ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ಯೋಜನೆ ಇದಾಗಿದ್ದು, ಈ ಯೋಜನೆ ಜಾರಿ ಬಂದಾಗಿನಿಂದ ಇದರ ದುರುಪಯೋಗ ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಹೌದು, ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ನಿರ್ವಾಹಕರು ಮಹಿಳೆಯರಿಗೆ ಫ್ರೀ ಟಿಕೆಟ್ ನೀಡುತ್ತಿದ್ದು, ಈ ಟಿಕೆಟ್ ಹಣವನ್ನು ಸರ್ಕಾರ ನಿಗಮಗಳಿಗೆ ನೀಡುತ್ತದೆ. ಅಲ್ಲದೆ, ಯೋಜನೆಯಡಿ ಬಸ್ ನಿರ್ವಾಹಕರಿಗೆ ಶೇ.3ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹೀಗಾಗಿ, ಹೆಚ್ಚಿನ ಪ್ರೋತ್ಸಾಹ ಧನ ಪಡೆಯಲು ನಿರ್ವಾಹಕರು ಮಹಿಳೆಯರು ಇಳಿಯುವ ನಿಲ್ದಾಣಗಳಿಗಿಂತ ಮುಂದಿನ ಸ್ಥಳಗಳಿಗೆ ಶೂನ್ಯ ಟಿಕೆಟ್ ನೀಡುತ್ತಿದ್ದಾರೆ. ಇನ್ನು ಮಹಿಳೆಯರು ಬಸ್‌ಗಳಲ್ಲಿ ಇಲ್ಲದೇ, ಇದ್ದರೂ ಕೂಡ ಬೇಕಾಬಿಟ್ಟಿಯಾಗಿ ಟಿಕೆಟ್ ಹರಿಯುತ್ತಿದ್ದಾರೆ. ಇಲ್ಲವೇ, ಶಕ್ತಿ ಯೋಜನೆಯ ಟಿಕೆಟ್‌ಗಳನ್ನು ಪುರುಷ ಪ್ರಯಾಣಿಕರಿಗೆ ನೀಡುತ್ತಿರುವುದು, ಓರ್ವ ಮಹಿಳೆಗೆ ಒಂದಕ್ಕಿಂತ ಹೆಚ್ಚು ಟಿಕೆಟ್ ನೀಡುವುದು ಸೇರಿದಂತೆ ಇನ್ನಿತರ ಬಗ್ಗೆ ದೂರುಗಳು ಕೇಳಿಬಂದಿವೆ. ಸದ್ಯ ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದ್ದು, ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ, ನಿರ್ವಾಹಕರ ವಿರುದ್ಧ ದೂರಗಳು ಕೇಳಿಬಂದಾಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹಾಗೂ ಇತರ ಸಾರಿಗೆ ನಿಗಮಗಳು ಎಚ್ಚೆತ್ತುಕೊಂಡು ನಿರ್ವಾಹಕರಿಗೆ ಎಚ್ಚರಿಕೆ ನೀಡಿವೆ.
ಈ ಸುದ್ದಿ ಓದಿದ್ದೀರಾ? ಡೆಂಘೀ ಪ್ರಕರಣ ನಿಯಂತ್ರಿಸಲು ಮನೆ-ಮನೆ ಸಮೀಕ್ಷೆ: ತುಷಾರ್ ಗಿರಿ ನಾಥ್
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಈಗಾಗಲೇ ಈ ಬಗ್ಗೆ ಆದೇಶ ಹೊರಡಿಸಿದ್ದು, “ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರಿಗೆ ಉಚಿತ ಟಿಕೆಟ್ ನೀಡದಿದ್ದರೆ ಕಂಡಕ್ಟರ್‌ಗಳು ದಂಡ ಕಟ್ಟಬೇಕಾಗುತ್ತದೆ” ಎಂದಿದೆ.
ಉಚಿತ ಮಹಿಳಾ ಟಿಕೆಟ್ ಪ್ರಕರಣದಲ್ಲಿ ನಿಯಮ 22ರ ಅಡಿಯಲ್ಲಿ ಕಂಡಕ್ಟರ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಟಿಕೆಟ್ ಸೋರಿಕೆ ಮೊತ್ತದ ಮೇಲೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವುದು, ಮಹಿಳಾ ಉಚಿತ ಟಿಕೆಟ್ ನೀಡದೇ ಇದ್ದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು, ಪ್ರಕರಣದಲ್ಲಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ ನ್ಯೂನತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ಮೆಮೋ ನೀಡಿ ಕ್ರಮ ಕೈಗೊಳ್ಳಲು ಮುಂದಾಗಿದೆ.