ತಾಪಮಾನ ಹೆಚ್ಚಳ ಮತ್ತು ಬಿಸಿಗಾಳಿಯಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ನಾನಾ ಭಾಗಗಳಲ್ಲಿ ಶುಕ್ರವಾರ ಭಾರೀ ಮಳೆಯಾಗುತ್ತಿದೆ. ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
“ಅಧಿಕ ತಾಪಮಾನದ ಪರಿಣಾಮ ಈ ಮಳೆಯಾಗಿದೆ. ನಗರ ವಾಸಿಗಳು ಮನೆಯೊಳಗೆ ಇರಬೇಕು. ಅನಗತ್ಯವಾಗಿ ಹೊರಗೆ ಪ್ರಯಾಣ ಮಾಡಬಾರದು. ಮಳೆಯಾಗುವ ಸಮಯದಲ್ಲಿ ಮರಗಳ ಕೆಳಗೆ ನಿಲ್ಲಬಾರದು” ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪಕ್ಕದ ನೋಯ್ಡಾದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಪ್ರಸ್ತುತ ದೆಹಲಿ ಸೇರಿದಂತೆ ಎನ್‌ಸಿಆರ್‌ನ ಅನೇಕ ಪ್ರದೇಶಗಳಲ್ಲಿ ಮೋಡ ಆವರಿಸಿದೆ.
ಶುಕ್ರವಾರ ಬೆಳ್ಳಂಬೆಳಿಗ್ಗೆ ಸುರಿದ ಭಾರೀ ಮಳೆಗೆ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ದೆಹಲಿಯ ರಸ್ತೆಗಳಲ್ಲಿ ನೀರು ನಿಂತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ನೀರು ನಿಂತ ಕಾರಣ ರಸ್ತೆಯಲ್ಲಿಯೇ ವಾಹನಗಳು ಸಿಕ್ಕಿಹಾಕಿಕೊಂಡ ಘಟನೆಗಳು ನಡೆದಿವೆ. ಇದರಿಂದ ಪ್ರಯಾಣಿಕರು ಸಂಚಾರ ಮಾರ್ಗ ಬದಲಾವಣೆ ಮಾಡಲು ದೆಹಲಿ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.
ನಗರದ ಹಲವಾರು ಪ್ರದೇಶಗಳು ನೀರಿನಿಂದ ಮುಳುಗಿವೆ. ದೀರ್ಘ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ. ಪ್ರಯಾಣಿಕರಿಗೆ, ವಿಶೇಷವಾಗಿ ಕಚೇರಿಗೆ ತೆರಳುವವರ ಮೇಲೆ ಪರಿಣಾಮ ಬೀರಿದೆ. ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಮೊಣಕಾಲು ಉದ್ದ ನೀರು ನಿಂತಿದೆ. ಪ್ರಯಾಣಿಕರು ಈ ನೀರಿನಲ್ಲಿಯೇ ತಮ್ಮ ಮಕ್ಕಳನ್ನು ಹೊತ್ತು ನಡೆಯುವ ದೃಶ್ಯ ಕಂಡುಬಂದಿದೆ. ಕೆಲವೆಡೆ ಮೆಟ್ರೊ ನಿಲ್ದಾಣಗಳಲ್ಲಿ ನೀರು ತುಂಬಿಕೊಂಡಿದ್ದು, ಜನರಿಗೆ ತೊಂದರೆಯಾಗಿದೆ.
ಪೊಲೀಸರ ಪ್ರಕಾರ, ಮಳೆ ನೀರು ಪೋಲಾಗದೇ, ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ಅನುವ್ರತ್ ಮಾರ್ಗದಲ್ಲಿ 100 ಅಡಿ ರೆಡ್ ಲೈಟ್ ಮತ್ತು ಲಾಡೋ ಸರಾಯ್ ರೆಡ್ ಲೈಟ್‌ನ ಎರಡು ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ರಿಂಗ್ ರೋಡ್‌ನಲ್ಲಿ ಧೌಲಾ ಕುವಾನ್ ಫ್ಲೈಓವರ್ ಅಡಿಯಲ್ಲಿನ ರಸ್ತೆ ಜಲಾವೃತವಾಗಿರುವ ಕಾರಣ ನರೈನಾದಿಂದ ಮೋತಿ ಬಾಗ್ ಕಡೆಗೆ ಸಂಚಾರ ನಿಧಾನವಾಗಿದೆ.
ಆಜಾದ್ ಮಾರ್ಕೆಟ್ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವುದರಿಂದ ವೀರ ಬಂದಾ ಬೈರಾಗಿ ಮಾರ್ಗದ ಎರಡೂ ಮಾರ್ಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಅರಬಿಂದೋ ಮಾರ್ಗದಲ್ಲಿ ಎಐಐಎಮ್‌ಎಸ್ ಫ್ಲೈಓವರ್ ಅಡಿಯಲ್ಲಿ ನೀರು ಜಲಾವೃತವಾಗಿರುವ ಕಾರಣ ಐಎನ್‌ಎಯಿಂದ ಎಐಐಎಮ್‌ಎಸ್ ಕಡೆಗೆ ಮತ್ತು ಎರಡೂ ದಿಕ್ಕುಗಳಲ್ಲಿ ಸಂಚಾರ ಸಮಸ್ಯೆಯಾಗಿದೆ.
ವೈ-ಪಾಯಿಂಟ್ ಸಲೀಮ್‌ಗಢ್ ಮತ್ತು ನಿಗಮಬೋಧ್ ಘಾಟ್ ಬಳಿ ನೀರು ಜಲಾವೃತವಾಗಿರುವ ಕಾರಣ ಔಟರ್ ರಿಂಗ್ ರಸ್ತೆಯಲ್ಲಿ ಶಾಂತಿವನದಿಂದ ಐಎಸ್‌ಬಿಟಿ ಕಡೆಗೆ ಎರಡೂ ದಿಕ್ಕುಗಳಲ್ಲಿ ಸಂಚಾರ ನಿಧಾನವಾಗಿದೆ. ತಿಲಕ್ ಬ್ರಿಡ್ಜ್ ಡಬ್ಲ್ಯೂ-ಪಾಯಿಂಟ್ ಕೆಳಗೆ ನೀರು ನಿಂತಿರುವುದರಿಂದ ಎರಡೂ ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ರೋಹ್ಟಕ್ ರಸ್ತೆಯಲ್ಲಿ ರಾಜಧಾನಿ ಪಾರ್ಕ್‌ನಿಂದ ಮುಂಡ್ಕಾ ಕಡೆಗೆ ತೆರಳುವ ಮಾರ್ಗಗಳಲ್ಲಿ ಜಲಾವೃತದಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ.
Airport Scenes #DelhiRains pic.twitter.com/yzXzzLheFC
— Deepika Narayan Bhardwaj (@DeepikaBhardwaj) June 27, 2024
ಮರವೊಂದು ಉರುಳಿದ ಪರಿಣಾಮ ಆಶ್ರಮದಿಂದ ಬಾದರ್‌ಪುರ ಕಡೆಗೆ ಸಾಗುವ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಕಾಳಿಂದಿ ಕುಂಜ್‌ನಿಂದ ಕ್ರೌನ್ ಪ್ಲಾಜಾ ಕಡೆಗೆ ಮತ್ತು ಓಖ್ಲಾ ಅಂಡರ್‌ಪಾಸ್‌ನಲ್ಲಿ ಜಲಾವೃತವಾಗಿರುವ ಕಾರಣ ರಸ್ತೆ ಸಂಖ್ಯೆ.13 ರಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.
ಮಳೆ ಅಬ್ಬರಕ್ಕೆ ದೆಹಲಿಯ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಮೇಲ್ಚಾವಣಿಯ ಒಂದು ಭಾಗ ಕುಸಿದು ಒಬ್ಬ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. ಇಡೀರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಮುಂಜಾನೆ 5.30ರ ಸುಮಾರಿಗೆ ಟರ್ಮಿನಲ್ 1ರ ಬದಿಯಲ್ಲಿ ನಿಲ್ಲಿಸಲಾದ ಟ್ಯಾಕ್ಸಿಗಳ ಮೇಲೆ ಛಾವಣಿ ಕುಸಿದುಬಿದ್ದಿದೆ. ಕಾರು, ಟ್ಯಾಕ್ಸಿಗಳು ಜಖಂ ಆಗಿವೆ.
ಟರ್ಮಿನಲ್ 1 ನಿರ್ಗಮನದ ಕಡೆಗೆ ಹೋಗುವ ಎಲ್ಲ ಪ್ರಯಾಣಿಕರು ಟರ್ಮಿನಲ್ 1 ರ ಆಗಮನ ವಿಭಾಗವನ್ನು ಬಳಸಲು ಸೂಚಿಸಲಾಗಿದೆ. ಹೆಚ್ಚುವರಿಯಾಗಿ, ಮೆಹ್ರಾಮ್ ನಗರ ಅಂಡರ್‌ಪಾಸ್‌ನಲ್ಲಿ ಟರ್ಮಿನಲ್ 3 ಕಡೆಗೆ ನೀರು ನಿಲ್ಲುತ್ತದೆ.
ಅಕ್ಷರಧಾಮದಿಂದ ಗಾಜಿಯಾಬಾದ್ ಕಡೆಗೆ ಸಾಗುವ ಎರಡೂ ಮಾರ್ಗಗಳಲ್ಲಿ ಮತ್ತು ಪ್ರತಿಕ್ರಮದಲ್ಲಿ ಮುರ್ಗಾ ಮಂಡಿ, ಘಾಜಿಪುರ ಗಡಿಯ ವೃತ್ತದಲ್ಲಿ ಜಲಾವೃತಗೊಂಡಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಮಳೆ ಅಬ್ಬರ | ಹಲವು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’; ಎರಡೇ ದಿನದಲ್ಲಿ 7 ಸಾವು
ಜ್ವಾಲಾ ಹೆರಿ ಮಾರುಕಟ್ಟೆಯ ಎದುರಿನ ಮರವೊಂದು ಉರುಳಿ ಬಿದ್ದ ಪರಿಣಾಮ ಜ್ವಾಲಾ ಹೆರಿ ಮಾರ್ಕೆಟ್‌ನಿಂದ ಮಾದಿಪುರ ಕಡೆಗೆ ಸಾಗುವ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಿಂಟೋ ರಸ್ತೆಯಲ್ಲಿ ಕಮಲಾ ಮಾರ್ಕೆಟ್‌ನಿಂದ ಕನ್ನಾಟ್ ಪ್ಲೇಸ್ ಕಡೆಗೆ ಮತ್ತು ಮಿಂಟೋ ಸೇತುವೆಯ ಅಂಡರ್‌ಪಾಸ್‌ನಲ್ಲಿ ನೀರು ಜಲಾವೃತವಾಗಿರುವ ಕಾರಣ ಸಂಚಾರ ಸಮಸ್ಯೆಯಾಗಿದೆ.
ಹೊರ ವರ್ತುಲ ರಸ್ತೆಯ ಭೇರಾ ಎನ್‌ಕ್ಲೇವ್ ವೃತ್ತದಿಂದ ಪೀರಗಢಿ ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ತಿಲಕ್ ಬ್ರಿಡ್ಜ್ ಅಂಡರ್‌ಪಾಸ್‌ನಲ್ಲಿ (ಡಬ್ಲ್ಯೂ-ಪಾಯಿಂಟ್) ವಾಹನಗಳು ಸ್ಥಗಿತಗೊಂಡಿರುವುದರಿಂದ ಐಪಿ ಮಾರ್ಗ, ಬಿಎಸ್‌ಜೆಡ್ ಮಾರ್ಗ ಮತ್ತು ವಿಕಾಶ್ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.
ದೆಹಲಿಯಲ್ಲಿ ಜುಲೈ 3ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಜೂನ್ 29ರಂದು ಭಾರೀ ಮಳೆಯಾಗಲಿದ್ದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ವಾರಾಂತ್ಯದಲ್ಲಿ ಅಧಿಕ ಮಳೆಯಿಂದಾಗಿ ತಾಪಮಾನ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.