ಹಾವೇರಿ ನಗರದಲ್ಲಿಯೇ ಸರ್ಕಾರಿ ಕಾನೂನು ಮಹಾವಿದ್ಯಾಲಯ ಕಟ್ಟಡ ನಿರ್ಮಿಸಿ ಹಾಗೂ ಪ್ರಸಕ್ತ ವರ್ಷದಿಂದಲ್ಲೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಜಿಲ್ಲಾ ಸಮಿತಿಯ ಕಾರ್ಯಕರ್ತರು ರಾಜ್ಯ ಸರ್ಕಾರದ ಉಪ ಸಭಾಪತಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರ ಗೃಹ ಕಚೇರಿಯಲ್ಲಿ ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ನೂರಾರು ವಿದ್ಯಾರ್ಥಿಗಳು ಪದವಿ ಮುಗಿಸಿ ಉನ್ನತ ಶಿಕ್ಷಣ ಪಡೆಯಬೇಕು, ಅದರಲ್ಲೂ ವಕೀಲರಾಗಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಹಾವೇರಿ ಜಿಲ್ಲೆಯ ರಚನೆಗೊಂಡು 26 ವರ್ಷ ಕಳೆದರೂ ಸರ್ಕಾರಿ ಕಾನೂನು ಕಾಲೇಜು ಇಲ್ಲದೆ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳ ಕಡೆ ಮುಖ ಮಾಡುವಂತಾಗಿದೆ” ಎಂದು ಹೇಳಿದರು.
“ಹಾವೇರಿ ಜಿಲ್ಲಾ ಕೇಂದ್ರವಾಗಿ 26 ವರ್ಷಗಳು ಉರುಳಿದರೂ ಕೂಡ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿದ್ಯಾರ್ಥಿ ಸಮುದಾಯ ನೂರಾರು ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಮೂಲ ಕಾರಣವಾಗಿದೆ. ಈವರೆಗೂ ಇಲ್ಲಿ ಆಳ್ವಿಕೆ ಮಾಡಿದ ಸಚಿವರು, ಶಾಸಕರು, ಸಂಸದರು ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ವಿದ್ಯಾರ್ಥಿ ಸಮುದಾಯಕ್ಕೆ ಅತ್ಯಂತ ಅಗತ್ಯವಾದ ಮೂಲ ಸೌಲಭ್ಯಗಳನ್ನು ಒದಗಿಸದೆ ಅವರನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸಲು ಹೊರಟಿದೆ” ಎಂದು ಆರೋಪಿಸಿದರು.
“ಇಡೀ ಜಿಲ್ಲೆಗೆ ಒಂದೇ ಒಂದು ಖಾಸಗಿ ಕಾನೂನು ಕಾಲೇಜು ಇದೆ. ರಾಣೇಬೆನ್ನೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಕೇವಲ 60 ಸೀಟುಗಳಿಗೆ ಮಾತ್ರ ಅವಕಾಶವಿದೆ. 60 ಸೀಟುಗಳಿಗೆ ಪ್ರತಿ ವರ್ಷವೂ ನೂರಾರು ಅರ್ಜಿಗಳು ಬರುತ್ತವೆ. ಅದರಲ್ಲಿ ಕೇವಲ 60 ಸೀಟ್ ನಿಯಮದಂತೆ ಭರ್ತಿ ಮಾಡಿಕೊಳ್ಳುತ್ತಾರೆ. ಇತರೆ ವಿದ್ಯಾರ್ಥಿಗಳಿಗೆ ಸೀಟು ಸಿಗದಿರುವುದು ಹಾಗೂ ಸರ್ಕಾರಿ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕ ವಸೂಲಿ ಮಾಡುವುದರಿಂದ ಸಾಮಾನ್ಯ ಬಡ ವಿದ್ಯಾರ್ಥಿಗಳಿಗೆ ಕಾನೂನು ಪದವಿ ಪಡೆಯುವುದು ಅಸಾದ್ಯವಾಗಿದೆ. ಅನಿವಾರ್ಯವಾಗಿ ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿರಸಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಮೊರೆ ಹೋಗಬೇಕಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ಅನೇಕ ವರ್ಷಗಳಿಂದ ಹಾವೇರಿ ಜಿಲ್ಲೆಗೊಂದು ಕಾನೂನು ಕಾಲೇಜು ಮಂಜೂರು ಮಾಡುವಂತೆ ಹೋರಾಟ ಮಾಡುತ್ತಲೇ ಬಂದಿದೆ. ಆದರೂ ಸ್ಪಂದಿಸದ ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೀಯ” ಎಂದರು.
“ನಗರದಿಂದ ದೂರದ ಯಾವುದೇ ಸಾರಿಗೆ ಸಂಪರ್ಕ ಇಲ್ಲದಿರುವ ನೆಲೋಗಲ್ ಗುಡ್ಡದಲ್ಲಿ ಮಾಡುತ್ತಿರುವುದು ಸರಿಯಲ್ಲ. ಅಲ್ಲಿಗೆ ಬಸ್‌ಗಳು ಹೋಗುವುದಿಲ್ಲ. ಕನಿಷ್ಟ ದ್ವಿಚಕ್ರ ವಾಹನಗಳು ಹೋಗಲು ಸಾದ್ಯವಿಲ್ಲ. ಇದರಿಂದ ಕಾನೂನು ಶಿಕ್ಷಣದಿಂದ ವಂಚಿತರಾಗುವ ಅಪಾಯ ಕಾಡುತ್ತದೆ. ಹಾಗಾಗಿ ನಗರದಲ್ಲಿಯೇ ಕಟ್ಟಡ ನಿರ್ಮಿಸುವಂತಾಗಬೇಕು. ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲು ಮುನ್ಸಿಪಲ್ ಮೈದಾನದಲ್ಲಿ ನಡೆಸಲು ಎಲ್ಲ ರೀತಿಯ ಅವಕಾಶಗಳಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜು.15ರಂದು ಬೃಹತ್ ಪ್ರತಿಭಟನೆ
“ವಿದ್ಯಾರ್ಥಿ ಸಂಘಟನೆಗಳು, ಸಾಹಿತಿಗಳು, ಶಿಕ್ಷಣ ಪ್ರೇಮಿಗಳು, ವಿಚಾರವಾದಿಗಳ, ಪ್ರಗತಿಪರ ಸಂಘಟನೆಗಳು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಈತ ಗಮನ ಹರಿಸಬೇಕು” ಎಂದು ಬಸವರಾಜ ಎಸ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರುಗಳಾದ ಸುಲೆಮಾನ್ ಮತ್ತಿಹಳ್ಳಿ, ಲಕ್ಷ್ಮಣ ಕೆಂಗಪ್ಪಳವರ, ನಾಗರಾಜ ಲಮಾಣಿ, ಪ್ರದೀಪ್ ಎಸ್ ಆರ್, ಮಾಲತೇಶ್ ನೆಗಳೂರ, ಈಶ್ವರ್ ಡಿ ಎಚ್, ದಯಾನಂದ ಹಿರೇಮಠ ಇದ್ದರು.
