ಮನುಷ್ಯನ ಬೌದ್ಧಿಕ ಸಾಮರ್ಥ್ಯದಿಂದ ತಯಾರಾದ ಬೌದ್ಧಿಕ ಸ್ವತ್ತನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅವುಗಳ ರಕ್ಷಣೆಗೆ ಇರುವ ಕಾನೂನುಗಳ ಅರಿವು ಎಲ್ಲರಿಗೂ ಇರಬೇಕು ಎಂದು ಬೆಂಗಳೂರಿನ ಅಲ್ಟಾಸಿಟ್ ಗ್ಲೋಬಲ್ ಐಪಿಆರ್ ಆಚಾರ್ನಿ, ಸಹವರ್ತಿ ವಕೀಲೆ ಲಿಖಿತಾ ಪಿ ಮಹಿಕರ್ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶ ಹಾಗೂ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ “ಬೌದ್ಧಿಕ ಆಸ್ತಿ ಹಕ್ಕುಗಳ ಜಾಗೃತಿ” ವಿಷಯದ ಕುರಿತು ಒಂದು ದಿನದ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೌದ್ಧಿಕ ಆಸ್ತಿ ಹಕ್ಕುಗಳ ಪರಿಕಲ್ಪನೆ, ಟ್ರೇಡ್ ಮಾರ್ಕ್ ಸಲ್ಲಿಸುವ ಕಾರ್ಯವಿಧಾನಗಳು, ಪೇಟೆಂಟ್, ಹಕ್ಕುಸ್ವಾಮ್ಯ, ಭೌಗೋಳಿಕ ಸೂಚನೆ, ವಿನ್ಯಾಸ, ಸಸ್ಯ ಪ್ರಭೇದಗಳು, ರೈತರ ಹಕ್ಕುಗಳು ಮತ್ತು ವ್ಯಾಪಾರ ರಹಸ್ಯಗಳಂತಹ ಎಲ್ಲ ಅಂಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.
ವಿಟಿಪಿಸಿ ಕರ್ನಾಟಕ ಸರ್ಕಾರ ರಫ್ತು ಉತ್ತೇಜನ ಕೇಂದ್ರದ ಐಪಿ ಇನಿಶಿಯೇಟೀವ್ ಮತ್ತು ಜಿಐ ಕೋಶದ ಫೆಸಿಲಿಟೇಟರ್ ಪ್ರಭಾವತಿ ರಾವ್ ಮಾತನಾಡಿ, ಕರ್ನಾಟಕ ರಫ್ತುಗಳ ಕೊಡುಗೆ ಮತ್ತು ಐಪಿ ಪರಿಕರಗಳ ಫೈಲಿಂಗ್, ವಾಣಿಜ್ಯೀಕರಣ ಇದರ ಅರಿವು ಮತ್ತು ಬೌದ್ಧಿಕ ಹಕ್ಕುಗಳ ರಕ್ಷಣೆ ಹಾಗೂ ಇದರ ಕೊಡುಗೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ವಿವಿಧ ಬೌದ್ಧಿಕ ಆಸ್ತಿ ಹಕ್ಕುಗಳು ಅದರದೇ ಆದ ಮಹತ್ವವನ್ನು ಪಡೆದುಕೊಂಡಿದ್ದು, ಎಲ್ಲರಿಗೂ ಇದರ ಅವಶ್ಯಕತೆ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲಂ 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಲಿ: ಡಾ.ರಝಾಕ್ ಉಸ್ತಾದ್
ವಿವಿಯ ಮೌಲ್ಯಮಾಪನ ಕುಲಸಚಿವ ಎಚ್ ಎಂ ಚಂದ್ರಶೇಖರ, ಐಪಿಆರ್ ಕೋಶದ ಸಂಯೋಜಕ ಡಾ. ಎಸ್ ಆರ್ ಗಣೇಶ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಇದ್ದರು.
