ನೋಡ ನೋಡುತ್ತಿದ್ದಂತೆ ಜನರ ಕಣ್ಣೆದುರೆ ಒಂದೇ ಕುಟುಂಬದ ಐವರು ಉಕ್ಕಿ ಹರಿಯುವ ಜಲಪಾತದಲ್ಲಿ ಕೊಚ್ಚಿ ಹೋದ ಘಟನೆ ಮುಂಬೈ ನ ಲೋನಾವಾಲ ಪ್ರದೇಶದಲ್ಲಿ ನಡೆದಿದೆ.
ಕುಟುಂಬವೊಂದು ರಜೆ ಸಮಯವನ್ನು ಕಳೆಯಲು ಮುಂಬೈನಿಂದ 80 ಕಿ.ಮೀ ದೂರದಲ್ಲಿರುವ ಬುಶಿ ಜಲಾಶಯಕ್ಕೆ ಆಗಮಿಸಿತ್ತು. ಅತೀ ಹೆಚ್ಚು ಮಳೆಯಾಗುತ್ತಿದ್ದ ಕಾರಣ ಜಲಾಶಯದ ಬಳಿಯಲ್ಲಿನ ಜಲಪಾತ ಉಕ್ಕಿ ಹರಿಯುತ್ತಿತ್ತು.
ಸಾಧಾರಣ ಹರಿವಿದ್ದ ಕಾರಣ ಜಲಪಾತದ ಮಧ್ಯೆ ಕುಟುಂಬದ 7 ಮಂದಿ ನಿಂತಿದ್ದರು. ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾದ ಕಾರಣ ಕುಟುಂಬದ 7 ಮಂದಿ ಒಬ್ಬರಿಗೊಬ್ಬರು ಹಿಡಿದುಕೊಂಡು ಗಟ್ಟಿಯಾಗಿ ನಿಂತಿದ್ದರು. ಆದರೂ ನೀರಿನ ರಭಸಕ್ಕೆ ನೂರಾರು ಜನರ ಕಣ್ಣೆದುರೆ ಏಳು ಮಂದಿ ಕೊಚ್ಚಿ ಹೋದರು. ಇವರಲ್ಲಿ ಇಬ್ಬರು ಈಜಿ ಸುರಕ್ಷಿತ ಸ್ಥಳ ತಲುಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ವಾಮೀಜಿಗಳಿಗೆ ಈ ಭಂಡತನ ಬಂದದ್ದಾದರೂ ಎಲ್ಲಿಂದ?
ಮೂವರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದ ಇಬ್ಬರ ಮೃತದೇಹಗಳಿಗೆ ಶೋಧ ನಡೆಸಲಾಗುತ್ತಿದೆ. ಘಟನೆಯು ಭಾನುವಾರ(ಜೂನ್ 30) ಮಧ್ಯಾಹ್ನ ನಡೆದಿದೆ.
ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ಕೊಚ್ಚಿಕೊಂಡು ಹೋಗಿರುವವರ ಪತ್ತೆಗಾಗಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರೂ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಮೃತರನ್ನು ಪುಣೆ ಮೂಲದ ಶಾಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8) ಎನ್ನಲಾಗಿದ್ದು. ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸೈಯದ್ (9) ಅವರ ಮೃತದೇಹಗಳು ಇನ್ನೂ ದೊರಕಿಲ್ಲ.
