“ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಮೀಸಲಿಡಬೇಕು ಎಂಬ ಡಾ ಸರೋಜಿನಿ ಮಹಿಷಿ ವರದಿ ಜಾರಿಯಾಗುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲು ಕರ್ನಾಟಕ ರಕ್ಷಣ ವೇದಿಕೆ ಜುಲೈ1ರಂದು ರಾಜ್ಯಾದ್ಯಂತ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಿದೆ. ಇದಕ್ಕೆ ಸಮಸ್ತ ಕನ್ನಡಿಗರು ನಾಮಫಲಕ ಹೋರಾಟಕ್ಕೆ ಕೊಟ್ಟಷ್ಟೇ ಬೆಂಬಲವನ್ನು ಕೊಡಬೇಕು” ಕರವೇ ಅಧ್ಯಕ್ಷ ನಾರಾಯಣಗೌಡರು ಕರೆ ನೀಡಿದ್ದಾರೆ.
ಶುಕ್ರವಾರ ಕರವೇ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರೋಜಿನಿ ಮಹಿಷಿ ವರದಿ ಜಾರಿಯಾಗುವುದು ಕನ್ನಡಿಗರ ಬದುಕಿನ ಮತ್ತು ಉದ್ಯೋಗದ ಪ್ರಶ್ನೆಯಾಗಿದೆ. ರಾಮಕೃಷ್ಣ ಹೆಗಡೆ ಅವಧಿಯ ವೇಳೆ ತಯಾರಾಗಿದ್ದ ವರದಿಯು ಕಾಯ್ದೆಯಾಗದೇ ನನೆಗುದಿಗೆ ಬಿದ್ದಿದೆ. ಅಧಿಕಾರಕ್ಕೆ ಬಂದ ಯಾವ ಪಕ್ಷವು ವರದಿ ಜಾರಿ ಮಾಡಲು ಆಸಕ್ತಿ ತೋರದೆ ಕನ್ನಡಿಗರಿಗೆ ಅನ್ಯಾಯ ಮಾಡಿವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬಹುರಾಷ್ಟ್ರಿಯ ಕಂಪನಿಗಳು ಕರ್ನಾಟಕಕ್ಕೆ ಬರುತ್ತಿವೆ ಆದರೆ ಈ ನೆಲದ ಮಕ್ಕಳಿಗೆ ಕೆಲಸ ನೀಡುತ್ತಿಲ್ಲ. ಕೇವಲ ಡಿ ದರ್ಜೆ ಕೆಲಸ ನೀಡುತ್ತಿವೆಯೇ ವಿನಃ ಎ,ಬಿ, ಸಿ ದರ್ಜೆಯ ವೃತ್ತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿಲ್ಲ. ಆದ್ದರಿಂದ ಮಹಿಷಿ ವರದಿಯಂತೆ ಖಾಸಗಿ ಸಂಸ್ಥೆಗಳಲ್ಲಿ ಶೇಕಡ 100ರಷ್ಟು ಸಿ ಮತ್ತು ಡಿ ದರ್ಜೆಯ ಕೆಲಸಗಳನ್ನು ಹಾಗೆಯೇ ಎ ಮತ್ತು ಬಿ ದರ್ಜೆಯಲ್ಲಿ ಶೇಕಡ 70-80ರಷ್ಟು ಕೆಲಸಗಳನ್ನು ಕನ್ನಡಿಗರಿಗೆ ಮೀಸಲಿಡಬೇಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಲು ಈ ಹೋರಾಟ ಹಮ್ಮಿಕೊಂಡಿದ್ದೇವೆ. ಈ ಪ್ರತಿಭಟನೆಯು ಶಾಂತಿ ಸ್ವರೂಪದಲ್ಲಿದ್ದು ರಾಜ್ಯ ಸರ್ಕಾರವೇನಾದರೂ ಹದಿನೈದು ದಿನಗಳಲ್ಲಿ ಏನೂ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಮುಂದಿನ ಹೋರಾಟ ಕ್ರಾಂತಿ ಸ್ವರೂಪದ್ದಾಗಿರುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಕರವೇ 31 ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಶಾಂತಿಯುತವಾಗಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡಿ ಮುಖ್ಯಮಂತ್ರಿಗೆ ಮನವಿ ಪತ್ರ ತಲುಪಿಸಲು ಕೋರಲಿದೆ. ಹಾಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂದು ಪ್ರತಿಭಟನೆ ಮಾಡಿ ಮುಖ್ಯಮಂತ್ರಿಯವರನ್ನು ನೇರವಾಗಿ ಭೇಟಿ ಮಾಡಿ ಮಹಿಷಿ ವರದಿ ಜೊತೆ ಕರವೇ ತಯಾರಿಸಿದ ವರದಿಯನ್ನು ನೀಡಲಿದೆ. ನಮ್ಮ ಈ ಹೋರಾಟದಲ್ಲಿ ಸಾಹಿತಿಗಳು, ಕಲಾವಿದರು, ಮಠಾಧೀಶರು, ಕನ್ನಡ ಸಾಹಿತ್ಯ ಪರಿಷತ್ತು, ಹಲವು ಗಣ್ಯರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
