ಮಳೆಗಾಲದ ಅವಾಂತರ ತಡೆಯುವುದಕ್ಕೆ ಜಿಲ್ಲಾಡಳಿತ, ಸಂಬಂಧಿತ ಇಲಾಖೆಗಳ ಸಂಘಟಿತ ಕಾರ್ಯತಂತ್ರ ಏನಿದೆ ಎಂದು ನೋಡಿದರೆ ಭ್ರಮನಿರಸನವಾಗುತ್ತದೆ. ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ ಹೇಳತೀರದು. ಒಂದು ಮರ ಬಿದ್ದರೆ ಸಾಕು ಇಡೀ ಊರು ವಿದ್ಯುತ್ ಸಂಪರ್ಕ ಇಲ್ಲದೇ ದಿನ ಕಳೆಯುವ ಸ್ಥಿತಿಯಿದೆ.
ಮಳೆಗಾಲ ಶುರುವಾದರೆ ಸಾಕು ರಸ್ತೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಜನ, ಜಾನುವಾರು ಬಲಿಯಾಗುವ ಸುದ್ದಿಗಳು ಸಾಲು ಸಾಲು ಬರುತ್ತವೆ. ಮಂಗಳೂರಿನಲ್ಲಿ ನಾಲ್ಕು ದಿನಗಳಿಂದ ಮುಂಗಾರು ಬಿರುಸು ಪಡೆದಿದ್ದು ಬುಧವಾರ(ಜೂ.26) ಇಬ್ಬರು ಆಟೋ ಡ್ರೈವರ್‌ಗಳು ತುಂಡಾಗಿ ಬಿದ್ದಿದ್ದ ತಂತಿ ತುಳಿದು ಮೃತಪಟ್ಟಿದ್ದಾರೆ. ಗುರುವಾರ ಬೆಳ್ತಂಗಡಿಯ ವಿದ್ಯಾರ್ಥಿನಿಯೊಬ್ಬಳು ಮನೆಯ ಹೊರಗೆ ವಿದ್ಯುತ್ ಕಂಬ ಮುಟ್ಟಿದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾಳೆ. ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಮುಖ್ಯರಸ್ತೆಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ತಾಯಿ ಮತ್ತು 9 ತಿಂಗಳ ಶಿಶು ಮೃತಪಟ್ಟ ದುರ್ಘಟನೆ ನಡೆದಿತ್ತು. ತೋಟ, ಜಮೀನಿನಲ್ಲಿ ತಂತಿ ತುಂಡಾಗಿ ಬಿದ್ದು ರೈತರು ಮೃತಪಡುವುದು ಸಾಮಾನ್ಯವಾಗಿದೆ. ಹಾಗಿದ್ದರೆ ಇದಕ್ಕೆಲ್ಲ ಯಾರು ಹೊಣೆ? ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜನರು ಮಳೆಗಾಲ ಮಾತ್ರವಲ್ಲ ಎಲ್ಲಾ ಕಾಲದಲ್ಲೂ ಬಲಿಯಾಗುತ್ತಿದ್ದಾರೆ.
ಮಳೆಗಾಲದಲ್ಲಿ ತುಕ್ಕು ಹಿಡಿದ ಹಳೆಯದಾದ ತಂತಿ ತುಂಡಾಗೋದು ಸಾಮಾನ್ಯ. ವಿದ್ಯುತ್ ಲೈನ್, ಕಂಬಕ್ಕೆ ಅಡ್ಡಿಯಾಗಿರುವ ಮರದ ಕೊಂಬೆಗಳನ್ನು ಮಳೆ ಆರಂಭಕ್ಕೂ ಮುನ್ನ, ಸಕಾಲದಲ್ಲಿ ಕತ್ತರಿಸುವುದು, ಶಿಥಿಲಗೊಂಡ ತಂತಿಗಳನ್ನು ಬದಲಾಯಿಸೋದು ಇವು ಇಲಾಖೆಯ ನಿರಂತರ ನಿರ್ವಹಣೆಯ ವ್ಯಾಪ್ತಿಗೆ ಬರುತ್ತವೆ. ಆದರೆ ಅದರ ನಿರ್ವಹಣೆಗೆಂದು ನೇಮಕಗೊಂಡು ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಎಂಜಿನಿಯರ್‌ಗಳು, ಸಾಕಷ್ಟು ಸಿಬ್ಬಂದಿ ಇದ್ದಾರೆ. ಅವರೆಲ್ಲ ಏನು ಮಾಡುತ್ತಿದ್ದಾರೆ? ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಜನರ ಜೀವ ಉಳಿಸಬಹುದು.
ಎಲ್ಲೋ ಮರ ಬಿದ್ದಾಗ ಹೋಗಿ ತೆರವು ಮಾಡೋದು, ತಂತಿ ತುಂಡಾಗಿ ಬಿದ್ದು ಜನರ ಪ್ರಾಣ ಹೋದರೆ ಇಲಾಖೆಯಿಂದ ಪರಿಹಾರ ಕೊಡೋದು ನಂತರ ಯಥಾಪ್ರಕಾರ ಲೂಟಿ ಹೊಡೆಯುವುದರಲ್ಲಿ ನಿರತರಾಗುವುದು. ಇದು ಬಹುತೇಕ ಇಂಧನ ಇಲಾಖೆಯ ಅಧಿಕಾರಿಗಳ ನಡೆ. ಮಳೆಗಾಲದ ಅವಾಂತರ ತಡೆಯುವುದಕ್ಕೆ ಜಿಲ್ಲಾಡಳಿತ, ಸಂಬಂಧಿತ ಇಲಾಖೆಗಳ ಸಂಘಟಿತ ಕಾರ್ಯತಂತ್ರ ಏನಿದೆ ಎಂದು ನೋಡಿದರೆ ಭ್ರಮನಿರಸನವಾಗುತ್ತದೆ. ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ ಹೇಳತೀರದು. ಒಂದು ಮರ ಬಿದ್ದರೆ ಸಾಕು ಇಡೀ ಊರು ವಿದ್ಯುತ್ ಸಂಪರ್ಕ ಇಲ್ಲದೇ ದಿನ ಕಳೆಯುವ ಸ್ಥಿತಿ ಮಲೆನಾಡು ಭಾಗದಲ್ಲಿ ಸಾಮಾನ್ಯವಾಗಿದೆ.
ಇಂಧನ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದು ಎದ್ದು ಕಾಣುವ ಸತ್ಯ. ಆಗಾಗ ಆದಾಯ ತೆರಿಗೆ ಇಲಾಖೆ, ಲೋಕಾಯುಕ್ತರು ನಡೆಸುವ ದಾಳಿಗಳಲ್ಲಿ ಎಂಜಿನಿಯರ್‌ಗಳ ಮನೆಗಳಲ್ಲಿ ಸಾಕ್ಷಾತ್ ಲಕ್ಷ್ಮಿಯೇ ಕಾಲ್ಮುರಿದು ಕೂತಿರೋದು ಕಂಡಿದ್ದೇವೆ. ಐಷಾರಾಮಿ ಬಂಗಲೆ, ಕಾರು, ತೋಟ, ನಿವೇಶನಗಳು, ಕೇಜಿಗಟ್ಟಲೆ ಚಿನ್ನಾಭರಣ, ನೋಟಿನ ಕಂತೆ. ಕಪಾಟು, ಮಂಚದಡಿ, ಲಾಕರ್, ಅಷ್ಟೇ ಏಕೆ ಪೈಪ್‌ನೊಳಗೂ ನೋಟಿನ ಕಂತೆಗಳನ್ನು ಬಚ್ಚಿಟ್ಟಿದ್ದನ್ನು ಕಂಡಿದ್ದೇವೆ. ಹೀಗೆ ವೃತ್ತಿಗೆ ಬಂದು ಕೆಲ ವರ್ಷಗಳಲ್ಲಿಯೇ ಕುಬೇರರಾಗುವ ಅಧಿಕಾರಿಗಳಿಗೆ ಜನರ ಜೀವದ ಬೆಲೆ ಹೇಗೆ ಗೊತ್ತಾಗುತ್ತದೆ?
ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯುವುದಕ್ಕೂ ಲಂಚ ಪಡೆಯುವ ಅಧಿಕಾರಿಗಳಿದ್ದಾರೆ. ಇನ್ನು ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಹೀಗೆ ಎಲ್ಲ ಕಡೆಯೂ ಎಂಜಿನಿಯರ್‌ಗಳು, ಗುತ್ತಿಗೆದಾರರ ನಡುವೆ ಕಮಿಷನ್ ದಂಧೆ ನಡೆಯುತ್ತದೆ. ಅಕ್ರಮ ಸಂಪರ್ಕ, ವಿದ್ಯುತ್ ಕಳ್ಳತನ ಇವೆಲ್ಲ ಅಧಿಕಾರಿಗಳ ಸಹಕಾರದಿಂದಲೇ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಮಿಷನ್ ದಂಧೆಯ ಫಲಾನುಭವಿಗಳಲ್ಲಿ ಇಲಾಖೆಯ ಮಂತ್ರಿ, ಸರ್ಕಾರವೂ ಸೇರಿದೆ. ಹಾಗಾಗಿ ಈ ದುರಂತಗಳಿಗೆ ಇಡೀ ವ್ಯವಸ್ಥೆಯೇ ಹೊಣೆ.
ಮಳೆಗಾಲಕ್ಕೆ ಸ್ವಲ್ಪ ತಯಾರಿ ಮಾಡಿಕೊಂಡರೆ ದುರಂತಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ಬೆಂಗಳೂರು ಮಹಾನಗರದಲ್ಲಿ ಬಿಬಿಎಂಪಿ ಅಧಿಕಾರಿಗಳ ಈ ಬಾರಿ ಕೈಗೊಂಡು ಕೆಲಸಗಳೇ ಸಾಕ್ಷಿ. ಮಳೆಗಾಲದ ಸವಾಲುಗಳನ್ನು ಎದುರಿಸಲು ಮುಂಜಾಗೃತಾ ಕೆಲಸಗಳನ್ನು ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರು ಉಸ್ತುವಾರಿ ಮಂತ್ರಿ ಡಿ ಕೆ ಶಿವಕುಮಾರ್ ಅವರ ಸೂಚನೆಯ ಮೇರೆಗೆ ತಕ್ಕ ಮಟ್ಟಿಗೆ ಮಾಡಿದ್ದಾರೆ. ಅಪಾಯಕಾರಿ ಕೊಂಬೆ ಕತ್ತರಿಸುವುದು, ಚರಂಡಿ ಹೂಳೆತ್ತುವುದು, ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕಾರ್ಯಾಚರಣೆ ಚುನಾವಣೆಯ ಸಮಯದಲ್ಲೂ ನಡೆದಿದೆ. ಹಾಗಾಗಿ ಜೂನ್ ಆರಂಭದಲ್ಲಿ ಬೆಂಗಳೂರು ನಗರದಲ್ಲಿ 140 ವರ್ಷಗಳಲ್ಲಿಯೇ ಅತ್ಯಧಿಕ ಮಳೆ ದಾಖಲಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಾರ್ಟ್ ಮೆಂಟ್‌ಗಳಿಗೆ ನೀರು ನುಗ್ಗಿಲ್ಲ.
ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುವುದು ಹಿಂದೆ ಸಾಮಾನ್ಯವಾಗಿತ್ತು. ಕಳೆದ ವರ್ಷ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಲ್ಲೇ ಅರ್ಧಗಂಟೆ ಸುರಿದ ಮೊದಲ ಮಳೆಗೆ ನಗರದ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರು. ರಾಜಕಾಲುವೆ ತುಂಬಿ ಹರಿಯೋದು, ಮನೆಗಳಿಗೆ ನೀರು ನುಗ್ಗೋದು, ಫುಟ್‌ಪಾತ್ ಕುಸಿದು ಮೋರಿಗಳಲ್ಲಿ ಕೊಚ್ಚಿ ಹೋಗೋದು ಇಂತಹ ಹಲವು ಘಟನೆಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಿರಂತರವಾಗಿ ನಡೆದಿವೆ. ಈ ಬಾರಿ ಹೆಚ್ಚು ಮಳೆ ಸುರಿದರೂ ಬೆಂಗಳೂರು ನಗರದಲ್ಲಿ ಅಂತಹ ದುರಂತಗಳು ಸಂಭವಿಸಿಲ್ಲ. ಇದು ಅಧಿಕಾರಿಗಳು ಜವಾಬ್ದಾರಿಂದ ಕರ್ತವ್ಯ ನಿರ್ವಹಿಸಿದರೆ ಪದೇ ಪದೇ ಆಗುವ ದುರಂತವನ್ನು ಹೇಗೆ ತಡೆಯಬಹುದು ಎಂಬುದಕ್ಕೆ ಚಿಕ್ಕ ಉದಾಹರಣೆ. ಇದು ಸಾರ್ವತ್ರಿಕವಾಗಿ ನಡೆಯಬೇಕು. ಜನರ ತೆರಿಗೆಯ ಹಣದಿಂದ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅಧಿಕಾರಿಗಳು ಹಣ ಮಾಡುವ ಲಾಲಸೆ ಬಿಟ್ಟು ಕರ್ತವ್ಯ ನಿರ್ವಹಿಸಿದರೆ ಅದಕ್ಕಿಂತ ದೊಡ್ಡ ಜನಸೇವೆ ಬೇರೆ ಇಲ್ಲ.
