ತನ್ನ ಅತ್ತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ನಿರಾಕರಿಸಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ತನ್ನ ತೋಳುಗಳನ್ನು ಅತ್ತೆ ಬ್ಲೇಡ್‌ನಿಂದ ಕೊಯ್ದಿದ್ದಾಳೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಆಕೆಯ ಪತಿ, ಅತ್ತೆ, ನಾದಿನಿ ಹಾಗೂ ಇತರ ಸಂಬಂಧಿಕರ ವಿರುದ್ಧ ಹಲ್ಲೆ, ವರದಕ್ಷಿಣೆ ಬೇಡಿಕೆ ಹಾಗೂ ವಿಶ್ವಾಸದ್ರೋಹದ ಪ್ರಕರಣ ದಾಖಲಿಸಿದ್ದಾರೆ.
ಆಗ್ರಾದ ಅಂಜಲಿ ಚತುರ್ವೇದಿ 2022ರಲ್ಲಿ ವಿವಾಹವಾಗಿದ್ದರು. ತನ್ನ ಪತಿ ಮತ್ತು ಆತನ ಕುಟುಂಬಸ್ಥರೊಂದಿಗೆ ಗಾಜಿಪುರದಲ್ಲಿ ವಾಸಿಸುತ್ತಿದ್ದರು. ಆಕೆ ಗಾಜಿಪುರಕ್ಕೆ ತೆರಳಿದ ಕೆಲವೇ ದಿನಗಳಲ್ಲಿ ಆಕೆಗೆ ಪತಿಯ ಕುಟುಂಬದವರು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಆರೋಪಿಸಲಾಗಿದೆ.
ಎಫ್‌ಐಆರ್ ಪ್ರಕಾರ, ದೂರುದಾರ ಮಹಿಳೆಯ ಮೇಲೆ ಆಕೆಯ ಅತ್ತೆಗೆ ಲೈಂಗಿಕ ಆಕರ್ಷಣೆ ಇತ್ತು. ಆಕೆಯನ್ನು ತನ್ನ ಕಾಮತೃಷೆಗಾಗಿ ಒತ್ತಾಯಿಸುತ್ತಿದ್ದಳು. ಕೃತ್ಯಕ್ಕೆ ದೂರುದಾರ ಮಹಿಳೆ ನಿರಾಕರಿಸಿದಾಗ ಆಕೆಯ ಮೇಲೆ ಅತ್ತೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.
ತನ್ನ ಅತ್ತೆ ಎಸಗುತ್ತಿದ್ದ ಕೃತ್ಯದ ಬಗ್ಗೆ ತನ್ನ ಪತಿಯ ಬಳಿ ಹೇಳಿಕೊಂಡಿದ್ದಾರೆ. ಆದರೆ, ಆಕೆಯ ಮಾತನ್ನು ಪತಿ ನಿರಾಕರಿಸಿದ್ದಾನೆ. ಬಳಿಕ, ಆಕೆಯನ್ನು ಅತ್ತೆ ಹಿಂಸಿಸಲು ಆರಂಭಿಸಿದ್ದಳು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಮಹಿಳೆಗೆ ನಾನಾ ರೀತಿಯಲ್ಲಿ ಕಿರುಕುಳ ನೀಡಲು ಆರಂಭಿಸಿದ ಅತ್ತೆ, ಪದೇ ಪದೇ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾರೆ. ಆಕೆಯನ್ನು ನಿರಂತರವಾಗಿ ನಿಂದಿಸುವುದು, ಹಲ್ಲೆ ನಡೆಸುವುದು ಮಾಡಿದ್ದಾರೆ. ವರದಕ್ಷಿಣೆ ತರಲಾಗದಿದ್ದಾಗ, ತನ್ನ ಅತ್ತೆ, ನಾದಿನಿ ಹಾಗೂ ಪತಿ – ಆತನ ಸ್ನೇಹಿತರೊಂದಿಗೆ ಲೈಂಗಿಕ ಸಂಬಂಧ ಬೆಳೆಸುವಂತೆ ಬಲವಂತ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.