- ಬಿಜೆಪಿ ನಾಯಕರೇ ಸುಳ್ಳು ಹೇಳಬೇಡಿ
- ಬಿಜೆಪಿಯಿಂದ ರಾಜ್ಯದ ಕೀರ್ತಿ ನೆಲಕಚ್ಚಿದೆ
ರಾಜ್ಯದಲ್ಲಿರುವುದು ಸಿಂಗಲ್ ಇಂಜಿನ್ 40% ಆದರೆ, ಡಬಲ್ ಇಂಜಿನ್ 80% ಆಯ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, “ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ. ಒಂದು ಇಂಜಿನ್ ಅಂತೂ 40 ಪರ್ಸೇಂಟ್ ನಿಂದ ಕೆಟ್ಟು ನಿಂತಿದೆ. ಇದರಿಂದ ಮತ್ತೊಂದು ಇಂಜಿನ್ ಕೂಡ ವಿಳಂಬವಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ತಾವು ಮಾಡಿರುವ ಅಭಿವೃದ್ಧಿ ಕುರಿತು ಮಾತನಾಡುವಂತೆ ಸವಾಲು ಹಾಕಿರುವ ಮಲ್ಲಿಕಾರ್ಜುನ ಖರ್ಗೆ, “ಬಿಜೆಪಿ ನಾಯಕರೇ, ಜನರಿಗೆ ಸುಳ್ಳು ಹೇಳಬೇಡಿ. ನೀವು ಮಾಡಿರುವ ಕೆಲಸಗಳ ಬಗ್ಗೆ ಮಾತನಾಡಿ. ಮಾಡದೆ ಇರುವ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾ ಜನರ ದಿಕ್ಕು ತಪ್ಪಿಸಬೇಡಿ” ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಉದ್ಘಾಟಿಸುತ್ತಿರುವ ರೈಲುಗಳು ಕುರಿತು, “ನಾನು ರೈಲ್ವೆ ಸಚಿವನಾಗಿದ್ದಾಗ 37 ರೈಲುಗಳ ಸಂಚಾರಕ್ಕೆ ಒಂದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಅದರಲ್ಲಿ ಬೆಂಗಳೂರು-ವಾರಣಾಸಿ ಸೇರಿದಂತೆ ಹಲವು ಯೋಜನೆಗಳಿದ್ದವು” ಎಂದು ತಿಳಿಸಿದ್ದಾರೆ.
“ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳ ಕುರಿತು ಬಿಜೆಪಿಯವರು ಹೇಳುವುದಿಲ್ಲ. ಎಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುತ್ತಾರೆ” ಎಂದು ಆರೋಪಿಸಿದ್ದಾರೆ.
“ರಾಜ್ಯದಲ್ಲಿ ಲಂಚ ಕೊಡದೆ ಯಾವ ಕೆಲಸವೂ ಆಗದು ಎಂದು ಇಡೀ ದೇಶಕ್ಕೆ ಗೊತ್ತಾಗಿದೆ. ಈ ಮೊದಲು ನಮ್ಮ ರಾಜ್ಯ ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಹೆಸರುವಾಸಿ ಆಗಿತ್ತು. ಆದರೆ, ಈ ಬಿಜೆಪಿಯಿಂದ ಆ ಕೀರ್ತಿ ನೆಲಕಚ್ಚಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ತಾಪುರ | ರೌಡಿಶೀಟರ್ ಮಣಿಕಂಠ ಪರ ಪ್ರಧಾನಿ ಮೋದಿ ಪ್ರಚಾರ
“ಪ್ರಧಾನಿ ಮೋದಿ ಈ ಹಿಂದೆ ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎನ್ನುತ್ತಿದ್ದರು. ಆದರೆ, ಈಗ ತಿನ್ನುವವರ ಬೆನ್ನಿಗೆ ಅವರೇ ನಿಂತಿರುವಂತೆ ವರ್ತಿಸುತ್ತಿದ್ದಾರೆ. ಭ್ರಷ್ಟಾಚಾರದ ಆರೋಪ ಅಷ್ಟು ದೊಡ್ಡದಾಗಿ ಕೇಳಿ ಬಂದಾಗಲೂ ಪ್ರಧಾನಿ, ಅಮಿತ್ ಶಾ ಏಕೆ ಸುಮ್ಮನಿದ್ದಾರೆ. ಸಿಬಿಐ, ಇಡಿ, ಐಟಿ ದಾಳಿ ಏಕೆ ನಡೆಯುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ನಿರುದ್ಯೋಗದ ಕುರಿತು ಮಾತನಾಡಿ, “ರಾಜ್ಯದಲ್ಲಿ 25 ಲಕ್ಷ ಪದವೀಧರ ಯುವಕರಿಗೆ ನೌಕರಿ ಸಿಗುತ್ತಿಲ್ಲ. ದೇಶದಲ್ಲಿ ಸುಮಾರು 100 ಕೋಟಿ ಜನ ಅನಕ್ಷರಸ್ಥ ನಿರುದ್ಯೋಗಿಗಳಿದ್ದಾರೆ. ಅವರ ಬಗ್ಗೆ ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ” ಎಂದಿದ್ದಾರೆ.
“ಬಿಜೆಪಿ ಶಾಸಕರು ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೂ ಮೋದಿ ಅವರು ಚಕಾರ ಎತ್ತುವುದಿಲ್ಲ. ಅದೇ ಬೇರೆ ಪಕ್ಷದವರ ಬಗ್ಗೆ ಪದೇ ಪದೇ ಬೆರಳು ಮಾಡಿ ಸುಳ್ಳು ಹೇಳುತ್ತಾರೆ” ಎಂದು ಟೀಕಿಸಿದ್ದಾರೆ.
“ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಜಿಎಸ್‍ಟಿ ಪಾವತಿಸುತ್ತದೆ. ಈ ಪೈಕಿ ಶೇ.10ರಷ್ಟನ್ನು ಕೇಂದ್ರ ಸರ್ಕಾರ ವಾಪಸ್ ನೀಡುತ್ತಿಲ್ಲ. ಬಂಡವಾಳ ಹೂಡಿಕೆ ವಿಷಯವಾಗಿಯೂ ರಾಜ್ಯಕ್ಕೆ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ” ಎಂದಿದ್ದಾರೆ.