ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾದ ಕಾಂಗ್ರೆಸ್, ಇದೀಗ ಒಳಜಗಳಕ್ಕಿಳಿದಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಪಕ್ಷದ ಸಚಿವರು ಹಾಗೂ ಮಠಗಳ ಸ್ವಾಮೀಜಿಗಳು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಣಗಳ ಹೆಸರಿನಲ್ಲಿ ನಡೆಯುತ್ತಿದ್ದ ಆಂತರಿಕ ಕಲಹ ಬಹಿರಂಗಗೊಂಡಿದ್ದು, ಕಾಂಗ್ರೆಸ್ ನಾಯಕರು ಒಬ್ಬರ ಮೇಲೊಬ್ಬರು ಕಿಡಿಕಾರುತ್ತಿದ್ದಾರೆ.
ಮೂರು ಉಪಮುಖ್ಯಮಂತ್ರಿಗಳ ಹುದ್ದೆಗೆ ಸಚಿವ ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಪರಮೇಶ್ವರ ಬೇಡಿಕೆ ಇಡುತ್ತಿದ್ದರೆ, ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ ಶಿವಕುಮಾರ್‌ಗೆ ಬಿಟ್ಟುಕೊಡಿ ಎಂದು ಸಿದ್ದರಾಮಯ್ಯ ಎದುರು ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು. ಇದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಸ್ವಾಮೀಜಿ, ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರುತ್ತಿರುವ ಸಚಿವ ಕೆ.ಎನ್ ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ತ್ಯಜಿಸಬೇಕು ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿ.ಕೆ ಸುರೇಶ್, “ಉತ್ತಮ ಆಡಳಿತ ನಡೆಸಬೇಕೆಂದು ಡಿಕೆ ಶಿವಕುಮಾರ್‌ಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆ. ಅವರಿಗೆ ಯೋಗ್ಯತೆ ಇಲ್ಲವೆಂದು ಹೇಳುವುದಾದರೆ, ಚುನಾವಣೆಗೆ ಹೋಗುವುದು ವಾಸಿ. ನಾವೆಲ್ಲರೂ ಚುನಾವಣೆಗೆ ಹೋಗೋಣ” ಎಂದು ಆಕ್ರೋಶ ವ್ಯಕ್ತಪಡಿಸಿಸದ್ದಾರೆ.
“ಡಿಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ಕೊಟ್ಟಿರುವುದು ಪಕ್ಷದ ವರಿಷ್ಠರು. ಯಾರೂ ಶಾಶ್ವತ ಅಲ್ಲ, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹೇಳಿಕೆ ಕೊಡುತ್ತಿರುವವರು ಹಿಂದೆ ತಿರುಗಿ ಅವರ ಬೆನ್ನು ನೋಡಿಕೊಳ್ಳಬೇಕು” ಎಂದು ಕಿಡಿಕಾರಿದ್ದಾರೆ.
“ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆ ಸ್ಥಾನ ಖಾಲಿಯಾದ ಮೇಲೆ ಆ ಹುದ್ದೆ ಚರ್ಚೆಗೆ ಬರುತ್ತದೆ” ಎಂದು ಹೇಳಿದ್ದಾರೆ.