ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔರಾದ್‌ನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಬಹುತೇಕ ಇಲಾಖೆಗಳಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದಾಗಿ ನನ್ನ ಹೆಸರು ಕೆಡುತ್ತಿದೆ. ಇಷ್ಟವಿದ್ದರೆ ಮನಸ್ಪೂರ್ತಿಯಿಂದ ಕೆಲಸ ಮಾಡಬೇಕು. ಇಲ್ಲವೆಂದರೆ ಬಿಟ್ಟು ಹೋಗಬೇಕೆಂದು ಮಾಜಿ ಸಚಿವ, ಔರಾದ ಶಾಸಕ ಪ್ರಭು.ಬಿ ಚವ್ಹಾಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಔರಾದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
“ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಹಾಜರಾತಿಯ ವಿವರಣೆ ಪಡೆದರು. ಈ ವೇಳೆ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಕೆಲವು ಅಧಿಕಾರಿಗಳು ಸಭೆಗೆ ಆಗಮಿಸದೇ ಇರುವುದರಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಕೋಪಗೊಂಡರು. ಹಿಂದೆ ನಡೆದ ಕೆಡಿಪಿ ಸಭೆಗಳಲ್ಲಿ ಗೈರು ಹಾಜರಾದವರ ಮೇಲೆ ಏನು ಕ್ರಮವಾಗಿದೆ. ವಿವರಣೆ ಕೊಡಬೇಕು” ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿ ಸಭೆಯಲ್ಲಿ ಅಧಿಕಾರಿಗಳು ಗೈರಾಗುತ್ತಾರೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತಾರೆ. ಮುಂದೆ ಯಾವುದೇ ಕಠಿಣ ಕ್ರಮವಾಗುವುದಿಲ್ಲ. ಪ್ರತಿ ಬಾರಿಯೂ ಇದು ಪರಿವರ್ತನೆಯಾಗುತ್ತಿದೆ. ಕಾಟಾಚಾರಕ್ಕಾಗಿ ಸಭೆ ನಡೆದರೆ ಏನು ಪ್ರಯೋಜನ. ನಾನು ವೈಯಕ್ತಿಕ ಕೆಲಸಕ್ಕಾಗಿ ಸಭೆ ನಡೆಸುತ್ತಿಲ್ಲ. ಇದು ಜನತೆಗಾಗಿ ಸಭೆಯಿದೆ. ಅಧಿಕಾರಿಗಳಲ್ಲಿಯೂ ಜವಾಬ್ದಾರಿ ಕಾಣಿಸಬೇಕು ಎಂದು ಅಧಿಕಾರಿಗಳ ಮೇಲೆ ಕೆಂಡಾಮಂಡಲರಾದರು.
ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದರು.
ಎಲ್ಲ ಕೆಡಿಪಿ ಸಭೆಗಳಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಾಗಬೇಕು. ಮುಂದೆ ನಡೆಯುವ ಸಭೆಗಳಲ್ಲಿ ಎಲ್ಲ ಅಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಿರಬೇಕು. ಇಲ್ಲವಾದಲ್ಲಿ ತಮ್ಮ ವಿರುದ್ಧವೇ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಔರಾದ ಮತ್ತು ಕಮಲನಗರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಸಿದರು.
ಔರಾದ ತಹಸೀಲ್ ಕಚೇರಿಯೇ ಗಬ್ಬು ನಾರುತ್ತಿದೆ. ಉತ್ತಮ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕಚೇರಿ ಆವರಣ ಕಸಮಯವಾಗಿದೆ. ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ತಹಸೀಲ್ದಾರರು ಏನು ಮಾಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಎಲ್ಲ ತಾಲೂಕು ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಕೇಂದ್ರದಲ್ಲೇ ವಾಸಿಸಬೇಕೆಂದು ಬಹಳಷ್ಟು ಸಾರಿ ತಿಳಿಸಿದರೂ ಬಹುತೇಕ ಅಧಿಕಾರಿಗಳು ಬೀದರನಲ್ಲಿಯೇ ವಾಸಿಸುತ್ತಿದ್ದಾರೆ. ಇದರಿಂದ ಕಚೇರಿ ಕೆಲಸಗಳಿಗೆ ತೊಡಕಾಗುತ್ತಿದೆ. ಎಲ್ಲರೂ ತಾಲೂಕು ಕೇಂದ್ರದಲ್ಲೇ ಉಳಿದು ಕೆಲಸ ಮಾಡಬೇಕು ತಮ್ಮ ಅಧಿನ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ನಿಯಂತ್ರಣವಿರಬೇಕು. ಎಲ್ಲ ಕಛೇರಿಗಳಲ್ಲಿ ಜನಸ್ನೇಹಿಯಾದ ವಾತಾವರಣ ನಿರ್ಮಾಣವಾಗಬೇಕು. ಯಾವುದೇ ರೀತಿಯ ದೂರುಗಳು ಬಾರದ ರೀತಿಯಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.
ಔರಾದ ಪಟ್ಟಣದೆಲ್ಲೆಡೆ ಕಸದ ರಾಶಿ ತುಂಬಿದೆ. ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ಪಟ್ಟಣದ ಎಲ್ಲ ವಾರ್ಡ್‌ಗಳನ್ನು ಸ್ವಚ್ಛಗೊಳಿಸಬೇಕು. ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು. ಪಟ್ಟಣ ಪಂಚಾಯಿತಿಯ ವರಮಾನ ಹೆಚ್ಚಿಸಲು ಸೂಕ್ತ ಯೋಜನೆಯನ್ನು ರೂಪಿಸಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸಿದರು.
ತಾಲೂಕಿನ ಎಲ್ಲ ಶಾಲೆಗಳಲ್ಲಿ ಕನ್ನಡ ಬೋಧಿಸುವ ವ್ಯವಸ್ಥೆಯಾಗಬೇಕು. ಇದಕ್ಕಾಗಿ ಅಗತ್ಯ ಶಿಕ್ಷಕರನ್ನು ನಿಯೋಜಿಸಬೇಕು. ಕೆಲವು ಶಾಲೆಗಳಲ್ಲಿ 6 ಮತ್ತು 7ನೇ ಮಕ್ಕಳಿಗೆ ಸರಿಯಾಗಿ ಓದಲು ಮತ್ತು ಬರೆಯಲು ಬಾರದಿರುವುದು ಗಮನಕ್ಕೆ ಬಂದಿದೆ. ಇದು ಸರಿಪಡಿಸಬೇಕು. ಶಿಕ್ಷಣದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದೆ. ಶಾಲಾ ಕಟ್ಟಡಗಳ ನಿರ್ಮಾಣ, ಮೂಲ ಸೌಕರ್ಯಗಳ ಒದಗಿಸಲು ಬೇಕಾದಷ್ಟು ಅನುದಾನ ಕೊಡಲು ನಾನು ಸಿದ್ಧನಿದ್ದೇನೆ. ಆದರೆ, ಗುಣಮಟ್ಟದ ಶಿಕ್ಷಣ ಕೊಡಬೇಕು. ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಔರಾದ್‌ನಲ್ಲಿ ಜೆಜೆಎಂ ಯೋಜನೆ ವಿಫಲ:
‘ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 200 ಕೋಟಿ ಅನುದಾನದಲ್ಲಿ ಎಲ್ಲ ಗ್ರಾಮಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅಧಿಕಾರಿಗಳ ಕಾರಣದಿಂದಾಗಿ ಯೋಜನೆ ಸಂಪೂರ್ಣ ವಿಫಲಗೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಯೋಜನೆ ಪೂರ್ಣಗೊಂಡ ಬಹಳಷ್ಟು ಗ್ರಾಮಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಪೈಪ್‌ಲೈನ್ ಕೆಲಸಕ್ಕೆ ಅಗೆದ ಗುಂಡಿಗಳನ್ನು ಸರಿಪಡಿಸಿಲ್ಲ. ಕೆಲವೆಡೆ ಜಲಮೂಲಗಳು ಇಲ್ಲದೇ ಕೆಲಸ ಮಾಡಲಾಗಿದೆ. ಇದರಿಂದ ಕೆಲಸವಾದರೂ ನೀರು ಸಿಗದ ಪರಿಸ್ಥಿತಿಯಿದೆ. ಗ್ರಾಮ ಸಂಚಾರದ ಸಂದರ್ಭದಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತ ದೂರುಗಳು ಬರುತ್ತಿವೆ. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅನೇಕ ಸಲ ಹೇಳಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗೆ ಎಚ್ಚರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜೆಜೆಎಂ ಯೋಜನೆಯಡಿ ಮನೆ-ಮನೆಗೆ ಭೇಟಿ ನೀಡಿ ನೀರು ಬರುತ್ತಿರುವ ಬಗ್ಗೆ ಖಚಿತವಾದ ನಂತರವೇ ಕಾಮಗಾರಿ ಅಧಿನಕ್ಕೆ ಪಡೆಯಬೇಕು. ಈ ಬಗ್ಗೆ ಎಲ್ಲ ಪಿಡಿಓಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೂತನ ಅಧ್ಯಕ್ಷರಾಗಿ ಜಿ ಎಸ್ ಸಂಗ್ರೇಶಿ
ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಔರಾದ ತಾಪಂ ಇಓ ಬೀರೇಂದ್ರಸಿಂಗ್ ಠಾಕೂರ್, ಕಮಲನಗರ ಇಒ ಮಾಣಿಕರಾವ ಪಾಟೀಲ, ಔರಾದ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.