2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೀಘ್ರವಾಗಿ ನೇಮಕಾತಿ ಆದೇಶ ನೀಡಬೇಕೆಂದು ಒತ್ತಾಯಿಸಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿದರು.
ಬೆಂಗಳೂರು ನಗರದ ನಿವಾಸದಲ್ಲಿ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಭೇಟಿ ಮಾಡಿದ ಬಳಿಕ ಮಾತನಾಡಿದರು.
“ನೇಮಕಾತಿ ಅನಗತ್ಯವಾಗಿ ವಿಳಂಬವಾಗುತ್ತಿದೆ. ಮೂರು ವರ್ಷಗಳು ಮುಗಿದರೂ ನೇಮಕಾತಿ ಆದೇಶ ಬಂದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳೆಲ್ಲರೂ ಆದೇಶ ಪ್ರತಿಗಾಗಿ ಕಾಯುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಭ್ಯರ್ಥಿಗಳು ಕೆಲವು ಅಂಶಗಳನ್ನು ಬರಗೂರು ಅವರಲ್ಲಿ ಹಂಚಿಕೊಂಡರು.
“ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ನೇಮಕಾತಿ ಅಧಿಸೂಚನೆ 2021ರ ಸಪ್ಟೆಂಬರ್‌ನಲ್ಲಿ ನಡೆದಿದ್ದು, 2022ರ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮುಗಿದು, 2023 ಫೆಬ್ರವರಿಯಲ್ಲಿ ಅಂತಿಮ ಆಯ್ಕೆಪಟ್ಟಿ ಪ್ರಕಟವಾಗಿ, ಅಂತಿಮ ಆಯ್ಕೆಪಟ್ಟಿಯು 2023ರ ನವೆಂಬರ್ 4ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ. ಸದರಿ ನೇಮಕಾತಿಗೆ ಸಂಬಂಧಿಸಿದಂತಹ ಪೊಲೀಸ್ ಮತ್ತು ಮೆಡಿಕಲ್ ವೆರಿಫಿಕೇಶನ್, ಸಿಂಧುತ್ವ ಪ್ರಮಾಣ ಪತ್ರ, ಅಂಕಪಟ್ಟಿಗಳ ನೈಜತೆಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಶೇ.90ರಷ್ಟು ಪೂರ್ಣವಾಗಿ, ಆ ಪ್ರಮಾಣ ಪತ್ರಗಳನ್ನೂ ಸರ್ಕಾರ ಅನುಮೋದಿಸಿದೆ” ಎಂದು ಹೇಳಿಕೊಂಡರು.
“ಹೈದರಾಬಾದ್ ಕರ್ನಾಟಕ ವಿಭಾಗದ ಮೀಸಲಾತಿ ವಿಷಯವಾಗಿ ಬಂದಂತಹ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ/03/ಹೈಕಕೋ/2019ನ್ನು 2023ರ ಫೆಬ್ರವರಿ 01ರಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಎತ್ತಿಹಿಡಿದಿದ್ದು, ಇದೇ ವಿಷಯವಾಗಿ 2024ರ ಮಾರ್ಚ್ 13ರಂದು ಉಚ್ಛನ್ಯಾಯಾಲಯದ ಮಧ್ಯಂತರ ತೀರ್ಪು ಕೂಡಾ ಕೌನ್ಸೆಲಿಂಗ್ ನಡೆಸಿ, ಸ್ಥಳನಿಯುಕ್ತಿ ಮಾಡಬಹುದೆಂದು ಆದೇಶ ನೀಡಿದೆ” ಎಂದರು.
“ಈ ಆದೇಶಾನುಸಾರ ಸರ್ಕಾರವು ಈಗಾಗಲೇ ಕೆಪಿಟಿಸಿಎಲ್ ಇಲಾಖೆಯ ಎಇ ಹುದ್ದೆಗಳಿಗೆ, ಪ್ರಾಥಮಿಕ ಶಾಲಾ ಸಾಕ್ಷರತಾ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಿಗೆ, (ಜಿಪಿಎಸ್‌ಟಿಆರ್) ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಮತ್ತು ಆರ್‌ಡಿಪಿಆರ್ ಇಲಾಖೆಯ ಎಇ ಹುದ್ದೆಗಳಿಗೆ ಷರತ್ತುಬದ್ಧ ನೇಮಕಾತಿ ಆದೇಶವನ್ನು ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿನಿಲಯಗಳಲ್ಲಿ ಸಿಬ್ಬಂದಿ ಕಡಿತ; ಸರ್ಕಾರದ ಆದೇಶ ಹಿಂಪಡೆಯುವಂತೆ ಆಗ್ರಹ
“ಎಲ್ಲಾ ಉದಾಹರಣೆಗಳು ಇದ್ದಾಗ್ಯೂ, ಎರಡು ಬಾರಿ ತಾತ್ಕಾಲಿಕ ವರ್ಗಾವಣೆ ಮತ್ತು ಸ್ಥಳನಿಯುಕ್ತಿಯ ವೇಳಾಪಟ್ಟಿ ಪ್ರಕಟಿಸಿ, ಹಿಂಪಡೆದಿರುತ್ತಾರೆ. ಜತೆಗೆ ಉನ್ನತ ಶಿಕ್ಷಣ ಸಚಿವರು ಅನಗತ್ಯ ಕಾರಣಗಳನ್ನು ನೀಡುತ್ತಿದ್ದಾರೆ. ಕೂಡಲೇ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ನೆಪ ಹೇಳದೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ 1208 ಮಂದಿ ಅಭ್ಯರ್ಥಿಗಳಿಗೂ ಷರತ್ತುಬದ್ಧ ನೇಮಕಾತಿ ಆದೇಶ ನೀಡಲು ಅಭ್ಯರ್ಥಿಗಳ ಪರವಾಗಿ ತಾವು ಸರ್ಕಾರಕ್ಕೆ ಆಗ್ರಹಿಸಬೇಕು” ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಲ್ಲಿ ಮನವಿ ಮಾಡಿದರು.
