ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ಬಂದಾಗ ಆಡಳಿತ ಪಕ್ಷದ ಗಮನ ಸೆಳೆಯಲು ವಿರೋಧ ಪಕ್ಷಗಳ ಸದಸ್ಯರಿಗೆ ಸ್ಪೀಕರ್ ಸಾಕಷ್ಟು ಸಮಯಾವಕಾಶ ನೀಡಬೇಕಾಗುತ್ತದೆ. ಅಲ್ಲದೆ, ನಿಷ್ಪಕ್ಷಪಾತಿಯಾಗಿರಬೇಕು. ಆದರೆ ಇದ್ಯಾವುದು ಓಂ ಬಿರ್ಲಾ ಅವಧಿಯ ಕಾಲದಲ್ಲಿ ಹೆಚ್ಚಾಗಿ ನಡೆದಿಲ್ಲ. ಎಲ್ಲವೂ ಬಿಜೆಪಿ ನಾಯಕರು ಹಾಗೂ ಕೇಂದ್ರದ ಮಂತ್ರಿಗಳ ಪರೋಕ್ಷ ಆಣತಿಯಂತೆ ನಡೆದಿವೆ.
ಹದಿನೆಂಟನೇ ಲೋಕಸಭೆಯ ಸ್ಪೀಕರ್ ಆಗಿ ಬಿಜೆಪಿ ಸಂಸದ ಓಂ ಬಿರ್ಲಾ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. 61 ವಯಸ್ಸಿನ ಓಂ ಬಿರ್ಲಾ 2019ರವರೆಗೆ ಬಿಜೆಪಿ ವಲಯದಲ್ಲಿ ಹೆಚ್ಚು ಪರಿಚಿತ ಹೆಸರಾಗಿರಲಿಲ್ಲ. ಎನ್‌ಡಿಎ ಮೊದಲ ಅವಧಿಯಲ್ಲಿ 2014ರಿಂದ 2019ರವರೆಗೆ ಸುಮಿತ್ರಾ ಮಹಾಜನ್ ಅವರು ಒಂದು ಬಾರಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ನಂತರ ಅಚ್ಚರಿ ಎಂಬಂತೆ ರಾಜಸ್ಥಾನದ ಕೋಟ ಲೋಕಸಭಾ ಕ್ಷೇತ್ರದಿಂದ ಎರಡನೇ ಅವಧಿಗೆ ಆಯ್ಕೆಯಾಗಿದ್ದ ಬಿರ್ಲಾ ಅವರನ್ನು ನೂತನ ಸ್ಪೀಕರ್ ಆಗಿ ನೇಮಿಸಲಾಯಿತು.
ರಾಜಸ್ಥಾನದ ಕೋಟಾದಲ್ಲಿ 1962ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಓಂ ಬಿರ್ಲಾ, ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದುಕೊಂಡು ನಂತರದಲ್ಲಿ 1987ರಲ್ಲಿ ಕೋಟಾದ ಬಿಜೆಪಿಯ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದರು. 2003ರಿಂದ ದಕ್ಷಿಣ ಕೋಟಾದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ನಂತರ 2014ರಲ್ಲಿ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗಿ ಸಂಸತ್‌ಅನ್ನು ಪ್ರವೇಶಿಸಿದರು. ಅದೃಷ್ಟವೋ ಏನೋ ವಿವಾದ ರಹಿತ ಎಂಬ ಕಾರಣಕ್ಕೆ 2019ರಲ್ಲಿ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ನಂತರ ಓಂ ಬಿರ್ಲಾ ಅವರನ್ನು ಲೋಕಸಭೆ ಸ್ಪೀಕರ್ ಆಗಿ ಆಯ್ಕೆ ಮಾಡಲಾಯಿತು.
ಮೋದಿಯ ನೀಲಿ ಕಣ್ಣಿನ ವ್ಯಕ್ತಿ!
ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬಿನ್ನಾಭಿಪ್ರಾಯಗಳಿಂದಾಗಿ 2001ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಇದೇ ಅವಧಿಯಲ್ಲಿ ಗುಜರಾತಿನ ಕಚ್‌ನಲ್ಲಿ ಭೂಕಂಪ ಸಂಭವಿಸಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಓಂ ಬಿರ್ಲಾ 100 ಮಂದಿ ಸ್ವಯಂ ಸೇವಕರ ತಂಡಗಳನ್ನು ಕಟ್ಟಿಕೊಂಡು ತೊಂದರೆಗೆ ಸಿಲುಕಿದ ಜನರಿಗೆ ಸಹಾಯ ಮಾಡಿದ್ದರು. ಈ ಕಾರ್ಯ ಮೋದಿಯ ಗಮನವನ್ನು ಸೆಳೆದು ಓಂ ಬಿರ್ಲಾ ಅವರನ್ನು ಲೋಕಸಭೆ ಸ್ಪೀಕರ್ ಮಾಡಲು ಪರೋಕ್ಷವಾಗಿ ಸಹಕರಿಸಿತು ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುವ ಮಾತು.
ಡೆಪ್ಯುಟಿ ಸ್ಪೀಕರ್ ಇಲ್ಲದ ಮೊದಲ ಸ್ಪೀಕರ್
ಸಾಂಪ್ರದಾಯಿಕವಾಗಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಪ್ರತಿಪಕ್ಷಗಳಿಗೆ ನೀಡಲಾಗುತ್ತದೆ. ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಪ್ರಮಾಣದ ಮಹತ್ವ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೂ ಇದೆ. ಏಕೆಂದರೆ, ಅಧಿಕಾರದ ವಿಚಾರದಲ್ಲಿ ಇಬ್ಬರೂ ಸಮಾನರು. ಡೆಪ್ಯುಟಿ ಸ್ಪೀಕರ್ ಅವರದ್ದು, ಸ್ಪೀಕರ್ ಅವರ ಹುದ್ದೆಯ ಅಧೀನ ಹುದ್ದೆಯಲ್ಲ. ಸ್ಪೀಕರ್ ಅವರ ಅನುಪಸ್ಥಿತಿಯಲ್ಲಿ, ಡೆಪ್ಯುಟಿ ಸ್ಪೀಕರ್ ಅವರೇ ಸ್ಪೀಕರ್ ಆಗಿ ಕಲಾಪವನ್ನು ನಡೆಸಿಕೊಡುತ್ತಾರೆ. ಸ್ಪೀಕರ್‌ಗೆ ಇರುವಷ್ಟೇ ಹೊಣೆಗಾರಿಕೆ ಅವರಿಗೂ ಇರುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸಾಂಜ್ ದುಃಸ್ವಪ್ನದ ಅಂತ್ಯ- ಪತ್ರಿಕಾ ಸ್ವಾತಂತ್ರ್ಯ ಹನನದ ಆರಂಭ
ಮೊದಲ ಚುನಾಯಿತ ಲೋಕಸಭೆ ಅಸ್ತಿತ್ವಕ್ಕೆ ಬಂದಿದ್ದು 1952ರ ನಂತರದ 16 ಲೋಕಸಭೆಗಳಲ್ಲಿ ಆಡಳಿತ ಪಕ್ಷದ ಸಂಸದರೇ ಡೆಪ್ಯುಟಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದು ನಾಲ್ಕು ಬಾರಿ ಮಾತ್ರ. ಉಳಿದ 12 ಲೋಕಸಭೆಗಳಲ್ಲಿ ಆ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ನೀಡಲಾಗಿತ್ತು.
ಆದರೆ 2019ರ 17ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳಿಗೆ ವಿಪಕ್ಷ ನಾಯಕನ ಸ್ಥಾನ ಪಡೆಯುವ ಅರ್ಹತಾ ಸ್ಥಾನಗಳು ಲಭಿಸಿರಲಿಲ್ಲ. ಈ ಕಾರಣದಿಂದ ವಿರೋಧ ಪಕ್ಷಗಳು ಕೂಡ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಬೇಡಿಕೆಯಿಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಓಂ ಬಿರ್ಲಾ ಡೆಪ್ಯುಟಿ ಸ್ಪೀಕರ್ ಇಲ್ಲದೆ ಪೂರ್ಣಾವಧಿ ಪೂರೈಸಿದ ಮೊದಲ ಸ್ಪೀಕರ್ ಎನಿಸಿದ್ದಾರೆ.
ಈ ನಡುವೆ 17ನೇ ಲೋಕಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಅವರ ಹುದ್ದೆಯನ್ನು ತೆರವಾಗಿಯೇ ಇರಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿತ್ತು. ಅರ್ಜಿಯ ಸಂಬಂಧ ವಿಚಾರಣೆಯೂ ನಡೆದಿತ್ತು. 93ನೇ ವಿಧಿಯಲ್ಲಿ, ‘ನೇಮಕ ಮಾಡಬಹುದು’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಆಯ್ಕೆ ಕಡ್ಡಾಯವಾದುದು ಎಂಬುದು ಅರ್ಜಿದಾರರ ವಾದವಾಗಿತ್ತು. ಇದನ್ನು ಒಪ್ಪಿದ್ದ ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಸರ್ಕಾರದಿಂದ ವಿವರಣೆಯನ್ನೂ ಕೇಳಿತ್ತು. ಆದರೆ, ಅಂದಿನ ಆಡಳಿತಾರೂಢ ಬಿಜೆಪಿಯು ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು 5 ವರ್ಷ ಖಾಲಿ ಇರಿಸಿತ್ತು.
ಬಾಬ್ರಿ ಧ್ವಂಸ ಪ್ರಕರಣದಲ್ಲಿ ಜೈಲಿಗೋಗಿದ್ದ ಓಂ ಬಿರ್ಲಾ
ಓಂ ಬಿರ್ಲಾ ರಾಜಕೀಯವಾಗಿ ಬಿಜೆಪಿಯಲ್ಲಿದ್ದರೂ ಮಾತೃಸಂಸ್ಥೆ ಆರ್‌ಎಸ್‌ಎಸ್‌ನೊಂದಿಗೆ ಹೆಚ್ಚು ನಂಟು ಹೊಂದಿದ್ದರು. 1990ರ ದಶಕವು ಕೋಮುವಾದ ತೀವ್ರಗೊಂಡು ಅಯೋಧ್ಯೆ- ರಾಮಮಂದಿರ ಚಳವಳಿ ನಡೆಯುತ್ತಿದ್ದ ಕಾಲವಾಗಿತ್ತು. 1992ರ ಡಿಸೆಂಬರ್‌ನಲ್ಲಿ ಆರ್‌ಎಸ್‌ಎಸ್ ಹಾಗೂ ವಿಹೆಚ್‌ಪಿ ಕಾರ್ಯಕರ್ತರು ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಓಂ ಬಿರ್ಲಾ ಕೂಡ ಪಾಲ್ಗೊಂಡು ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಮಸೀದಿ ಧ್ವಂಸ ಪ್ರಕರಣದಲ್ಲಿ ಹಾಲಿ ಸ್ಪೀಕರ್ ಅವರು ಜೈಲಿಗೆ ಹೋಗಿ ಬಂದಿದ್ದು, ಅಯೋಧ್ಯೆ ಚಳವಳಿಯಲ್ಲಿ ಭಾಗಿಯಾಗಿದ್ದು ಸೇರಿದಂತೆ ಹಲವು ಮಾಹಿತಿಗಳನ್ನು ಲೋಕಸಭೆಯ ವೆಬ್‌ಸೈಟ್‌ನಿಂದ ಅಳಿಸಲಾಗಿದೆ ಎಂಬ ಆರೋಪವಿದೆ. ಬಾಬ್ರಿ ಧ್ವಂಸ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದು ಕೂಡ ಸ್ಪೀಕರ್ ಹುದ್ದೆ ಪಡೆಯಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗುತ್ತದೆ.
ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ – 100ಕ್ಕೂ ಹೆಚ್ಚು ಸಂಸದರ ಅಮಾನತು
100ಕ್ಕೂ ಹೆಚ್ಚು ಸಂಸದರ ಅಮಾನತು ಹಾಗೂ ಲೋಕಸಭೆಗೆ ಅಪರಿಚಿತರು ಪ್ರವೇಶ ಮಾಡಿದ್ದು ಓಂ ಬಿರ್ಲಾ ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ ನಡೆದಿದೆ.
2023ರಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕ ಗ್ಯಾಲರಿಯಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸದನಕ್ಕೆ ಜಿಗಿದು ಸ್ಮೋಕ್ ಬಾಂಬ್ ಎಸೆದು ಲೋಕಸಭೆಯಲ್ಲಿ ಭಯದ ವಾತಾವರಣವನ್ನು ಉಂಟು ಮಾಡಿದ್ದರು. ಪ್ರಜಾಪ್ರಭುತ್ವದ ದೇಗುಲದಲ್ಲಿ ಭದ್ರತೆ ಉಲ್ಲಂಘನೆಯಾದ ಕಾರಣ ಗೃಹ ಸಚಿವರು ಹಾಗೂ ಪ್ರಧಾನಿ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಸದಸ್ಯರು ಆಗ್ರಹಿಸಿದ್ದರು. ಕಲಾಪಕ್ಕೆ ಅಡ್ಡಿಯುಂಟು ಮಾಡಿದ ಕಾರಣ ಈ ಅವಧಿಯಲ್ಲಿ 100ಕ್ಕೂ ಹೆಚ್ಚು ಲೋಕಸಭೆ ಸದಸ್ಯರನ್ನು ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದರು.
ಲೋಕಸಭೆಯ ಕಲಾಪವನ್ನು ಪಕ್ಷಾತೀತವಾಗಿ ನಡೆಸುವುದು ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಅವರ ಹೊಣೆಗಾರಿಕೆ. 17ನೇ ಲೋಕಸಭೆಯ, 2023ರ ಚಳಿಗಾಲದ ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣ ನೀಡಿ ವಿಪಕ್ಷಗಳ 100 ಸಂಸದರನ್ನು ಅಮಾನತು ಮಾಡಲಾಗಿತ್ತು. ಈ ನಿರ್ಧಾರದ ಸಂಬಂಧ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಬಿರ್ಲಾ ಅವರು ಆಡಳಿತ ಬಿಜೆಪಿಯ ಆಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಪಕ್ಷಗಳ ಸಂಸದರು ಆರೋಪಿಸಿದ್ದರು. ಡೆಪ್ಯುಟಿ ಸ್ಪೀಕರ್ ಹುದ್ದೆ ಖಾಲಿಯಿದ್ದು, ವಿರೋಧ ಪಕ್ಷಗಳ ಸಂಸದರು ಆ ಹುದ್ದೆಯಲ್ಲಿ ಇದ್ದಿದ್ದರೆ ಇಂತಹ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬುದರ ಬಗ್ಗೆಯು ಆಗ ಚರ್ಚೆ ನಡೆದಿತ್ತು.
ರಾಹುಲ್ ಗಾಂಧಿ, ಮಹುವಾ ಮೊಯಿತ್ರಾ ಉಚ್ಚಾಟಣೆ
17ನೇ ಲೋಕಸಭೆ ಅವಧಿಯಲ್ಲಿ ಮಾನನಷ್ಟ ಪ್ರಕರಣ ಸಂಬಂಧ ಸೂರತ್ ನ್ಯಾಯಾಲಯ ಶಿಕ್ಷೆ ನೀಡಿದ ಕಾರಣ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು. ನಂತರದಲ್ಲಿ ಪ್ರಕರಣದಲ್ಲಿ ಜಾಮೀನು ಪಡೆದ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಮರಳಿಸಲಾಗಿತ್ತು.
ಲೋಕಸಭೆಯ ಸದಸ್ಯರ ಪೋರ್ಟಲ್‌ಗೆ ಬಳಸುವ ಐ.ಡಿ ಹಾಗೂ ಪಾಸ್ವರ್ಡ್ ಅನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು. ಓಂ ಬಿರ್ಲಾ ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿಯೇ ಇವೆರಡೂ ಘಟನೆಗಳು ನಡೆದಿವೆ.
ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ಬಂದಾಗ ಆಡಳಿತ ಪಕ್ಷದ ಗಮನ ಸೆಳೆಯಲು ವಿರೋಧ ಪಕ್ಷಗಳ ಸದಸ್ಯರಿಗೆ ಸ್ಪೀಕರ್ ಸಾಕಷ್ಟು ಸಮಯಾವಕಾಶ ನೀಡಬೇಕಾಗುತ್ತದೆ. ಅಲ್ಲದೆ, ನಿಷ್ಪಕ್ಷಪಾತಿಯಾಗಿರಬೇಕು. ಆದರೆ ಇದ್ಯಾವುದು ಓಂ ಬಿರ್ಲಾ ಅವಧಿಯ ಕಾಲದಲ್ಲಿ ಹೆಚ್ಚಾಗಿ ನಡೆದಿಲ್ಲ. ಎಲ್ಲವೂ ಬಿಜೆಪಿ ನಾಯಕರು ಹಾಗೂ ಕೇಂದ್ರದ ಮಂತ್ರಿಗಳ ಪರೋಕ್ಷ ಆಣತಿಯಂತೆ ನಡೆದಿವೆ. ಕೇವಲ ಬೆರಳೆಣಿಕೆಯಷ್ಟು ಶಾಸನಗಳು ಮಾತ್ರ ಲೋಕಸಭೆಯ ಸ್ಥಾಯಿ ಸಮಿತಿಗಳಿಂದ ಅನುಮೋದಿಸಲಾಗಿದೆ.
ಅಲ್ಲದೆ ಸ್ಪೀಕರ್ ಆಗಿ ಆಯ್ಕೆಗೊಂಡ ಮೊದಲ ದಿನದಲ್ಲಿಯೇ 1975 ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವನ್ನು ಓದಿದ್ದಾರೆ.ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಹೇರಲಾಗಿದ್ದ ತುರ್ತುಪರಿಸ್ಥಿತಿಯು ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ. ತುರ್ತುಪರಿಸ್ಥಿತಿ ದೇಶದ ಇತಿಹಾಸದ ಕರಾಳ ಅಧ್ಯಾಯ ಪ್ರತಿಯೊಬ್ಬರು ಮನಗಂಡಿದ್ದಾರೆ. ಅದು ಸತ್ಯವೂ ಹೌದು. ಆದರೆ ಸ್ಪೀಕರ್ ಆದವರು ಒಂದು ಪಕ್ಷದ ಪರವಾಗಿ ಮಾತನಾಡುವುದು ಖಂಡಿತಾ ಹುದ್ದೆಯ ಘನತೆಗೆ ತಕ್ಕುದಾದುದಲ್ಲ.
ಎರಡನೇ ಬಾರಿ ಸ್ಪೀಕರ್ ಹುದ್ದೆ ಅಲಂಕರಿಸಿರುವ ಓಂ ಬಿರ್ಲಾ ಅವರು 18ನೇ ಲೋಕಸಭೆಯಲ್ಲಾದರೂ ಪ್ರಾಮಾಣಿಕ ಹಾಗೂ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ಅಂತರಂಗ ಹಾಗೂ ಬಹಿರಂಗವಾಗಿ ಸಜ್ಜನರೆನಿಸಿಕೊಳ್ಳಬೇಕಿದೆ.