ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಸಕ್ಕರೆ ಕಾರ್ಖಾನೆಯನ್ನು ಶೀಘ್ರ ಪುನರಾರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮುಧೋಳ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, “ಮೂರು ವರ್ಷದಿಂದ ಸ್ಥಗಿತಗೊಂಡಿರುವ ಕಾರ್ಖಾನೆ ಆರಂಭಕ್ಕೆ ಸರ್ಕಾರ ಮುಂದಾಗಬೇಕು. ರೈತರ ಹಾಗೂ ಕಾರ್ಖಾನೆ ಕಾರ್ಮಿಕರ ಹಿತ ಕಾಯಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, “ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಕಾರ್ಖಾನೆಯಿಂದಾಗಿ ರೈತರು ಹಾಗೂ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು” ಎಂದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದಕೂಡಲೇ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ಪಕ್ಷದ ಸ್ಥಳೀಯ ನಾಯಕರು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳದಿರುವುದು ದುರ್ದೈವದ ಸಂಗತಿ. ಕೂಡಲೇ ಸಚಿವರು ಕಾರ್ಖಾನೆ ಆರಂಭಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕು” ಎಂದು ಒತ್ತಾಯಿಸಿದರು.
ಹಕ್ಕೊತ್ತಾಯ ಸ್ವೀಕರಿಸಿದ ತಹಸೀಲ್ದಾರ್ ವಿನೋದ ಹತ್ತಳ್ಳಿ, “ಜುಲೈ 4ಕ್ಕೆ ಕ್ಯಾಬಿನೆಟ್ ದರ್ಜೆಯ ಸಭೆಯಿದ್ದು, ಆ ಸಭೆಯಲ್ಲಿ ಕಾರ್ಖಾನೆ ಆರಂಭಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಸೂಚನೆ ಇದೆ. ಅಲ್ಲಿಯವರೆಗೆ ರೈತರು ಸಹಕರಿಸಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಈರಪ್ಪ ಹಂಚಿನಾಳ, ಸುಭಾಷ ಶಿರಬೂರ, ಯಲ್ಲಪ್ಪ ಹೆಗಡೆ, ಬಿಜೆಪಿ ಮುಖಂಡರಾದ ರಾಜು ಯಡಹಳ್ಳಿ, ಪ್ರಕಾಶ ಚಿತ್ತರಗಿ ಸೇರಿದಂತೆ ಇತರರು ಇದ್ದರು.