ಯುಜಿಸಿ-ನೀಟ್ ಪರೀಕ್ಷೆ ಭ್ರಷ್ಟಾಚಾರದ ಹಗರಣ ವಿರೋಧಿಸಿ, ರಾಷ್ಟ್ರಿಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಹಾಗೂ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯನ್ನು ರದ್ದುಗೊಳಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಜಾರಿಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ನಗರದ ಮೈಲಾರ ಮಹಾದೇವಪ್ಪ ವೃತದಿಂದ ಹೊಸಮನಿ ಸಿದ್ದಪ್ಪ ವೃತದವರೆಗೆ ಮೆರವಣಿಗೆ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ಎದುರು ಪ್ರತಿಭಟನಾ ಸಭೆ ನಡೆಸಿದರು.
ಎಸ್ಎಫ್ಐ ಹಾವೇರಿ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆಯು ಜೂನ್ 4ರಂದು ಫಲಿತಾಂಶಗಳು ಪ್ರಕಟವಾದ ನಂತರ, ನ್ಯಾಷನಲ್ ಟೆಸ್ಟ್ ಏಜೆನ್ಸಿ(ಎನ್‌ಟಿಎ) ಪರೀಕ್ಷೆಯ ಫಲಿತಾಂಶದಲ್ಲಿನ ನಡವಳಿಕೆಯ ಬಗ್ಗೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಪ್ರವೇಶವನ್ನು ನಡೆಸಲು ಅಸಮರ್ಥ ಮತ್ತು ಅನರ್ಹವಾಗಿದೆ” ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
“ಕೇಂದ್ರದ ಸರ್ಕಾರ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ಗಮನಾರ್ಹವಾದ ಕಡಿತ ಮಾಡುತ್ತಾ ಕಾಲೇಜು ಶುಲ್ಕಗಳನ್ನು ಹೆಚ್ಚಿಸುತ್ತಾ ಹಣವುಳ್ಳವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಎಂಬ ಖಾಸಗೀಕರಣ ನೀತಿಗಳನ್ನು ಎನ್ಎಂಸಿ ಮತ್ತು ಎನ್‌ಟಿಎ ಸಂಸ್ಥೆಗಳು ಜಂಟಿಯಾಗಿ ಪ್ರೋತ್ಸಾಹಿಸುತ್ತಿವೆ. ಇದು ದೇಶದ ಭವಿಷ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯಾಧಾರಿತ ಪ್ರವೇಶ ಪರೀಕ್ಷೆ ಪದ್ಧತಿಯನ್ನು ಬದಲಾಯಿಸಲು ಭ್ರಷ್ಟಾಚಾರ ನಡೆಯುತ್ತಿದೆಯೆಂದು ಹೇಳಲಾಗಿತ್ತು. ಈಗ ನೀಟ್-ಯುಜಿಗೆ ಸಂಬಂಧಿಸಿದಂತೆಯೂ ಇದೇ ಆರೋಪ ಸಾಬೀತಾಗಿದೆ” ಎಂದರು.
“ಎನ್‌ಟಿಎ ಪ್ರಾರಂಭವಾದಾಗಿನಿಂದ ಪ್ರಮುಖ ಪರೀಕ್ಷೆಗಳ ಗಂಭೀರ ಅವ್ಯವಹಾರಗಳು ನಡೆಯುತ್ತಿವೆ. ಇಂತಹ ಸಂಸ್ಥೆಯು ಪರೀಕ್ಷೆಯನ್ನು ನಡೆಸಲು ಅಸಮರ್ಥವಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ. ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇದರಲ್ಲಿ ಭಾಗಿಯಾದವರ ಪಾತ್ರದ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟಿನ ನ್ಯಾಯಾಧಿಶರ ಸಮಿತಿಯನ್ನು ರಚನೆ ಮಾಡಿ ತನಿಖೆ ಮಾಡಬೇಕು” ಎಂದು ಆಗ್ರಹಿಸಿದರು.
“ಹಲವಾರು ಪರೀಕ್ಷೆಗಳನ್ನು ನಡೆಸಲು ಎನ್‌ಟಿಎ ವಿಫಲವಾಗಿದೆ ಮತ್ತು ಭ್ರಷ್ಟಾಚಾರವಾಗಿರುವುದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಸ್ಪಷ್ಟವಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ, ಆದ್ದರಿಂದ ಎನ್‌ಟಿಎ ರದ್ದುಪಡಿಸಬೇಕು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆಯನ್ನು ಭಾರತ ಸರ್ಕಾರದ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ಮುಖಂಡ ಸುಲೆಮಾನ್ ಮತ್ತಿಹಳ್ಳಿ ಮಾತನಾಡಿ, “ನೀಟ್ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸುರಿಯುವ ಶ್ರೀಮಂತ, ಉನ್ನತ ಶೈಕ್ಷಣಿಕ ಸೌಲಭ್ಯವುಳ್ಳ ಅಭ್ಯರ್ಥಿಗಳ ಜತೆಗೆ ಪೈಪೋಟಿ ನಡೆಸಿ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದರು.
“ಪ್ರತಿ ವರ್ಷಗಳಲ್ಲಿ ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದ ಸುಮಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ಒಬ್ಬ ವಿದ್ಯಾರ್ಥಿಗೆ ನೀಟ್ ಪರೀಕ್ಷೆಯ ಕೋಚಿಂಗ್‌ಗೆ ಒಂದು ಲಕ್ಷದಿಂದ ಹತ್ತು ಲಕ್ಷದವರೆಗೆ ಹಣ ವಸೂಲಿ ನಡೆಯುತ್ತಿದೆ. ಇದರಿಂದ ಹಣ ಬರಿಸಲು ಸಾಧ್ಯವಿಲ್ಲದ ಬಡಕುಟುಂಬದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ. ಆದ್ದರಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ಕಿತ್ತುಕೊಂಡಂತೆ ಆಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಅಹೋರಾತ್ರಿ ಧರಣಿಗೆ ಮಣಿದ ಜಿಲ್ಲಾಡಳಿತ; ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಗೆ ಸಂದ ಜಯ
ಈ ಘಟನೆಗೆ ಸಂಬಂದಿಸಿದಂತೆ ಕೂಡಲೇ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಮಾಡಬೇಕೆಂದು ಹಾಗೂ ಎನ್‌ಟಿಎಯನ್ನು ರದ್ದುಪಡಿಸಲು ಮತ್ತು ಈವರೆಗಿನ ಅದರ ಎಲ್ಲ ಹಗರಣಗಳನ್ನು ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು. ಎಲ್ಲಾ ರಾಷ್ಟ್ರಿಯ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ಶೇಡ್ಯೂಲ್ ಅಲ್ಲಿ ತಿಳಿಸಿರುವ 22 ಭಾಷೆಗಳಲ್ಲೂ ನಡೆಸಬೇಕು” ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಒತ್ತಾಯಿಸಿದೆ.
ಎಸ್ಎಫ್ಐ ಮುಖಂಡರಾದ ಕುಬೇರ್ ಗೋಣಿ, ಅಜೇಯ ಆರ್ ಲಮಾಣಿ, ಸುನೀಲ್ ಎಲ್, ಭರತ್ ಡಿ ಆರ್, ಹೇಮಂತ್ ಡಿ ಎಲ್, ನಾಗರಾಜ ಕೆ ಹೆಚ್, ಅನ್ನಪೂರ್ಣ, ಶಿಲ್ಪಾ ಕೆ, ಭೂಮಿಕಾ ವಿ ಎಚ್, ಲಕ್ಷ್ಮೀ ಡಿ ಆರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
