ಮನೆಯಿಂದ ಆಟವಾಡಲು ಹೋದ ಇಬ್ಬರು ಬಾಲಕರು ನೀರಿನ ಹಳ್ಳದಲ್ಲಿ ಮುಳುಗಿ ಶವವಾಗಿ ಪತ್ತೆಯಾಗಿರುವ ಘಟನೆ ಶಹಾಬಾದ್ ತಾಲೂಕಿನ ರಾವೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ರಾವೂರ ಗ್ರಾಮದ ನಿವಾಸಿಗಳಾದ ರವಿ ಗುತ್ತೆದಾರ ಅವರ ಮಗ ಭುವನ್ (6) ಮತ್ತು ಅಶೋಕ ಬೇಟಗೆರಿ ಅವರ ಮಗ ದೇವರಾಜ (7) ಮೃತ ಬಾಲಕರು ಎಂದು ಗುರುತಿಸಲಾಗಿದೆ.
ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದ ರಥ ಬೀದಿಯಿಂದ ಸ್ವಲ್ಪವೇ ದೂರದಲ್ಲಿದ್ದ ಸುಣ್ಣದ ಕಲ್ಲಿನ ಗಣಿಯ ಹಳ್ಳದಲ್ಲಿ ಈಜಾಡಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಬುಧವಾರ ಸಂಜೆಯಿಂದಲೇ ಪೋಷಕರು ಹುಡುಕಲಾರಂಭಿಸಿದ್ದು, ಗುರುವಾರ ಸುಣ್ಣದ ಕಲ್ಲಿನ ಗಣಿಯ ಪಕ್ಕದಲ್ಲಿರುವ ಬಾಲಕರ ಚಪ್ಪಲಿಯನ್ನು ಗುರುತಿಸಿ, ಪೊಲೀಸರ ಸಮ್ಮುಖದಲ್ಲಿ ನೀರಿಗೆ ಇಳಿದು ಹುಡುಕಿದಾಗ ಮೃತದೇಹಗಳು ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ವಾಡಿ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.