15 ವರ್ಷಗಳಿಂದ ಔರಾದ್ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಅಭಿವೃದ್ಧಿಯಾಗಿಲ್ಲ
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನು ಗೆದ್ದಲ್ಲಿ ಅಭಿವೃದ್ಧಿಗೆ ಅನುಕೂಲ
ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಬೇಸತ್ತು ಹೋಗಿದ್ದಾರೆ. ಭ್ರಷ್ಟಾಚಾರ, ಬೆಲೆ ಏರಿಕೆ ಬಿಜೆಪಿ ಕೊಡುಗೆಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ್ ಶಿಂಧೆ ಹೇಳಿದರು.
ಔರಾದ ತಾಲೂಕಿನ ಅಲ್ಲಾಪೂರ, ತೇಗಂಪೂರ, ಯನಗುಂದಾ, ಖಾಶೇಂಪೂರ, ಬರದಾಪೂರ, ಕೊಳ್ಳುರ್, ಎಕಲಾರ, ತುಳಜಾಪೂರ, ಬೋರಾಳ, ಜೋನ್ನೆಕೇರಿ, ಕಪ್ಪೇಕೇರಿ, ಮಸ್ಕಲ್, ನಾಗೂರ ಗ್ರಾಮದಲ್ಲಿ ಮತಯಾಚಿಸಿ ಅವರು ಮಾತನಾಡಿದರು.
“ಬೆಲೆ ಏರಿಕೆ ಬರೆ ಎಳೆಯುವಲ್ಲಿ ಬಿಜೆಪಿ ಸರ್ಕಾರದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಇನ್ನೂ ಕಳೆದ 15 ವರ್ಷದಿಂದ ಔರಾದ್ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಬಗ್ಗೆ ಕ್ಷೇತ್ರದ ಜನ ಬೇಸತ್ತಿದ್ದಾರೆ, ಸಾಮಾನ್ಯ ಜನರು ಸ್ವಇಚ್ಛೆಯಿಂದ ನನಗೆ ಬೆಂಬಲಿಸುತ್ತಿದ್ದು, ಕ್ಷೇತ್ರದ ಎಲ್ಲೆಡೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, “ಇಲ್ಲಿಯವರಿಗೆ ಅವಿದ್ಯಾವಂತರಿಗೆ ಬೆಂಬಲಿಸಿದ್ದು ಸಾಕು. ಈ ಬಾರಿ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ಅವರನ್ನು ಸೋಲಿಸಲು ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕಾಗಿದೆ” ಎಂದು ಕರೆ ನೀಡಿದರು.
“ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರಾಜಕುಮಾರ ಹಲಬರ್ಗೆ ಮಾತನಾಡಿ, “ಕ್ಷೇತ್ರದ ಎಲ್ಲ ಗ್ರಾಮದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಅವರಿಗೆ ಜನ ಬೆಂಬಲ ನಿರೀಕ್ಷೆಗೂ ಮೀರಿ ಸಿಗುತ್ತಿದೆ. ಈ ಬಾರಿ ಕಾಂಗ್ರೆಸ್ ಬಹುದೊಡ್ಡ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಸಂಘಪರಿವಾರದ ಡಬಲ್ ಎಂಜಿನ್ ಸರ್ಕಾರವನ್ನು ಕಿತ್ತೊಗೆಯೋಣ : ದೇವನೂರ ಮಹಾದೇವ
ವಕೀಲರ ಬಳಿ ಮತಯಾಚನೆ
ಔರಾದ ಪಟ್ಟಣದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು. ಪಟ್ಟಣದಲ್ಲಿ ವಕೀಲರನ್ನು ಭೇಟಿಯಾದ ಅವರು, ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಕೋರಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನು ಗೆದ್ದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ ದೇಶಮುಖ, ಚನ್ನಪ್ಪ ಉಪ್ಪೆ, ಬಾಬುರಾವ ತಾರೆ, ಡಾ. ಫೈಯಾಜ್ ಅಲೀ, ನೇಹರು ಪಾಟೀಲ್, ಕೆಟಿ ವಿಶ್ವನಾಥ್, ಶರಣಪ್ಪ ಪಾಟೀಲ್, ಸುಧಾಕಾರ ಕೊಳ್ಳುರ್, ಕಾಶಿನಾಥ್ ಜಾಧವ್, ದತ್ತು ಕೊಳ್ಳುರ್, ಶಂಕು ನಿಸ್ಪತೆ ಸೇರಿದಂತೆ ಅನೇಕರಿದ್ದರು.