ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಮ್ಮ ಮನೆಯ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ದೂರು ನೀಡಿದ್ದು, ಅವರ ದೂರಿನ ಮೇರೆಗೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಲಪಂಥೀಯ ಸಂಘಟನೆಗಳ ಸದಸ್ಯರು ಎನ್ನಲಾದ ಕೆಲವು ಅಪರಿಚಿತ ದುಷ್ಕರ್ಮಿಗಳು ಗುರುವಾರ ದೆಹಲಿಯ ಲುಟ್ಯೆನ್‌ನ ಅಶೋಕ ರಸ್ತೆಯಲ್ಲಿರುವ ಸಂಸದ ಅಸಾದುದ್ದೀನ್ ಓವೈಸಿ ಅವರ ನಿವಾಸದ ಹೊರಗಿರುವ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ ಎಂದು ವರದಿಯಾಗಿದೆ.
“ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 (ಕಾನೂನುಬಾಹಿರ ಸಭೆ), 147 (ಗಲಭೆ), 506 (ಅಪರಾಧ ಬೆದರಿಕೆ), ಮತ್ತು 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಅಡಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ” ಎಂದು ಹಿರಿಯ ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಮನಾರ್ಹವೆಂದರೆ, ಓವೈಸಿ ಅವರ ಮನೆ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ, ವಾಸ್ತವವಾಗಿ ಹಲವು ಬಾರಿ, ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಇರುವ ಓವೈಸಿ ನಿವಾಸದ ಮೇಲೆ ಬಲಪಂಥೀಯ ಸಂಘಟನೆಗಳ ಸದಸ್ಯರು ವಿಧ್ವಂಸಕ ಕೃತ್ಯ ನಡೆಸಿದ್ದರು ಎಂದು ವರದಿಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡೆಂಗ್ಯೂ ಜ್ವರಕ್ಕೆ ಇಬ್ಬರು ಬಲಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿರುವ ಓವೈಸಿ, “ಇದು ನಿಮ್ಮ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ದಯವಿಟ್ಟು ಸಂಸದರ ಸುರಕ್ಷತೆಯನ್ನು ಖಾತರಿಪಡಿಸುತ್ತೀರೋ ಅಥವಾ ಇಲ್ಲವೋ ಎಂಬುದನ್ನು ನಮಗೆ ತಿಳಿಸಿ” ಎಂದು ಪೋಸ್ಟ್ ಮಾಡಿದ್ದಾರೆ.
“ಇಂತಹ ಘಟನೆಗಳಿಗೆ ನಾನು ಹೆದರುವುದಿಲ್ಲ. ಈ ಸಾವರ್ಕರ್ ಮಾದರಿಯ ಹೇಡಿತನದ ನಡವಳಿಕೆಯನ್ನು ನಿಲ್ಲಿಸಿ ಮತ್ತು ನನ್ನನ್ನು ಎದುರಿಸುವಷ್ಟು ಪುರುಷರಾಗಿರಿ. ಸ್ವಲ್ಪ ಮಸಿ ಎಸೆದ ನಂತರ ಅಥವಾ ಕೆಲವು ಕಲ್ಲುಗಳನ್ನು ಎಸೆದ ನಂತರ ಓಡಿಹೋಗಬೇಡಿ” ಎಂದು ಬರೆದುಕೊಂಡಿದ್ದಾರೆ.