ಭರವಸೆಯಂತೆ ಭದ್ರಾ ಮೇಲ್ದಂಡೆ ಕಾಮಗಾರಿಗೆ ₹5,300 ಕೋಟಿ ಅನುದಾನ ಶೀಘ್ರ ಬಿಡುಗಡೆಯಾಗಲಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಗೆ ಆಗಮಿಸಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತರಾಮನ್ ಜತೆ ರಾಜ್ಯದ ಸಂಸದರ ಸಭೆ ನಡೆಸಿದ್ದು, ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವಿಚಾರ ಮೊದಲು ಪ್ರಸ್ತಾಪ ಮಾಡಲಾಯಿತು’ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
“ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸಂಸದ ಬಸವರಾಜ್ ಬೊಮ್ಮಾಯಿ ಮತ್ತು ನಾನು ಸ್ಪಷ್ಟವಾಗಿ ವಿವರಣೆ ನೀಡಿದೆವು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ನೀರಾವರಿ ಇಲಾಖೆಗೆ ಕೆಲ ತಾಂತ್ರಿಕ ವಿವರಣೆ ಕೇಳಿದ್ದೇವೆ. ಆ ಮಾಹಿತಿ ಎಷ್ಟು ಬೇಗ ಕೊಡುತ್ತೀರೋ ಅಷ್ಟು ಬೇಗ ₹5,300 ಕೋಟಿ ಅನುದಾನ ಬಿಡುಗಡೆ ಆಗಲಿದೆಯೆಂದು ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಿದರು.
“ರಾಜ್ಯ ಸರ್ಕಾರ ತಾಂತ್ರಿಕ ವಿವರಣೆ ನೀಡಿದ ಕೂಡಲೇ ಯೋಜನೆಗೆ ₹5,300 ಕೋಟಿ ಬಿಡುಗಡೆಯಾಗುತ್ತದೆ. ಆದರೆ ರಾಜ್ಯ ಸರ್ಕಾರ ಈ ವರ್ಷ ₹800 ಕೋಟಿ ಮೀಸಲಿಟ್ಟಿದೆ. ಆದರೆ, ಇದು ಬಹಳ ಕಡಿಮೆ. ಹಿಂದೆ ಬಿಜೆಪಿ ಸರ್ಕಾರ ಸಾವಿರ ಕೋಟಿ ಲೆಕ್ಕದಲ್ಲಿ ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ನೂರರ ಲೆಕ್ಕದಲ್ಲಿ ಕೊಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಶೋಷಿತ ಸಮಾಜದ ವಿದ್ಯಾರ್ಥಿಗಳ ಕುಂದುಕೊರತೆ ಮತ್ತು ಜಾಗೃತಿ ಕಾರ್ಯಕ್ರಮ
ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ ಮುರುಳಿ, ಮುಖಂಡರುಗಳಾದ ಜಿ ಟಿ ಸುರೇಶ್, ಸಂಪತ್ ಕುಮಾರ್, ವೆಂಕಟೇಶ್ ಯಾದವ್, ನವೀನ್ ಚಾಲುಕ್ಯ, ಮಾಧುರಿ ಗಿರೀಶ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಇದ್ದರು.
