ಹಣ ನೀಡದ ಟಾಟಾ ಸಂಸ್ಥೆ; TISSನ 55 ಅಧ್ಯಾಪಕರು, 60 ಬೋಧಕೇತರ ಸಿಬ್ಬಂದಿಗಳು ವಜಾ

Date:

Advertisements

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ತನ್ನ ನಾಲ್ಕು ಕ್ಯಾಂಪಸ್‌ಗಳಲ್ಲಿ 55 ಅಧ್ಯಾಪಕರು ಮತ್ತು 60 ಬೋಧಕೇತರ ಸಿಬ್ಬಂದಿಯನ್ನು ಯಾವುದೇ ಸೂಚನೆಯಿಲ್ಲದೆ ವಜಾಗೊಳಿಸಿದೆ ಎಂದು ವರದಿಯಾಗಿದೆ. ವಜಾಗೊಂಡರಲ್ಲಿ ಅರ್ಧದಷ್ಟು ಬೋಧಕ ಸಿಬ್ಬಂದಿ ಮತ್ತು ಎಲ್ಲ ಬೋದಕೇತರ ಸಿಬ್ಬಂದಿಗಳು ಗುವಾಹಟಿ ಕ್ಯಾಂಪಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದವರಾಗಿದ್ದಾರೆ ಎಂದು ಹೇಳಲಾಗಿದೆ.

ವಜಾಗೊಂಡವರಲ್ಲಿ ಹಲವರು 10 ವರ್ಷಗಳಿಗೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಗುತ್ತಿಗೆ ನೌಕರರಾಗಿದ್ದರು. ಅವರ ಸಂಬಳಕ್ಕೆ ಟಾಟಾ ಎಜುಕೇಶನ್ ಟ್ರಸ್ಟ್‌ ಹಣ ನೀಡುತ್ತಿತ್ತು. ಆದರೆ, ಒತ್ತೀಚೆಗೆ ಟ್ರಸ್ಟ್‌ನಿಂದ ಯಾವುದೇ ಅನುದಾನ ಬಂದಿಲ್ಲ. ಹಾಗಾಗಿಯೇ, ಅವರೆಲ್ಲರನ್ನೂ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

ವಜಾಗೊಂಡ ಬೋಧನಾ ಸಿಬ್ಬಂದಿಗಳ ಪೈಕಿ 20 ಮಂದಿ ಮುಂಬೈ ಕ್ಯಾಂಪಸ್‌, 15 ಮಂದಿ ಹೈದರಾಬಾದ್, 14 ಗುವಾಹಟಿ ಹಾಗೂ 6 ಮಂದಿ ತುಳಜಾಪುರ ಕ್ಯಾಂಪಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. TISS ಕ್ಯಾಂಪಸ್‌ಗಳಲ್ಲಿ ಉಳಿದಿರುವ ಬೋಧನಾ ಸಿಬ್ಬಂದಿ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ವೇತನ ನೀಡುವ ಖಾಯಂ ಅಧ್ಯಾಪಕರಾಗಿದ್ದಾರೆ.

Advertisements

ಟಿಐಎಸ್‌ಎಸ್‌ಅನ್ನು 2023ರ ಜೂನ್‌ನಲ್ಲಿ ಕೇಂದ್ರ ಸರ್ಕಾರದ ನೇಮಕಾತಿಗಳ ಅಡಿಯಲ್ಲಿ ಸೇರಿಸಲಾಯಿತು. ಜೊತೆಗೆ, ಇತರ ಡೀಮ್ಡ್-ಟು-ಬಿ-ಯೂನಿವರ್ಸಿಟಿಗಳು ಕೇಂದ್ರದಿಂದ 50%ರಷ್ಟು ಹಣವನ್ನು ಯುಜಿಸಿ ಮೂಲಕ ಪಡೆಯುತ್ತಿವೆ. ಟಿಐಎಸ್‌ಎಸ್‌ನ ಖಾಯಂ ಅಧ್ಯಾಪಕರು ಯುಜಿಸಿಯಿಂದ ವೇತನ ಪಡೆದರೆ, ಗುತ್ತಿಗೆ ಸಿಬ್ಬಂದಿಗಳು ಟಾಟಾ ಎಜುಕೇಶನ್ ಟ್ರಸ್ಟ್‌ನಿಂದ ವೇತನ ಪಡೆಯುತ್ತಿದ್ದಾರೆ.

“ಸಂಬಳದ ಉದ್ದೇಶಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಟಾಟಾ ಎಜುಕೇಶನ್ ಟ್ರಸ್ಟ್‌ಗೆ ಟಿಐಎಸ್‌ಎಸ್‌ ಹಲವು ಬಾರಿ ಮನವಿ ಮಾಡಿದೆ. ಅಧಿಕೃತ ಪತ್ರವ್ಯವಹಾರ ಮತ್ತು ವೈಯಕ್ತಿಕ ಸಭೆಗಳ ಮೂಲಕ ಅನುದಾನ ಬಿಡುಗಡೆಗೆ ಹಲವಾರು ಪ್ರಯತ್ನಗಳನ್ನು ನಡೆಸಿದೆ. ಆದರೆ, ಅನುದಾನ ಬಿಡುಗಡೆಯಾಗಿಲ್ಲ. ಅನುದಾನದ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ನಿರ್ಧಾರದ ಬಗ್ಗೆ ಟಾಟಾ ಎಜುಕೇಶನ್ ಟ್ರಸ್ಟ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ಟಿಐಎಸ್‌ಎಸ್‌ ಶುಕ್ರವಾರ ಸಂಜೆ ಕಳಿಸಿದ ಇಮೇಲ್‌ನಲ್ಲಿ ತಿಳಿಸಿದೆ” ಎಂದು ವಜಾಗೊಂಡವರಿಗೆ ಅಧಿಕೃತ ರಿಜಿಸ್ಟ್ರಾರ್ ಅನಿಲ್ ಸುತಾರ್ ತಿಳಿಸಿದ್ದಾರೆ.

“ತಮಗೆ ಬಂದಿರುವ ಇಮೇಲ್‌ನಲ್ಲಿ ‘ಟಾಟಾ ಎಜುಕೇಶನ್ ಟ್ರಸ್ಟ್‌ನಿಂದ ಅನುಮೋದನೆ/ ಅನುದಾನ ಬಾರದಿದ್ದಲ್ಲಿ, ವಜಾಗೊಂಡವರ ಸೇವೆಗಳು ಜೂನ್ 30ರಿಂದ ಜಾರಿಗೆ ಬರುವಂತೆ ಕೊನೆಗೊಳ್ಳುತ್ತವೆ’ ಎಂದು ಸೇರಿಸಲಾಗಿದೆ” ಎಂದು ಸುತಾರ್ ವಿವರಿಸಿದ್ದಾರೆ.

ಅನುದಾನ ಬಿಡುಗಡೆ ಮತ್ತು ಸಿಬ್ಬಂದಿಗಳನ್ನು ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯೆಗಾಗಿ ಟಾಟಾ ಟ್ರಸ್ಟ್‌ನ ಕಮ್ಯುನಿಕೇಷನ್ ಮುಖ್ಯಸ್ಥ ದೀಪಿಕಾ ಸುರೇಂದ್ರ ಅವರನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ಸಂಪರ್ಕಿಸಿದೆ. ಅವರು ಪ್ರತಿಕ್ರಿಯೆಗಾಗಿ ಪ್ರಶ್ನೆಗಳನ್ನು ಟ್ರಸ್ಟ್‌ ಪಿಆರ್‌ ಏಜೆನ್ಸಿಗೆ ಇಮೇಲ್‌ ಮಾಡುವಂತೆ ಕೇಳಿದ್ದಾರೆ. ಪ್ರಶ್ನೆಗಳನ್ನು ಪತ್ರಿಕೆಯು ಇಮೇಲ್‌ ಮಾಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ‘ಟಿಐಇ’ ವರದಿ ಮಾಡಿದೆ.

“ನಮ್ಮ ವಾರ್ಷಿಕ ಗುತ್ತಿಗೆ ಒಪ್ಪಂದಗಳು ಮೇ ತಿಂಗಳಲ್ಲಿ ಕೊನೆಗೊಂಡಿವೆ. ಆದರೆ, ಜೂನ್ ಆರಂಭದಲ್ಲಿ, ಟಾಟಾ ಟ್ರಸ್ಟ್ ಅನುದಾನವನ್ನು ಬಿಡುಗಡೆ ಮಾಡಿ, ಒಪ್ಪಂದವನ್ನು ನವೀಕರಿಸುವವರೆಗೆ ಕ್ಯಾಂಪಸ್‌ ಕೆಲಸಗಳನ್ನು ಮುಂದುವರೆಸಲು ಮನವಿ ಮಾಡಲಾಗಿತ್ತು. ಹಾಗಾಗಿ, ನಾವು ಒಪ್ಪಂದಗಳನ್ನು ನವೀಕರಿಸಲಾಗುವುದೆಂದು ಭಾವಿಸಿದ್ದೆವು. ಶುಕ್ರವಾರದವರೆಗೆ ನಾವು ಕೆಲಸ ಮಾಡಿದ್ದೇವೆ. ಆದರೆ, ಅಂದು ಸಂಜೆಯ ಹೊತ್ತಿಗೆ ನಮಗೆ ಇಮೇಲ್ ಬಂದಿದ್ದು, ನಮ್ಮನ್ನು ವಜಾಗೊಳಿಸಿರುವುದಾಗಿ ಹೇಳಲಾಗಿದೆ” ಎಂದು ಟಿಐಎಸ್‌ಎಸ್‌ ಗುವಾಹಟಿಯ ಅಧ್ಯಾಪಕರೊಬ್ಬರು ತಿಳಿಸಿದ್ದಾರೆ.

“ನಾನು ಇಲ್ಲಿ 11 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನಾವು ಸ್ವಲ್ಪ ಸಮಯದವರೆಗೆ ದೀರ್ಘಾವಧಿಯ ಗುತ್ತಿಗೆ ಒಪ್ಪಂದವನ್ನು ಕೇಳುತ್ತಿದ್ದೆವು. ನಮ್ಮ ಒಪ್ಪಂದಗಳಲ್ಲಿ ಹೇಳಿರುವಂತೆ ನಮಗೆ ಒಂದು ತಿಂಗಳ ನೋಟಿಸ್ ಅವಧಿಯನ್ನು ಸಹ ನೀಡಿಲ್ಲ. ನಮ್ಮ ಜೂನ್ ತಿಂಗಳ ಸಂಬಳವನ್ನು ಪಡೆಯಲು ಬಾಕಿ ಫಾರ್ಮ್ ಅನ್ನು ಭರ್ತಿ ಮಾಡಲು ನಮಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆಯಷ್ಟೇ” ಎಂದು ಅವರು ವಿವರಿಸಿದ್ದಾರೆ.

“ಗುತ್ತಿಗೆ ಆಧಾರದ ಎಲ್ಲ ಹುದ್ದೆಗಳನ್ನು ಟಾಟಾ ಎಜುಕೇಶನ್ ಟ್ರಸ್ಟ್‌ನ ನಿಧಿಯಿಂದ ನಿರ್ವಹಿಸಲಾಗುತ್ತದೆ. ವಜಾಗೊಂಡಿರುವ ನಮ್ಮಲ್ಲಿ ಹೆಚ್ಚಿನವರು ಕೇಂದ್ರದ ಮುಖ್ಯಸ್ಥರಂತಹ ಜವಾಬ್ದಾರಿಗಳ ಸ್ಥಾನಗಳನ್ನು ಒಳಗೊಂಡಂತೆ 10-15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿ, ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ ಶಿಕ್ಷಣ ಸಂಸ್ಥೆಯು ಕೋರ್ಸ್‌ಗಳನ್ನು ಹೇಗೆ ನಡೆಸಲು ಯೋಜಿಸುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ” ಎಂದು ಹೆಸರು ಹೇಳಲಿಚ್ಚಿಸದ ಮುಂಬೈ ಕ್ಯಾಂಪಸ್‌ನ ಅಧ್ಯಾಪಕರೊಬ್ಬರು ಹೇಳಿದ್ದಾರೆ.

ಇನ್‌ಸ್ಟಿಟ್ಯೂಟ್ ಆಡಳಿತದ ಪ್ರಕಾರ, “ಸಂಸ್ಥೆಯು ಕಳೆದ ಆರು ತಿಂಗಳಲ್ಲಿ ಟಾಟಾ ಎಜುಕೇಶನ್ ಟ್ರಸ್ಟ್ ಅನ್ನು ಹಲವು ಬಾರಿ ಸಂಪರ್ಕಿಸಿದೆ. ಅನುದಾನ ಮುಂದುವರಿಕೆಗೆ ಪ್ರಸ್ತಾವನೆ ಸಲ್ಲಿಸಲು ಆಡಳಿತ ಮಂಡಳಿ ಅಗತ್ಯವಿದ್ದ ಎಲ್ಲ ರೀತಿಯ ಮನವಿಗಳನ್ನು ಮಾಡಿದೆ. ಆದರೆ, ಟ್ರಸ್ಟ್‌ನಿಂದ ಯಾವುದೇ ಪ್ರತಿಕ್ರಿಯೆಯಾಗಲಿ, ನೇರ ಸಂವಹನವಾಗಲಿ ದೊರೆತಿಲ್ಲ. ಇದು ಸಂಸ್ಥೆಯ ಆಡಳಿತವನ್ನು ಉಳಿಸಿಕೊಳ್ಳಲು ಕಷ್ಟಕರವಾಗಿದೆ” ಎಂದು ಆಡಳಿತದ ಸದಸ್ಯರೊಬ್ಬರು ಹೇಳಿದರು.

“ಸಂಸ್ಥೆಯು ಈಗಾಗಲೇ ಟಾಟಾ ಎಜುಕೇಷನ್‌ ಟ್ರಸ್ಟ್‌ಗೆ ಪತ್ರ ಬರೆದಿದೆ. ಅನುದಾನ ಬಂದರೆ, ವಜಾ ಆದೇಶವನ್ನು ಹಿಂಪಡೆಯಬಹುದು. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಸಂಸ್ಥೆಗೆ ಬೇರೆ ದಾರಿಯಿಲ್ಲ. ಕೋರ್ಸ್‌ಗಳನ್ನು ನಡೆಸಲು ಸಂಸ್ಥೆಯು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗುತ್ತದೆ” ಎಂದು ಹಂಗಾಮಿ ಉಪಕುಲಪತಿ ಪ್ರೊ. ಮನೋಜ್ ತಿವಾರಿ ಹೇಳಿದ್ದಾರೆ.

“ವಜಾಗೊಳಿಸಲಾದ ಅಧ್ಯಾಪಕರಲ್ಲಿ ಕೇವಲ ನೆಟ್-ಪಾಸ್ ಮಾಡಿದ ಪಿಎಚ್‌ಡಿ ಸ್ಕಾಲರ್‌ಗಳು ಮಾತ್ರವಲ್ಲ, ಟಾಟಾ ಎಜುಕೇಶನ್ ಟ್ರಸ್ಟ್‌ನ ಗೌರವಾನ್ವಿತ ಸಮಿತಿಯಿಂದ ಆಯ್ಕೆಯಾದವರೂ ಇದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಅವರ ಸಾಮಾಜಿಕ ಹಿನ್ನೆಲೆ ಮತ್ತು ಬದ್ಧತೆಯನ್ನು ಪರಿಗಣಿಸಲಾಗಿತ್ತು. ಈ ಪ್ರೊಫೆಸರ್‌ಗಳಲ್ಲಿ ಹೆಚ್ಚಿನವರು ದೆಹಲಿ ಮತ್ತು ಇತರ ಮಹಾನಗರಗಳಲ್ಲಿ ಹೊಸದಾಗಿ ಆರಂಭವಾದ ಖಾಸಗಿ ವಿಶ್ವವಿದ್ಯಾನಿಲಯಗಳ ಲಾಭದಾಯಕ ಉದ್ಯೋಗಾವಕಾಶಗಳನ್ನು ತಿರಸ್ಕರಿಸಿ, ಸಂಸ್ಥೆಗೆ ಬಂದಿದ್ದರು. ದುರದೃಷ್ಟವಶಾತ್, ಅವರೂ ಕೂಡ ವಜಾಗೊಂಡಿದ್ದಾರೆ” ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X