ಒತ್ತಡ ಬದುಕಿನಿಂದ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಇದಕ್ಕೆ ಜೀವನಶೈಲಿ, ಆಹಾರ ಪದ್ಧತಿಯೂ ಕಾರಣವಾಗಿದೆ ಎಂದು ಎಫ್‌ಪಿಎಐ ಅಧ್ಯಕ್ಷ ಹಾಗೂ ದಂತ ವೈದ್ಯ ಡಾ.ನಾಗೇಶ ಪಾಟೀಲ್ ಹೇಳಿದರು.
ಬೀದರ್ ತಾಲೂಕಿನ ಮನ್ನಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ 2023-24 ನೇ ಶೈಕ್ಷಣಿಕ ಸಾಲಿನ ʼರಾಷ್ಟ್ರೀಯ ಸೇವಾ ಯೋಜನೆʼ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳು ಗುಣಮಟ್ಟ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಯಾವುದೇ ಸಾಧನೆ ಮಾಡಬೇಕಾದರೆ ಸದೃಢ ಆರೋಗ್ಯದ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ದೈಹಿಕ ಶ್ರಮಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು” ಎಂದು ಸಲಹೆ ನೀಡಿದರು.
ಪತ್ರಕರ್ತ ಬಾಲಾಜಿ ಕುಂಬಾರ್ ಮಾತನಾಡಿ, “ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವ ರೂಪಿಸಿ ಸಜ್ಜನನ್ನಾಗಿ ರೂಪಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳ ಜೊತೆಗೆ ಓದುವ ಹವ್ಯಾಸ ರೂಢಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಸುಲಭವಾಗಿ ದಕ್ಕುತ್ತದೆ. ಆಧುನಿಕ ಜೀವನ ಶೈಲಿಯಿಂದ ಆರೋಗ್ಯದ ಜೊತೆಗೆ ಸುತ್ತಲಿನ ಸಮಾಜವೂ ಕೆಡುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಧನರಾಜ ಬಿರಾದರ್ ಮಾತನಾಡಿ, “ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗಣಮಟ್ಟದ ಶಿಕ್ಷಣ ಹಾಗೂ ಸಂಸ್ಕೃತಿ ಬೋಧಿಸಲಾಗುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಳ್ಳಿಯ ಬದುಕು, ಭಾಷೆ, ಸಂಸ್ಕೃತಿ ಹಾಗೂ ಸಮಸ್ಯೆಗಳು ಅರಿತುಕೊಳ್ಳಲು ಸಾಧ್ಯವಾಗಿದೆ” ಎಂದು ನುಡಿದರು.
ಇದೇ ಸಂದರ್ಭದಲ್ಲಿ ಯಾಕತಪೂರ-ಮನ್ನಳ್ಳಿ ಗ್ರಾಮದಲ್ಲಿ ಏಳು ದಿನಗಳ ಕಾಲ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ನವರಂಗ ಮಾಣಿಕರಾವ್, ಪ್ರೊ. ದಶವಂತ ಭಂಡೆ, ಪ್ರೊ. ಸವಿತಾ ಪಾಟೀಲ್, ಡಾ.ಸಂದೀಪ ತಿವಾರಿ, ಪ್ರೊ.ಮಧು ಜಿ. ಪ್ರೊ. ಖಲೀಲ್, ಡಾ.ಧನರಾಜ್ ತುಡುಮೆ, ಡಾ.ಮೋನಪ್ಪಾ ಪಾಂಚಾಳ, ತಿಪ್ಪಣ್ಣಾ, ಡಾ. ಜ್ಞಾನಗಂಗಾ, ಶ್ಯಾಮಸುಂದರ್ ಕೋಟೆರ್, ಡಾ. ಇಸ್ಮಾಯಿಲ್ ಖಾನ್ ಸೇರಿದಂತೆ ಕಾಲೇಜಿನ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ವಿದ್ಯಾರ್ಥಿಗಳಾದ ಗಾಯತ್ರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸುಮಿತ್ರಾ ಸ್ವಾಗತಿಸಿದರು, ಸ್ನೇಹಾ ಶಿಬಿರದ ವರದಿ ವಾಚಿಸಿದರು. ವೈಷ್ಣವಿ ನಿರೂಪಿಸಿದರು. ಎನ್ಎಸ್ಎಸ್ ಘಟಕದ ಸಂಯೋಜಕ ಡಾ. ಹಾಲಪ್ಪಗೋಳ್ ಪೃಥ್ವಿರಾಜ್ ವಂದಿಸಿದರು.