ಔರಾದ್ ಹಾಗೂ ಕಮಲನಗರ ತಾಲೂಕಿನ ಮರಾಠಿ ಮಾಧ್ಯಮ ಶಾಲೆಗಳಲ್ಲಿ ಕನ್ನಡ ವಿಭಾಗ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಔರಾದ ತಾಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ಕರವೇ ಪದಾಧಿಕಾರಿಗಳು ಶನಿವಾರ ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಔರಾದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ʼಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಔರಾದ್ ಮತ್ತು ಕಮಲನಗರ ತಾಲೂಕಿನ ಗ್ರಾಮ ಹಾಗೂ ತಾಂಡಾ ನಿವಾಸಿಗಳು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮ ಕಲಿಸಲು ಉತ್ಸಾಹ ತೋರಿದ್ದರೂ ಶಿಕ್ಷಣ ಇಲಾಖೆ ಕನ್ನಡ ಮಾಧ್ಯಮ ವಿಭಾಗ ತೆರೆಯುವ ವ್ಯವಸ್ಥೆ ಮಾಡಲಿಲ್ಲ. ಪೋಷಕರು ಹಲವು ಬಾರಿ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಬಸವನವಾಡಿ ತಾಂಡಾ, ಹುಲ್ಯಾಳ, ಹುಲ್ಯಾಳ ತಾಂಡಾ ಸೇರಿದಂತೆ ತಾಲೂಕಿನ ಅನೇಕ ಕಡೆ ಮರಾಠಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ವಿಭಾಗವಿಲ್ಲದ ಕಾರಣ ಮಕ್ಕಳು ಕನ್ನಡ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆʼ ಎಂದು ಬೇಸರ ವ್ಯಕ್ತಪಡಿಸಿದರು.
ʼಔರಾದ ತಾಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಸದ್ಯ 1 ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮ ವಿಭಾಗವಿದ್ದು, 8ನೇ ತರಗತಿವರೆಗೆ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಹಲವು ಸಲ ಬೇಡಿಕೆಯಿಟ್ಟಿದ್ದರೂ ಪ್ರಯೋಜನವಾಗಿಲ್ಲ. ಹಲವು ಗ್ರಾಮ, ತಾಂಡಾಗಳಲ್ಲಿ ಕನ್ನಡ ಮಾಧ್ಯಮ ಇಲ್ಲದ ಕಾರಣ ದೂರದ ಊರುಗಳಿಂದ ವಿದ್ಯಾರ್ಥಿಗಳು ಔರಾದ್ ಪಟ್ಟಣದ ಖಾಸಗಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ.ಇದರಿಂದ ಸರ್ಕಾರಿ ಶಾಲೆಗಳ ಅಸ್ತಿತ್ವವೇ ಇಲ್ಲದಂತಾಗಿದೆʼ ಎಂದರು.
ʼಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಬಸವನವಾಡಿ ತಾಂಡಾ, ಹುಲ್ಯಾಳ ತಾಂಡಾ ಹಾಗೂ ಹುಲ್ಯಾಳ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ವಿಭಾಗ ತೆರೆಯಬೇಕು. ಡೊಂಗರಗಾಂವ ಗ್ರಾಮದಲ್ಲಿ 6 ರಿಂದ 8ನೇ ತರಗತಿವರೆಗೆ ವ್ಯವಸ್ಥೆ ಮಾಡುವುದು ಸೇರಿ ಗಡಿ ತಾಲೂಕಿನ ಗ್ರಾಮ ಹಾಗೂ ತಾಂಡಾಗಳಲ್ಲಿ ಪೋಷಕರ ಮನವಿಗೆ ಸ್ಪಂದಿಸಿ ಕನ್ನಡ ಮಾಧ್ಯಮ ವಿಭಾಗ ತೆರೆದು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಸಾಂವಿಧಾನಿಕ 371(ಜೆ) ಕಲಂ ವಿರುದ್ಧ ಅಪಪ್ರಚಾರ; ಬೀದರ್‌ನಲ್ಲಿ ಸಿಡಿದ ಆಕ್ರೋಶ
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಅನಿಲ ದೇವಕತ್ತೆ, ಗೌರವಾಧ್ಯಕ್ಷ ಬಸವರಾಜ ಶಟಕಾರ ಹಾಗೂ ಕರವೇ ಪ್ರಮುಖರಾದ ಸೋನು ರಾಥೋಡ, ಆಕಾಶ ಮೇತ್ರೆ, ಬಾಲಾಜಿ ಕಾಸ್ಲೆ, ಭೀಮರಾವ ಪವಾರ್, ದಿಲೀಪ ಹಕ್ಕೆ, ರಾಜು ಇದ್ದರು.