ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂಬ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿಯವರು ಕೆಂಪೇಗೌಡ ಜಯಂತಿಯ ವೇದಿಕೆಯಲ್ಲಿ ನೀಡಿದ್ದ ಬಹಿರಂಗ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸ್ವಾಮೀಜಿಯವರ ಹೇಳಿಕೆ ಕುರಿತು ಸಿಎಂ ಆಗಲೀ, ಡಿಕೆ ಶಿವಕುಮಾರ್ ಆಗಲೀ ವೇದಿಕೆ ಮೇಲೆ ಯಾವುದೇ ಉತ್ತರ ನೀಡಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಿಂದ ಹೊರಬಂದ ಬಳಿಕ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
“ನಮ್ಮದು ಹೈಕಮಾಂಡ್ ಸಂಸ್ಕೃತಿಯ ಪಕ್ಷ. ಹೈಕಮಾಂಡ್ ನಿರ್ಧಾರವೇ ಅಂತಿಮ. ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತ ಸ್ವಾಮೀಜಿ ಅವರಲ್ಲ” ಎಂದು ಹೇಳಿದರು. ಆ ಮೂಲಕ, ಸಿಎಂ ಸ್ಥಾನ ಅಷ್ಟು ಸುಲಭವಿಲ್ಲ ಎಂಬ ಸಂದೇಶವನ್ನು ಸಿದ್ದರಾಮಯ್ಯ ರವಾನೆ ಮಾಡಿದರು.

ಇಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತ್ಯುತ್ಸವ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ್ದ ಚಂದ್ರಶೇಖರನಾಥ ಸ್ವಾಮೀಜಿ, ಸಿದ್ದರಾಮಯ್ಯನವರು ಮುಂದೆ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಡಿಕೆಶಿಯನ್ನು ಸಿಎಂ ಮಾಡಲು ಬಹಿರಂಗವಾಗಿ ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡ ಸ್ವಾಮೀಜಿ!
“ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಮಾತ್ರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಸಾಧ್ಯ. ಈಗಾಗಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಅನುಭವ ಹೊಂದಿದ್ದಾರೆ. ನಮ್ಮ ಸಮುದಾಯದ ಡಿ.ಕೆ ಶಿವಕುಮಾರ್ ಅವರಿಗೆ ಮುಂದೆ ಅವಕಾಶ ಮಾಡಿಕೊಡಲಿ” ಎಂದು ತಿಳಿಸಿದ್ದರು.
