ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷ್ಯಾಧಾರ ನಿಯಮಗಳ ಬದಲಿಗೆ ಮೂರು ಹೊಸ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹೊಸ ಕಾನೂನುಗಳ ವಿರುದ್ಧ ಜುಲೈ 1 ರಂದು ‘ಕಪ್ಪು ದಿನ’ ಆಚರಿಸುವುದಾಗಿ ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್ ಘೋಷಿಸಿದೆ. ಹೊಸ ಕಾನೂನುಗಳು ‘ಜನವಿರೋಧಿ ಮತ್ತು ಕ್ರೂರ’ವಾಗಿವೆ ಎಂದು ಕೌನ್ಸಿಲ್ ಹೇಳಿದೆ.
ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಸಂಹಿತಾ ಎಂಬ ಮೂರು ಹೊಸ ಕಾನೂನುಗಳು ಜುಲೈ 1 ರಂದು ಜಾರಿಗೆ ಬರಲಿವೆ.
ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್ ಅಂಗೀಕರಿಸಿದ ನಿರ್ಣಯದಲ್ಲಿ, “ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವ ವಕೀಲರು ಜುಲೈ 1ರಂದು ‘ಕಪ್ಪು ದಿನ’ ಆಚರಿಸಲಿದ್ದಾರೆ. ಅಂದು ವಕೀಲರು ನ್ಯಾಯಾಂಗ ಕೆಲಸದಿಂದ ಹೊರಗುಳಿಯುತ್ತಾರೆ. ಎಲ್ಲ ವಕೀಲರ ಸಂಘಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಿವೆ” ಎಂದು ಹೇಳಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಅಸ್ತಿತ್ವದಲ್ಲಿರುವ ಕಾನೂನು ಸಂಹಿತೆಗಳನ್ನು ಬದಲಿಸಲು ಭಾರತೀಯ ನ್ಯಾಯ ಸಂಹಿತಾ ಮಸೂದೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ-2023 ಮತ್ತು ಭಾರತೀಯ ಸಾಕ್ಷಿ ಮಸೂದೆ-2023 ಅನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಮಂಡಿಸಿ, ಅಂಗೀಕರಿಸಿತ್ತು.