ಈ ದಿನ ಸಂಪಾದಕೀಯ | ಬಹಳ ಕಾಲ ನೆನಪಿನಲ್ಲುಳಿಯುವ ಫೈನಲ್ ಪಂದ್ಯ

Date:

Advertisements
ಫೈನಲ್ ಪಂದ್ಯದ ಕೊನೆಯ ಓವರ್‍‌ನ ಮೊದಲ ಬಾಲ್‌ನಲ್ಲಿಯೇ ಮಿಲ್ಲರ್ ಬೌಂಡರಿ ಎತ್ತಿದರು. ಅಲ್ಲಿ, ಬೌಂಡರಿ ಲೈನ್‌ನಲ್ಲಿ ಐದು, ಐದೂವರೆ ಅಡಿಯಿದ್ದ ಆಟಗಾರ ನಿಂತಿದ್ದರೆ, ಅದು ಖಂಡಿತ ಸಿಕ್ಸರ್. ಆದರೆ ಅದನ್ನು ಕ್ಲಾಸಿಕ್ ಕ್ಯಾಚನ್ನಾಗಿ ಪರಿವರ್ತಿಸಿದವನು ಸೂರ್ಯಕುಮಾರ್ ಯಾದವ್. ಅದೊಂದು ಕ್ಯಾಚ್, ಆಟದ ಗತಿಯನ್ನೇ ಬದಲಿಸಿತು. ಪಂದ್ಯದ ಫಲಿತಾಂಶವನ್ನೇ ಬರೆಯಿತು. ಬಹಳ ಕಾಲ ನೆನಪಿನಲ್ಲುಳಿಯುವಂತೆ ಮಾಡಿತು.

ಏಳು ತಿಂಗಳ ಹಿಂದಷ್ಟೇ ಭಾರತದ ಅಹಮದಾಬಾದಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ಎದುರು ಸೋಲನನುಭವಿಸಿತ್ತು. ಭಾರತದ ನೆಲದಲ್ಲಿ, ಅಭಿಮಾನಿಗಳ ಅಂಗಳದಲ್ಲಿ ಫೈನಲ್‌ಗೆ ಬಂದು ಸೋತಿದ್ದು ಕ್ರಿಕೆಟ್‌ಪ್ರಿಯರನ್ನು ನೋವಿಗೆ ನೂಕಿತ್ತು. ಆ ನೋವು ಕ್ರಿಕೆಟಿಗರ ಅನಗತ್ಯ ಪ್ರಚಾರ, ಖ್ಯಾತಿ, ಹಣಗಳಿಕೆಯತ್ತ ಹೊರಳಿತ್ತು; ಕುಹಕ-ಟೀಕೆ-ಮೂದಲಿಕೆಗಳಿಗೆ ಗುರಿ ಮಾಡಿತ್ತು.

ಆ ಸಮಯದಲ್ಲಿ ಭಾರತ ಕ್ರಿಕೆಟ್ ತಂಡವೇನು ಕಳಪೆಯಾಗಿರಲಿಲ್ಲ. ಆಸ್ಟ್ರೇಲಿಯಾದ ವಿರುದ್ಧ ಸೋಲುವಂತಹ ದುರ್ಬಲ ತಂಡವಾಗಿರಲಿಲ್ಲ. ಇದು ತಂಡದ ಆಟಗಾರರು ಮತ್ತು ಕ್ರಿಕೆಟ್ ಪ್ರೇಮಿಗಳಿಗಿಂತ ಹೆಚ್ಚಾಗಿ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್‌ರನ್ನು ಬಹಳವಾಗಿ ಕಾಡಿತ್ತು, ಚಿಂತೆಗೀಡುಮಾಡಿತ್ತು. ಅಪಾರ ತಾಳ್ಮೆ, ಸಹನೆಗಳ ದ್ರಾವಿಡ್, ಅದನ್ನೆಂದೂ ತೋರಿಸಿಕೊಳ್ಳಲಿಲ್ಲ. ಸೋಲನ್ನೇ ಸವಾಲಾಗಿ ಸ್ವೀಕರಿಸಿದರು. ಆಟಗಾರರ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು, ಒಂದಾಗಿ ಆಡಲು, ತಂಡವಾಗಿ ಸೆಣೆಸಲು ಆಟಗಾರರನ್ನು ಸಜ್ಜುಗೊಳಿಸಿದರು. ಅನುಭವವನ್ನು ಧಾರೆ ಎರೆದು, ಶ್ರಮ ಸುರಿದು, ಆಟಗಾರರು ಆಟದತ್ತ ಮೈ-ಮನ ವಿನಿಯೋಗಿಸುವಂತೆ ನೋಡಿಕೊಂಡರು.

ಅದರ ಫಲವೇ ಮೊನ್ನೆಯ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವು. ಅದು ಅಂತಿಂಥ ಗೆಲುವಲ್ಲ, ಕ್ರಿಕೆಟ್ ಪ್ರಿಯರು ಮೆಲುಕು ಹಾಕುವ ಗೆಲುವು. ಹಾಗೆಯೇ ಇದು ಯಾರೊಬ್ಬರ ವೈಯಕ್ತಿಕ ಗೆಲುವಲ್ಲ, ಇಡೀ ತಂಡದ ಗೆಲುವು. ಬ್ಯಾಂಟಿಂಗ್ ಬಲ, ಬೌಲರ್‍‌ಗಳ ಕೈಚಳಕ, ಟೈಟ್ ಫೀಲ್ಡಿಂಗ್, ಆಟಗಾರರ ಫಿಟ್‌ನೆಸ್, ನಾಯಕತ್ವ, ಕೋಚ್- ಎಲ್ಲವೂ ಒಂದಾದ, ಒಗ್ಗಟ್ಟಿನ ಆಟಕ್ಕೆ ಸಿಕ್ಕ ಜಯ ಅದು.

Advertisements

ಆರಂಭಿಕ ಆಟಗಾರ ರೋಹಿತ್ ಶರ್ಮಾ, ಅದರ ಹಿಂದಕ್ಕೆ ರಿಷಬ್ ಪಂತ್, ಸೂರ್ಯಕುಮಾರ್ ಯಾದವ್- ಬಹಳಬೇಗ ನಿರ್ಗಮಿಸಿ ತಂಡ ತಡವರಿಸುತ್ತಿದ್ದಾಗ, ಆಸರೆಯಾಗಿ ನಿಂತವರು ವಿರಾಟ್ ಕೊಹ್ಲಿ. ಅವರಿಗೆ ಬೆಂಬಲವಾಗಿ ಬಂದವರು ಆಕ್ಷರ್ ಪಟೇಲ್ ಮತ್ತು ಶಿವಂ ದುಬೆ. ಹಾಗೆ ನೋಡಿದರೆ, ಇಡೀ ತಂಡ ಪೇರಿಸಿದ 176, ಬೃಹತ್ ಮೊತ್ತವಲ್ಲ. ದಕ್ಷಿಣ ಆಫ್ರಿಕಾ ತಂಡಕ್ಕೆ ಅದೇನು ಸವಾಲಿನದಲ್ಲ. 15 ಓವರ್ ಗಳಲ್ಲಿ 147 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಬಾಲಿಗೊಂದು ರನ್ ಗಳಿಸಿ, ಗೆಲುವಿನತ್ತ ಹೆಜ್ಜೆ ಹಾಕಿತ್ತು. 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸುತ್ತಿದ್ದ ಕ್ಲಾಸೆನ್, ಜೊತೆಗೆ ಡೇವಿಡ್ ಮಿಲ್ಲರ್ ಮಿಂಚಿನ ಹೊಡೆತಗಳು ಗೆಲುವಿನ ದಡ ಮುಟ್ಟಿಸುವುದರಲ್ಲಿ ಅನುಮಾನವಿಲ್ಲ ಎಂಬುದು ಖಾತ್ರಿಯಾಗಿತ್ತು. ಅದಾಗಲೇ ಭಾರತೀಯರ ಮುಖ ಬಾಡಿ, ನಿರಾಶೆಯ ಮೋಡ ಕವಿದಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸ್ವಾಮೀಜಿಗಳಿಗೆ ಈ ಭಂಡತನ ಬಂದದ್ದಾದರೂ ಎಲ್ಲಿಂದ?

ಇಂತಹ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ರಿಷಬ್ ಪಂತ್‌ಗೆ ಕ್ಯಾಚಿತ್ತು ಕ್ಲಾಸೆನ್ ಔಟಾದರು. ಅಲ್ಲಿಂದ ಆಟ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಾ ಸಾಗಿತು. ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸತೊಡಗಿತು.  ಕೊನೆಯ ಓವರ್‍‌ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ ಬೇಕಾದ್ದು ಕೇವಲ 16 ರನ್, ಕ್ರೀಸ್ ನಲ್ಲಿದ್ದ ಕಲಿ ಡೇವಿಡ್ ಮಿಲ್ಲರ್. ಯಾವುದೇ ಕಾರಣಕ್ಕೂ ಭಾರತ ಗೆಲ್ಲುವ ಛಾನ್ಸ್ ಇಲ್ಲವೆಂಬುದು ಖಾತ್ರಿಯಾಗಿತ್ತು. ಆಗ ನಡೆಯಿತು ಚಮತ್ಕಾರ. ಕೊನೆಯ ಓವರ್‌ನ ಮೊದಲ ಬಾಲ್‌ನಲ್ಲಿಯೇ ಮಿಲ್ಲರ್ ಬೌಂಡರಿ ಎತ್ತಿದರು. ಅಲ್ಲಿ, ಬೌಂಡರಿ ಲೈನ್‌ನಲ್ಲಿ ಐದು, ಐದೂವರೆ ಅಡಿಯಿದ್ದ ಆಟಗಾರ ನಿಂತಿದ್ದರೆ, ಅದು ಖಂಡಿತ ಸಿಕ್ಸರ್. ಆದರೆ ಅದನ್ನು ಕ್ಲಾಸಿಕ್ ಕ್ಯಾಚನ್ನಾಗಿ ಪರಿವರ್ತಿಸಿದವನು ಸೂರ್ಯಕುಮಾರ್ ಯಾದವ್. ಅದೊಂದು ಕ್ಯಾಚ್, ಆಟದ ಗತಿಯನ್ನೇ ಬದಲಿಸಿತು. ಪಂದ್ಯದ ಫಲಿತಾಂಶವನ್ನೇ ಬರೆಯಿತು. ಬಹಳ ಕಾಲ ನೆನಪಿನಲ್ಲುಳಿಯುವಂತೆ ಮಾಡಿತು.

ಗೆಲುವು ಎನ್ನುವುದು ಹೊಸ ಹುರುಪಿಗೆ, ಚೈತನ್ಯಕ್ಕೆ ಕಾರಣವಾಗುವ ಮದ್ದು. ಅಂದು ಟ್ರೋಫಿಯನ್ನು ಎತ್ತಿ ಹಿಡಿದ ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಅದು ಎದ್ದು ಕಾಣುತ್ತಿತ್ತು. ಸಂಭ್ರಮವೇ ಅಲ್ಲಿ ಮನೆಮಾಡಿತ್ತು. ಅಂತಹ ಸಂಭ್ರಮದಲ್ಲಿ ರಾಹುಲ್ ದ್ರಾವಿಡ್ ಪಾಲ್ಗೊಂಡರೂ ತಮ್ಮಷ್ಟಕ್ಕೆ ತಾವಿರುವುದು, ದೂರದಲ್ಲಿ ನಿಲ್ಲುವುದು ಅವರ ಸ್ವಭಾವ. ಮೃದು ಮಾತಿನ, ಸೌಮ್ಯ ಸ್ವಭಾವದ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರತಿಮ ಕ್ರಿಕೆಟಿಗ. ಗೆದ್ದಾಗ ಮೆರೆಯದ, ಸೋತಾಗ ಸೊರಗದ ಸ್ಥಿತಪ್ರಜ್ಞ. ಅಂತಹ ದ್ರಾವಿಡ್ ಕೂಡ ಮೊನ್ನಿನ ಗೆಲುವನ್ನು ಮೈ ಚಳಿ ಬಿಟ್ಟು ಸಂಭ್ರಮಿಸಿದರು. ಅವರ ಖುಷಿ, ಕೇಕೆ ಕಂಡವರು, ‘ಅದು ದ್ರಾವಿಡ್ ಅವರ’ ಎಂದು ಬೆರಗಾಗಿದ್ದರು. ಅದು ಅವರ ಶ್ರಮಕ್ಕೆ ಸಲ್ಲಲೇಬೇಕಾದ ಸಮ್ಮಾನ, ಅವರು ಸಂಭ್ರಮಿಸಲೇಬೇಕಾದ ಗಳಿಗೆ.

ಈ ಗೆಲುವಿನ ಬೆನ್ನಿಗೇ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯುತ್ತಿರುವುದು, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜ ಕೂಡ ಟಿ20 ಅಂತಾರಾಷ್ಟ್ರೀಯ ಪಂದ್ಯದಿಂದ ಹಿಂದೆ ಸರಿಯುತ್ತಿರುವುದು ಸಕಾಲಿಕ ನಿರ್ಧಾರ. ಮೂವರು ಪ್ರಮುಖ ಆಟಗಾರರ ವಿದಾಯದಿಂದ ತೆರವಾದ ಸ್ಥಾನವನ್ನು ತುಂಬುವ ಸಮರ್ಥ ಆಟಗಾರರು ಹಲವರಿದ್ದಾರೆ. ಭಾರತದ ಕ್ರಿಕೆಟ್ ತಂಡಕ್ಕೆ ಹೊಸ ನೀರು ಬರುತ್ತಿರಲಿ, ಹಳಬರ ಆಟ ಬೆನ್ನಿಗಿರಲಿ, ಆ ನೆನಪು ಮರುಕಳಿಸುತ್ತಲಿರಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X