ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಕೋಟಾವನ್ನು ಪ್ರಾರಂಭಿಸಲು 2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ.
ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಜೂನ್ 27ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಅಧ್ಯಕ್ಷರಿಗೆ ಪತ್ರ ಬರೆದು ರಾಜ್ಯದ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ 508 ಎಂಬಿಬಿಎಸ್ ಸೀಟುಗಳನ್ನು ರಚಿಸುವ ಮೂಲಕ ಶೇಕಡ 15ರಷ್ಟು ಎನ್‌ಆರ್‌ಐ ಕೋಟಾವನ್ನು ಮಂಜೂರು ಮಾಡುವಂತೆ ಕೋರಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾವನ್ನು ಹೊಂದುವ ಪ್ರಸ್ತಾಪವನ್ನು ಸಮರ್ಥಿಸಿದ ಪಾಟೀಲ್, ಪದವಿಪೂರ್ವ ಮತ್ತು ಸ್ನಾತಕೋತ್ತರಗಳಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶ ಮತ್ತು ಹೆಚ್ಚುವರಿ ಸೀಟುಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಎಂಬಿಬಿಎಸ್ ಇಂಟರ್ನ್‌ಗಳಿಗೆ ರೂ. 25 ಸಾವಿರ ಶಿಷ್ಯವೇತನ ಪಾವತಿಸಲು ಎನ್ಎಂಸಿಗೆ ಸುಪ್ರೀಂ ನಿರ್ದೇಶನ
ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಪ್ರಸ್ತಾಪಿಸಿದ ಸಚಿವರು ಜಾಗತಿಕ ಪ್ರಭಾವಕ್ಕಾಗಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶ ಮುಖ್ಯವಾಗುತ್ತದೆ ಎಂದರು. ಜೊತೆಗೆ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯ ಉದಾಹರಣೆಗಳನ್ನು ಸಚಿವರು ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲೇ ಲಭ್ಯವಿರುವ ಸೀಟುಗಳಲ್ಲೆ ಎನ್‌ಆರ್‌ಐ ಕೋಟಾ ರಚಿಸುವುದು ಸರಿಯಲ್ಲ. ಇದರಿಂದಾಗಿ ಸೀಟು ಪ್ರಮಾಣ ಕಡಿಮೆಯಾಗುತ್ತದೆ. ಬಡವರು ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಇರುತ್ತದೆ. ಈ ರೀತಿ ಕ್ರಮ ಕೈಗೊಂಡರೆ ವಿದ್ಯಾರ್ಥಿ, ಪೋಷಕರ ವಿರೋಧವೂ ಕೂಡಾ ಎದುರಾಗುತ್ತದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ಇನ್ನು ಕರ್ನಾಟಕದಲ್ಲಿರುವ ಸರ್ಕಾರಿ ಪಶುವೈದ್ಯಕೀಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಶೇಕಡ 15ರಷ್ಟು ಎನ್‌ಆರ್‌ಐ ಕೋಟಾವಿದೆ ಎಂಬುವುದನ್ನು ಕೂಡಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾಕ್ಕೆ ಅನುಮತಿಯಿದೆ. ಪ್ರತಿ ವಿದ್ಯಾರ್ಥಿಗೆ ಒಂದು ಕೋಟಿ ರೂಪಾಯಿಯಿಂದ 2.5 ಕೋಟಿ ರೂಪಾಯಿಯಷ್ಟು ಕೋರ್ಸ್ ಶುಲ್ಕವನ್ನು ಪಾವತಿ ಮಾಡಲಾಗುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿಯಾದರೆ ವಿದ್ಯಾರ್ಥಿಗೆ ವಾರ್ಷಿಕವಾಗಿ 25 ಲಕ್ಷ ರೂಪಾಯಿ ಶುಲ್ಕ ನಿಗದಿ ಮಾಡಬಹುದು. ಇದರಿಂದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷ 127 ಕೋಟಿ ರೂಪಾಯಿ ಮತ್ತು ಐದು ವರ್ಷಕ್ಕೆ 571.5 ಕೋಟಿ ರೂಪಾಯಿ ಸಂದಾಯವಾಗುತ್ತದೆ ಎಂದು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.