ಭಾರಿ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಛಾವಣಿಯ ಒಂದು ಭಾಗ ಕುಸಿದು ಒಬ್ಬರು ಮೃತಪಟ್ಟು, 5 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ ಎಂದು ದೆಹಲಿ ಅಗ್ನಿ ಶಾಮಕ ಸೇವೆ ತಿಳಿಸಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ವ್ಯಕ್ತಿಯೊಬ್ಬರು ಕುಸಿತದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛಾವಣಿ ಕುಸಿತದಿಂದಾಗಿ ಟರ್ಮಿನಪ್ 1ರ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಸುರಕ್ಷತಾ ದೃಷ್ಟಿಯಿಂದ ಚಕ್ ಇನ್ ಕೌಂಟರ್‌ಗಳನ್ನು ಮುಚ್ಚಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 5.30ಕ್ಕೆ ಅಗ್ನಿ ಶಾಮಕ ತಂಡ ಛಾವಣಿ ಕುಸಿತದ ಬಗ್ಗೆ ಕರೆ ಸ್ವೀಕರಿಸಿದ್ದು, ತಕ್ಷಣ ಸ್ಥಳಕ್ಕೆ 4 ಅಗ್ನಿ ಶಾಮಕ ವಾಹನಗಳು ಆಗಮಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಮುದಾಯವಾರು ಡಿಸಿಎಂ ಬೇಡಿಕೆಯೂ, ಮುಖ್ಯಮಂತ್ರಿಗಳ ಮೌನವೂ
“ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಛಾವಣಿ ಕುಸಿತವಾಗಿರುವ ಘಟನೆಯ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಟರ್ಮಿನಲ್ 1ರಲ್ಲಿ ತೊಂದರೆಯಾದ ಪ್ರಯಾಣಿಕರೆಲ್ಲರಿಗೂ ವಿಮಾನ ನಿಲ್ದಾಣದ ಸಿಬ್ಬಂದಿ ಸಲಹೆ ನೀಡುತ್ತಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ” ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ(ಜೂ.27) ಭಾರಿ ಮಳೆಯಾಗಿದ್ದು ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳು ಜಲಾವೃತವಾಗಿವೆ.
ದೆಹಲಿಯಲ್ಲಿ ಬೆಳಿಗ್ಗೆ 5.30 ರವರೆಗೆ ಸಫ್ದರ್‌ಜಂಗ್‌ನಲ್ಲಿ 153.7 ಮಿಮೀ ಮತ್ತು ಪಾಲಂ ವಿಮಾನ ನಿಲ್ದಾಣದಲ್ಲಿ 93 ಮಿಮೀ ಮಳೆಯಾಗಿದೆ.
ಒಂದು ದಿನದ ಹಿಂದಷ್ಟೆ ಮಧ್ಯಪ್ರದೇಶದ ಜಬಲ್‌ಪುರ ವಿಮಾನ ನಿಲ್ದಾಣದ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಛಾವಣಿಯಲ್ಲಿದ್ದ ಲೋಹದ ವಸ್ತು ಬಿದ್ದ ಪರಿಣಾಮ ಸರ್ಕಾರಿ ಅಧಿಕಾರಿಯ ಕಾರೊಂದು ಸಂಪೂರ್ಣವಾಗಿ ನುಜ್ಜುಗುಜ್ಜಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
