ಮಾಡಿದ್ದೇನೆಂದು ಅಮೆರಿಕದ ನ್ಯಾಯಾಲಯವೊಂದರ ಮುಂದೆ ಒಪ್ಪಿಕೊಳ್ಳಲು ಮುಂದಾಗಿದ್ದಾರೆ.

ಜೋ ಬೈಡನ್ ಸರ್ಕಾರದ ಈ ವಿಪರೀತ ನಡೆಯುವ ಅಮೆರಿಕದ ತನಿಖಾ ಪತ್ರಿಕೋದ್ಯಮದ ಮೇಲೆ ನಿರಂತರ ತೂಗುಕತ್ತಿಯನ್ನು ನೇತಾಡಿಸಿದೆ. ಸನಿಹದಲ್ಲೇ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗೆದ್ದು ಬಂದರೆ ಪತ್ರಕರ್ತರನ್ನು ಜೈಲಿಗೆ ತಳ್ಳುವ ಆತನ ಪ್ರತೀಕಾರಕ್ಕೆ ರೆಕ್ಕೆಪುಕ್ಕಗಳು ಮೂಡಲಿವೆ. ಪತ್ರಿಕಾ ಸ್ವಾತಂತ್ರ್ಯದ ಸ್ವರ್ಗ ಎಂಬ ಅಮೆರಿಕದ ಅಭಿದಾನಕ್ಕೆ ಕಳಂಕ ಅಂಟಲಿದೆ. ಈ ಹಿಂದಿನ ಟ್ರಂಪ್ ಸರ್ಕಾರವೇ ಅಸಾಂಜ್ ವಿರುದ್ಧ ಗೂಢಚರ್ಯೆ ಕಾಯಿದೆ ಉಲ್ಲಂಘನೆಯ ಹದಿನೇಳು ಕೇಸುಗಳನ್ನು ಜಡಿದಿತ್ತು. ರಾಷ್ಟ್ರೀಯ ರಕ್ಷಣಾ ಮಾಹಿತಿಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತೊಂದು ಕೇಸನ್ನು ಹಾಕಿತ್ತು.

ಅಮೆರಿಕದಂತಹ ಪ್ರಬಲ ಶಕ್ತಿಯನ್ನು ಎದುರಿಸಿ ಅಸಾಂಜ್ ಅವರನ್ನು ರಕ್ಷಿಸುವ ದುಸ್ಸಾಹಸಕ್ಕೆ ಯಾವ ದೇಶವೂ ಸಿದ್ಧವಿರಲಿಲ್ಲ. ಅಂತಹ ಸ್ಥಿತಿಯಲ್ಲಿ ದಕ್ಷಿಣ ಅಮೆರಿಕದ ಪುಟ್ಟ ದೇಶ ಈಕ್ವೆಡಾರ್ ಮುಂದೆ ಬಂದಿತ್ತು. ತನ್ನ ಉದ್ದೇಶ ಏನೇ ಇದ್ದರೂ, ಲಂಡನ್ನಿನ ತನ್ನ ರಾಯಭಾರ ಕಚೇರಿಯಲ್ಲಿ ಅಸಾಂಜ್‌ಗೆ ಏಳು ವರ್ಷಗಳ ಕಾಲ ರಾಜಕೀಯ ಆಶ್ರಯ ನೀಡಿತ್ತು. ಎರಡು ಕೋಣೆಗಳ ಈ ವಸತಿಯಲ್ಲಿ ಅಕ್ಷರಶಃ ಬಂಧಿಯಂತೆ ಬದುಕಿದರು ಅಸಾಂಜ್. ಹೊರಗೆ ಹಗಲಿರುಳೂ ಹೊಂಚು ಹಾಕಿದ್ದ ಬ್ರಿಟಿಷ್ ಪೊಲೀಸರು ಹೊಸ್ತಿಲು ದಾಟಿದರೆ ಬಂಧಿಸಿ ಎಳೆದೊಯ್ಯಲು ಕಾದಿದ್ದರು.

ಅಸಾಂಜ್ ಜೊತೆ ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ ನಂತರ ಆತನಿಗೆ ಗುಹ್ಯರೋಗಗಳಿವೆಯೇ ಇಲ್ಲವೇ ಎಂಬ ಪರೀಕ್ಷೆ ನಡೆಸಬೇಕೆಂದು ಮನವಿ ಮಾಡಿದ್ದರು ಸ್ವೀಡನ್ನಿನ ಇಬ್ಬರು ಮಹಿಳೆಯರು. ಈ ಮನವಿಯನ್ನೇ ಅಸಾಂಜ್ ವಿರುದ್ಧದ ದೂರನ್ನಾಗಿ ಸ್ವೀಡನ್ ಸರ್ಕಾರ ಪರಿವರ್ತಿಸಿ ಆತನ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಕೊಡಿಸಿತ್ತು. ಈ ಕಾರಸ್ಥಾನದ ಹಿಂದೆ ಅಸಾಂಜ್‌ನನ್ನು ಕೈವಶ ಮಾಡಿಕೊಂಡು ಶಿಕ್ಷಿಸಬೇಕೆಂಬ ಅಮೆರಿಕದ ಕೈವಾಡ ಇತ್ತು. ಈ ಕೇಸುಗಳನ್ನು ಆನಂತರ ಕೈಬಿಡಲಾಗಿದೆ.

ಈ ಪ್ರಕರಣದಲ್ಲಿ ಸ್ವೀಡನ್ ಗೆ ಮತ್ತು ಆ ಮೂಲಕ ಅಮೆರಿಕಗೆ ತಮ್ಮ ಹಸ್ತಾಂತರವನ್ನು ತಪ್ಪಿಸಿಕೊಳ್ಳಲು ಅಸಾಂಜ್ ಲಂಡನ್ನಿನ ಈಕ್ವೆಡಾರ್ ರಾಜತಾಂತ್ರಿಕ ಕಚೇರಿಯಲ್ಲಿ 2012ರಿಂದ ಏಳು ವರ್ಷಗಳ ಕಾಲ ರಾಜಕೀಯ ಆಶ್ರಯ ಪಡೆದಿದ್ದರು. ಅಮೆರಿಕ ಸರ್ಕಾರದಿಂದ ನ್ಯಾಯಸಮ್ಮತ ವಿಚಾರಣೆ ನಡೆಸದೆ ಅಸಾಂಜ್ ಅವರಿಗೆ ಮರಣದಂಡನೆ ವಿಧಿಸಬಹುದು. ಈ ಆತಂಕದಿಂದಾಗಿ ತಾನು ರಾಜಕೀಯ ಆಶ್ರಯ ನೀಡಿರುವುದಾಗಿ ಈಕ್ವೆಡಾರ್ ಸರ್ಕಾರ ಸಾರಿತ್ತು.

ಅಮೆರಿಕೆಯ ಒತ್ತಡಕ್ಕೆ ಕಡೆಗೂ ಮಣಿದ ಈಕ್ವೆಡಾರ್ ಸರ್ಕಾರ ಅಸಾಂಜ್‌ಗೆ ನೀಡಿದ್ದ ರಾಜಕೀಯ ಆಶ್ರಯವನ್ನು 2019ರಲ್ಲಿ ಹಿಂದಕ್ಕೆ ಪಡೆದಿತ್ತು. ಬ್ರಿಟನ್ ಸರ್ಕಾರ ಕೂಡಲೆ ಅವರನ್ನು ಬಂಧಿಸಿ ತನ್ನ ಕುಖ್ಯಾತ ಸೆರೆಮನೆ ಬೆಲ್ಮಾರ್ಶ್ ಗೆ ತಳ್ಳಿತ್ತು. ದಕ್ಷಿಣ ಲಂಡನ್ನಿನ ಈ ಸೆರೆಮನೆಯಲ್ಲಿ ಕ್ರೂರ ಮತ್ತು ಕುಖ್ಯಾತ ಕೈದಿಗಳನ್ನು ಇರಿಸಲಾಗುತ್ತದೆ. ಈ ಜೈಲಿನಲ್ಲಿ ಅಸಾಂಜ್ ಎದುರಿಸಿರುವ ನಿರಂತರ ಚಿತ್ರಹಿಂಸೆಯು ಅವರನ್ನು ಸಾವಿಗೆ ದೂಡಬಹುದು ಎಂಬ ಆತಂಕವನ್ನು ಬ್ರಿಟನ್ನಿನ 60 ಮಂದಿ ವೈದ್ಯರು ಆತಂಕ ವ್ಯಕ್ತಪಡಿಸಿದ್ದರು.

ಎರಡು ವರ್ಷಗಳ ಹಿಂದೆ ಅಸಾಂಜ್ ಅವರನ್ನು ಬ್ರಿಟನ್ ಸರ್ಕಾರ ಅಮೆರಿಕಕ್ಕೆ ಹಸ್ತಾಂತರಿಸುವುದು ಕೂದಲೆಳೆಯ ಅಂತರದಲ್ಲಿ ತಪ್ಪಿತ್ತು. ಪತ್ರಿಕಾ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಈ ಹಸ್ತಾಂತರವನ್ನು ತೀವ್ರವಾಗಿ ಖಂಡಿಸಿದ್ದವು. ವಿಶ್ವದ ಅಗ್ರಗಣ್ಯ ಬುದ್ಧಿಜೀವಿಗಳಲ್ಲೊಬ್ಬರೆಂದು ಕರೆಯಲಾಗುವ ನೋಮ್ ಚಾಮ್ ಸ್ಕಿ ಕೂಡ ದನಿಗೂಡಿಸಿದ್ದರು. ಸತ್ಯ ಸಂಗತಿಗಳ ಪ್ರಕಟಣೆಯನ್ನು ಅಮೆರಿಕ ಸರ್ಕಾರ ಬುಡಮೇಲು ಕೃತ್ಯವೆಂದೂ, ಮಹಾನ್ ಅಪರಾಧವೆಂದೂ ಬಗೆಯುತ್ತಿರುವುದು ಜನತಂತ್ರದ ಪಾಲಿಗೆ ಒದಗಿರುವ ದುರ್ದಿನವೆಂದೂ ಖಂಡಿಸಿದ್ದವು.

ವಿಕಿಲೀಕ್ಸ್  ಅಂತರ್ಜಾಲ ತಾಣದ ಅಪ್ರತಿಮ ಯಾತ್ರೆ ಶುರುವಾದದ್ದು 2006ರಲ್ಲಿ. ಹ್ಯಾಕಿಂಗ್ ಪ್ರವೀಣರಾಗಿದ್ದ ಅಸಾಂಜ್ ಅವರೇ ಈ ವೆಬ್‌ಸೈಟನ್ನು ನೋಂದಾಯಿಸಿದ್ದರು. ಸರ್ಕಾರಗಳು ಗೋಪನೀಯತೆಯ ಹೆಸರಿನಲ್ಲಿ ಅದುಮಿಟ್ಟ ತಮ್ಮ ಅಕೃತ್ಯಗಳ ಮಾಹಿತಿಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಯಾರು ಬೇಕಾದರೂ ಅಜ್ಞಾತವಾಗಿ ಈ ಅಂತರ್ಜಾಲ ತಾಣಕ್ಕೆ ಅಪ್ಲೋಡ್ ಮಾಡಬಹುದಿತ್ತು. ಅಪ್ಲೋಡ್ ಮಾಡುವವರ ಮಾಹಿತಿ ಬಹಿರಂಗ ಆಗದಂತೆ ಸಾಫ್ಟ್‌ವೇರ್ ರಕ್ಷಣೆ ಒದಗಿಸಲಾಗಿತ್ತು. ಅಮೆರಿಕ ತನ್ನ ಅತಿಕ್ರೂರ ಗ್ವಾಟೆನಮೋ ಜೈಲಿನಲ್ಲಿ ಎಸಗುತ್ತಿರುವ ದೌರ್ಜನ್ಯಗಳು, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ನಡೆಸಿದ ಹತ್ಯೆಗಳು, ಎಸಗಿದ ಮಾನವಹಕ್ಕು ಉಲ್ಲಂಘನೆಗಳನ್ನು ವಿಕಿಲೀಕ್ಸ್ ದಾಖಲೆಗಳು, ವಿಡಿಯೋಗಳ ಸಹಿತ ಹೊರಗೆಳೆಯಿತು. ವಿಶ್ವದ ಹತ್ತಾರು ದೇಶಗಳಿಂದ ಅಮೆರಿಕನ್ ರಾಯಭಾರಿಗಳು ಕಳಿಸಿದ್ದ ಗೋಪನೀಯ ಟಿಪ್ಪಣಿಗಳನ್ನು ಪ್ರಕಟಿಸಿತು. ವಿಕಿಲೀಕ್ಸ್ ನಿಂದ ಈ ಮಾಹಿತಿಗಳನ್ನು ಎತ್ತಿಕೊಂಡು ಪ್ರಪಂಚದ ಎಲ್ಲ ಮಾಧ್ಯಮ ಸದನಗಳು ವ್ಯಾಪಕವಾಗಿ ಪ್ರಕಟಿಸಿದವು. ಹೊಸ ಮಾದರಿಯ ತನಿಖಾ ಪತ್ರಿಕೋದ್ಯಮ ಮೈತಳೆದಿತ್ತು. ಅಮೆರಿಕ ಸರ್ಕಾರ ಹೌಹಾರಿತ್ತು.

ಭಾರತ ಸರ್ಕಾರಗಳು ಮತ್ತು ರಾಜಕಾರಣಿಗಳ ಕುರಿತೂ ವಿಕಿಲೀಕ್ಸ್ ಹಲವು ಸಂಗತಿಗಳನ್ನು ಹೊರಗೆಡವಿತ್ತು. ಮುಸ್ಲಿಮ್ ಭಯೋತ್ಪಾದಕರಿಗಿಂತ ಹಿಂದೂ ತೀವ್ರವಾದಿಗಳೇ ದೇಶಕ್ಕೆ ಹೆಚ್ಚು ಅಪಾಯಕಾರಿ ಎಂಬುದಾಗಿ ರಾಹುಲ್ ಮತ್ತು ಸೋನಿಯಾಗಾಂಧಿ ಅವರು ತಮ್ಮೊಂದಿಗೆ ಹೇಳಿದ್ದಾಗಿ ಭಾರತದಲ್ಲಿನ ಅಮೆರಿಕೆಯ ರಾಯಭಾರಿ ತಿಮೊತಿ ರೂಮರ್ ಕಳಿಸಿದ್ದ ಟಿಪ್ಪಣಿಯನ್ನು ವಿಕಿಲೀಕ್ಸ್  2011ರಲ್ಲಿ ಬಯಲಿಗೆಳೆದಿತ್ತು. ಪ್ರತಿಪಕ್ಷದಲ್ಲಿದ್ದ ಬಿಜೆಪಿ ಸಂಸತ್ತಿನಲ್ಲಿ ತೀವ್ರವಾಗಿ ಪ್ರತಿಭಟಿಸಿ ಸದನದ ಕಾರ್ಯಕಲಾಪಗಳು ನಡೆಯಲು ಬಿಟ್ಟಿರಲಿಲ್ಲ.

ಆದರೆ ಬಿಜೆಪಿಯ ವಿರುದ್ಧ ಹೊರಬಿದ್ದ ಮತ್ತೊಂದು ಟಿಪ್ಪಣಿ ಕೇಸರಿ ಪಕ್ಷದ ಬಾಯಿ ಕಟ್ಟಿಸಿತ್ತು. ‘ಹಿಂದೂ ರಾಷ್ಟ್ರವಾದವೆಂಬುದು ಬಿಜೆಪಿಯ ಪಾಲಿಗೆ ಮತಗಳನ್ನು ಸೆಳೆಯುವ ಅವಕಾಶವಾದಿ ವಿಷಯ. ಬಿಜೆಪಿ ಯಾವ ಕಾಲಕ್ಕೂ ಈ ವಿಷಯವನ್ನು ಬಿಟ್ಟುಕೊಡುವುದಿಲ್ಲ. ನಿರಂತರ ಚರ್ಚೆಯ ವಿಷಯವಾಗಿ ಮುಂದುವರೆಯಲಿದೆ’ ಎಂದಿದ್ದರು ಬಿಜೆಪಿಯ ನಾಯಕ ದಿವಂಗತ ಅರುಣ್ ಜೇಟ್ಲಿ. 2005ರ ಮೇ 6ರಂದು ತಮ್ಮೊಂದಿಗಿನ ಮಾತುಕತೆಯಲ್ಲಿ ಜೇಟ್ಲಿ ಈ ಮಾತು ಹೇಳಿದ್ದಾಗಿ ದೆಹಲಿಯ ಅಮೆರಿಕನ್ ದೂತಾವಾಸದ ಮುಖ್ಯಸ್ಥ ರಾಬರ್ಟ್ ಬ್ಲೇಕ್ ತಮ್ಮ ಸರ್ಕಾರಕ್ಕೆ ಟಿಪ್ಪಣಿ ಕಳಿಸಿದ್ದರು. 2011ರಲ್ಲಿ ವಿಕಿಲೀಕ್ಸ್ ಈ ಟಿಪ್ಪಣಿಯನ್ನು ಹೊರಗೆಡವಿತ್ತು. ಅವಕಾಶವಾದಿ ಎಂಬ ಪದವನ್ನು ತಾವು ಬಳಸಿಯೇ ಇಲ್ಲ ಎಂದು ಜೇಟ್ಲಿ ಸ್ಪಷ್ಟೀಕರಣ ನೀಡಿದ್ದರು.

ಕಾಶ್ಮೀರದ ನೂರಾರು ನಾಗರಿಕರನ್ನು ಕ್ರೂರ ಮತ್ತು ವ್ಯಾಪಕ ಚಿತ್ರಹಿಂಸೆಗೆ ಗುರಿಪಡಿಸಲಾಗಿದ್ಜು, ಈ ಕುರಿತು ಇಂಟರ್‌ ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ ಬಳಿ ಸಾಕ್ಷ್ಯಾಧಾರಗಳಿವೆ ಎಂಬುದಾಗಿ ಅಮೆರಿಕೆಯ ರಾಯಭಾರಿಗಳು ತಮ್ಮ ಸರ್ಕಾರಕ್ಕೆ ಕಳಿಸಿದ್ದ ಕೇಬಲ್ ಗಳನ್ನೂ ವಿಕಿಲೀಕ್ಸ್ ಹೊರಹಾಕಿತ್ತು. ಮಾನವಹಕ್ಕುಗಳ ಪ್ರತಿಪಾದನೆಯಲ್ಲಿ ತೋರಿದ ಅಸಾಧಾರಣ ಸಾಹಸಕ್ಕಾಗಿ ಅಸಾಂಜ್ ಅವರಿಗೆ 2011ರಲ್ಲಿ ಆಸ್ಟ್ರೇಲಿಯಾ ದೇಶದ ಸಿಡ್ನಿ ಶಾಂತಿ ಪ್ರತಿಷ್ಠಾನದ ಚಿನ್ನದ ಪದಕ ನೀಡಲಾಗಿತ್ತು.

ಅಸಾಂಜ್ ಮಾಡಬಾರದ ಕೆಲಸವನ್ನೇನೂ ಮಾಡಿಲ್ಲ. ಮುಕ್ತ ಸಮಾಜಗಳ ಸ್ವತಂತ್ರ ವಾತಾವರಣದಲ್ಲಿ ಮಾಡಬಹುದಾದ ಮತ್ತು ಮಾಡಬೇಕಾದ ಕರ್ತವ್ಯಗಳನ್ನೇ ನಿಭಾಯಿಸಿದರು. ತನ್ನ ನಾಗರಿಕ ಅಸಾಂಜ್ ಅವರನ್ನು ಆರೋಪಮುಕ್ತನನ್ನಾಗಿ ಬಿಡುಗಡೆ ಮಾಡಬೇಕೆಂದು  ಕಳೆದ ವರ್ಷ ಆಸ್ಟ್ರೇಲಿಯಾ ಸರ್ಕಾರ ಅಮೆರಿಕೆಯನ್ನು ಒತ್ತಾಯಿಸಿತ್ತು. ತಪ್ಪೊಪ್ಪಿಗೆ ಪಡೆದು ಐದು ವರ್ಷಗಳ ಸಜೆ ವಿಧಿಸಲು ಅಮೆರಿಕನ್ ಸರ್ಕಾರ ಒಪ್ಪಿತು. ಈ ಸಜೆಯ ಅವಧಿಯನ್ನು ಈಗಾಗಲೆ ಅನುಭವಿಸಿರುವ ಅಸಾಂಜ್ ಸ್ವತಂತ್ರ ಪ್ರಜೆಯಾಗಿ ತಮ್ಮ ತಾಯ್ನಾಡಿಗೆ ಮರಳಲಿದ್ದಾರೆ. ಅಸಾಂಜ್ ದುಃಸ್ವಪ್ನ ಅಂತ್ಯಗೊಂಡಿದೆ. ಆದರೆ ಪತ್ರಿಕಾ ಸ್ವಾತಂತ್ರ್ಯ ಹನನ ಮುಂದುವರೆದಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X