ಪ್ರಜ್ಞಾವಂತ ಯುವಜನತೆ ಪರಿಸರ ಸಂರಕ್ಷಣೆ ಬಗ್ಗೆ ಧ್ವನಿ ಎತ್ತಬೇಕಿದೆ. ಪರಿಸರ ಉಳಿಸುವುದು, ಬೆಳೆಸುವುದು ಯುವಜನತೆಯ ಕರ್ತವ್ಯ ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದಿನೇಶ್ ಬಿ ಜಿ ಹೇಳಿದರು.
ಎಐಡಿವೈಒ ಕ್ರಾಂತಿಕಾರಿ ಸಂಘಟನೆಯ 59ನೇ ಸಂಸ್ಥಾಪನಾ ದಿನದ ಅಂಗವಾಗಿ ಮೈಸೂರಿನ ಸಿಪಿಸಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ʼಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆʼ ವಿಷಯದ ಕುರಿತು ಮಾತನಾಡಿದರು.
ಎಐಡಿವೈಒ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಸುನಿಲ್ ಟಿ ಆರ್ ಮಾತನಾಡಿ, “ಪ್ರಸ್ತುತ ದಿನಗಳ ವಾತಾವರಣವು ಕಲುಷಿತವಾಗುತ್ತಿದೆ. ಹವಾಮಾನದ ವೈಪರೀತ್ಯದಿಂದ ಮಾನವ ಹಾಗೂ ಜೀವ ಸಂಕುಲದ ಮೇಲೆ ಭೀಕರ ದುಷ್ಪರಿಣಾಮಗಳು ಹೆಚ್ಚಾಗಿವೆ. ಹೆಚ್ಚೆಚ್ಚು ಮಾಲಿನ್ಯಕ್ಕೆ ಒಳಗಾಗುತ್ತಿರುವ ಈ ಜಗತ್ತನ್ನು ನೋಡುತ್ತಿದ್ದರೆ ಬೇಸರವಾಗುತ್ತದೆ” ಎಂದು ವಿಷಾದಿಸಿದರು.
ವಿಶೇಷ ಅಧಿಕಾರಿ ಡಾ ದೊಡ್ಡಯ್ಯ ಮಾತನಾಡಿ, “ಪರಿಸರ ಹಾಳಾಗಲು ಯಾರು ಕಾರಣ? ನಮ್ಮೆಲ್ಲರ ಆಧುನಿಕ ಜೀವನದ ಶೈಲಿ, ಮರಗಿಡಗಳ ಮೇಲೆ ಗೌರವ, ಪ್ರೀತಿ ಬೆಳೆಸಿಕೊಳ್ಳದೆ ಇರುವುದರಿಂದ ನಮ್ಮ ನೈಸರ್ಗಿಕ ಪರಿಸರ ಅಷ್ಟೇ ಅಲ್ಲದೆ ಪ್ರಸ್ತುತ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳೂ ಕೂಡ ಮಲಿನವಾಗಿವೆ. ಇದರ ಬಗ್ಗೆ ಯುವಜನತೆ ಎಚ್ಚೆತ್ತು ಪರಿಸರದ ಧ್ವನಿಯಾಗಬೇಕು. ಸಮಾಜದ ಬದಲಾವಣೆಯ ಜತೆಗೆ ಪರಿಸರ ಉಳಿಸಿಕೊಳ್ಳಬೇಕು” ಎಂದರು.
ಮಧುಸೂದನ್ ಎಸ್ ಎಂ ಮಾತನಾಡಿ, “ಪರಿಸರದ ಮೇಲೆ ಚಂಡಮಾರುತ, ಪ್ರವಾಹ, ಬರದಂತಹ ವಿಕೋಪಗಳಿಗೆ ಬಂಡವಾಳ ಶಾಹಿಗಳ ಲಾಭಕೋರತನ ಮೂಲ ಕಾರಣ. ಅಕ್ರಮ ಗಣಿಗಾರಿಕೆ, ಪ್ರವಾಸೋದ್ಯಮ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯನಾಶ, ನೈಸರ್ಗಿಕ ವಿಕೋಪಕ್ಕೆ ಕಾರಣವಾಗಿದೆ. ಪರಿಸರ ವಿರೋಧಿ ಕಾರ್ಪೊರೇಟ್ ಕುಳಗಳ ವಿರುದ್ಧ ಯುವಜನತೆ ಸಂಘಟಿತರಾಗಿ ಹೋರಾಟ ಮಾಡಿ ಪರಿಸರ ಉಳಿಸಿಕೊಳ್ಳಬೇಕಿದೆ” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಂಗ್ರಹವಾದ ಹೆಚ್ಚುವರಿ ಹಾಲಿಗೆ ಸಬ್ಸಿಡಿ ಹಾಗೂ ಬಡಜನರಿಗೆ ರಿಯಾಯಿತಿ ದರದಲ್ಲಿ ನೀಡುವಂತೆ ಎಐಡಿಎಸ್‌ಒ ಆಗ್ರಹ
ಕಾರ್ಯಕ್ರಮದಲ್ಲಿ ಎಐಡಿವೈಒ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ನೀತುಶ್ರಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
