ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕುದುರೆಮುಖ ಕಬ್ಬಿಣ್ಣದ ಅದಿರು ಗಣಿಗಾರಿಕೆ ಕಂಪನಿಗೆ ನೀಡಲಾಗಿರುವ ಅನುಮತಿಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ, ಕೇಂದ್ರ ಉಕ್ಕು ಖಾತೆ ಸಚಿವ ಎಚ್‌ಡಿ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದಿದ್ದೇನೆ ಎಂದು ಪರಿಸರ ಹೋರಾಟಗಾರ ರವಿಗೌಡ ಮಲ್ಲದಗುಡ್ಡ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕೇಂದ್ರ ಉಕ್ಕು ಖಾತೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ ದಿನದಂದೇ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಅವಕಾಶ ನೀಡಿದ್ದಾರೆ. ಅವರ ನಡೆ ಖಂಡನೀಯ. ಗಣಿಗಾರಿಕೆಯಿಂದ ಪರಿಸರ ನಾಶ ಮಾತ್ರವಲ್ಲ ಜೀವ ಸಂಕುಲುಗಳು ನಾಶವಾಗಲಿದೆ. 401 ಹೇಕ್ಟರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿರುವುದರಿಂದ 99,330 ಮರಗಳ ಮಾರಣಹೋಮ ನಡೆಯಲಿದೆ. ಔಷಧಿ ಸಸ್ಯಗಳು, ಪ್ರಾಣಿ, ಪಕ್ಷಿಗಳು, ವನ್ಯಜೀವಿಗಳ, ನೈಸರ್ಗಿಕ ಸಂಪತ್ತು ವಿನಾಶವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆಮ್ಲಜನಕ ನೀಡುವ ದೊಡ್ಡ ಅರಣ್ಯವನ್ನು ನಾಶ ಮಾಡುವುದು ಭವಿಷ್ಯಕ್ಕೆ ಆಪತ್ತಾಗಿ ಪರಿಣಮಸಲಿದೆ. 2006ರಲ್ಲಿ ಸುಪ್ರಿಂಕೋರ್ಟ್ ಅದಿರು ಗಣಿಕೆಯನ್ನು ನಿರ್ಬಂಧಿಸಿ ಆದೇಶಿಸಿದ್ದರೂ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅನುಮತಿ ನೀಡಿದೆ. ಸದ್ಯ, ರಾಜ್ಯ ಅರಣ್ಯ ಇಲಾಖೆ ಗಣಿಗಾರಿಕೆಗೆ ಅವಕಾಶ ನೀಡುವದಿಲ್ಲ ಎಂದು ಹೇಳಿದೆ. ಮುಖ್ಯಮಂತ್ರಿಗಳು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಗಣಿಗಾರಿಕೆ ಅವಕಾಶ ನೀಡಬಾರದು” ಎಂದು ಆಗ್ರಹಿಸಿದ್ದಾರೆ.
“ಎಲ್ಲ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹೋರಾಟಕ್ಕೆ ಬೆಂಬಲವಾಗಿ ನಿಂತು ತೀವ್ರ ವಿರೋಧ ವ್ಯಕ್ತಪಡಿಸಬೇಕು. ರೈತನ ಮಗ ಎಂದು ಹೇಳಿಕೊಳ್ಳುವ ಎಚ್.ಡಿ ಕುಮಾರಸ್ವಾಮಿ ಅವರು ಅರಣ್ಯ ನಾಶಕ್ಕೆ ಕಾರಣವಾಗುವ ಗಣಿಗಾರಿಕೆ ಅವಕಾಶ ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ವರದಿ : ಹಫೀಜುಲ್ಲ