ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಾಲೂಕಿನ ಮೇವುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರದೂರ ಗ್ರಾಮದ ರೈತ ಮೈಲೆಪ್ಪ ತಳಗೇರಿ ಅವರು ಕರಿಬೇವು ಬೆಳೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ.
ಈ ಮೊದಲು, ಮೈಲೆಪ್ಪ ತಮ್ಮ ಒಂದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಜೋಳ, ಹೆಸರು ಕಾರು ಬೆಳೆಯುತ್ತಿದ್ದರು. ಆದರೆ, ಇತ್ತೀಚೆಗೆ ಮನರೇಗಾ ಯೋಜನೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಒದಗಿಸಲಾಗುವ ಸೌಲಭ್ಯಗಳ ಅರಿತು, ಕರಿಬೇವು ಬೆಳೆಯಲು ನಿರ್ಧರಿಸಿದ್ದರು. 2023-24ನೇ ಸಾಲಿನಲ್ಲಿ 1.20 ಲಕ್ಷ ಸಹಾಯಧನ ಪಡೆದು 800 ಕರಿಬೇವು ಸಸಿ ತಂದು ನೆಟ್ಟಿದ್ದರು.
ಕೆಲವೇ ತಿಂಗಳುಗಳಲ್ಲಿ ಕರಿಬೇವು ಆದಾಯ ನೀಡುತ್ತಿದ್ದು, ಈಗ ಮೈಲೆಪ್ಪ ವಾರ್ಷಿಕವಾಗಿ ಐವತ್ತರಿಂದ ಅರವತ್ತು ಸಾವಿರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಕರಿಬೇವು ಸಸಿ ಬೆಳೆದಂತೆ ಇಳುವರಿಯು ಅಧಿಕವಾಗಲಿದ್ದು, ಆದಾಯ ಕೂಡ ಹೆಚ್ಚಾಗಲಿದೆ. ಇದರೊಂದಿಗೆ ವಾಣಿಜ್ಯ ಬೆಳೆಗಳ ಆದಾಯ ಸಹ ಪ್ರತ್ಯೇಕವಾಗಿ ಕೈ ಸೇರಲಿದೆ ಎಂದು ಮೈಲೆಪ್ಪ ಹೇಳುತ್ತಾರೆ.
ಮನರೇಗಾ ಯೋಜನೆಯ ಸದ್ಬಳಕೆಯಿಂದ ಮಿಶ್ರ ಬೇಸಾಯದ ಮಹತ್ವವನ್ನು ರೈತ ಮೈಲೆಪ್ಪ ಎತ್ತಿ ಹಿಡಿದಿದ್ದಾರೆ. ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಮಾರುಕಟ್ಟೆಗೆ ಕರಿಬೇವನ್ನು ಪೂರೈಕೆ ಮಾಡುತ್ತಿದ್ದು, ಕೆ.ಜಿಗೆ 30 ರೂಪಾಯಿ ದರದಲ್ಲಿ ಮಾರಾಟವಾಗಿದೆ. ಸೀಸಸ್‌ಗೆ ತಕ್ಕಂತೆ ದರ ಏರುಮುಖ ಆಗುವುದರಿಂದ ಮುಂಬರುವ ದಿನಗಳಲ್ಲಿ ಉತ್ತಮ ಆದಾಯ ನಿರೀಕ್ಷೆ ಮಾಡಬಹುದು ಎಂದು ಮೈಲೆಪ್ಪ ಹೇಳಿದ್ದಾರೆ.
“ಮನರೇಗಾ ಯೋಜನೆ ಸದ್ಬಳಕೆ ಮೂಲಕ 2023-24ನೇ ಸಾಲಿನಲ್ಲಿ ಸಹಾಯಧನ ಪಡೆದು ರೈತ ಮೈಲೆಪ್ಪ ಉತ್ತಮ ಆದಾಯ ಕಂಡಿರುವುದು ಖುಷಿಯ ಸಂಗತಿ. ಇದು ನರೇಗಾ ಯೋಜನೆ ಸದುಪಯೋಗದ ಜೊತೆಗೆ ಮಿಶ್ರ ಬೇಸಾಯದ ಮಹತ್ವ ಸಾರುವ ಮೂಲಕ ರೈತರ ಉತ್ತಮ ಆರ್ಥಿಕತೆಗೆ ನಿದರ್ಶನವಾಗಿರುವುದು ಖುಷಿಯ ಸಂಗತಿ” ಎಂದು ಮುಂಡರಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದ್ದಾರೆ.